ಎಸಿಬಿ ದಾಳಿ; ಮೂವರು ಅಧಿಕಾರಿಗಳ ಅಮಾನತು
ಬೆಂಗಳೂರು, ಆಗಸ್ಟ್ 30 : ಎಸಿಬಿ ಅಧಿಕಾರಿಗಳು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮೂವರು ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದರು. ದಾಳಿಯ ವೇಳೆ ಒಟ್ಟು 32 ಲಕ್ಷ ರೂ. ಹಣ ಪತ್ತೆಯಾಗಿತ್ತು. ಕರ್ನಾಟಕ ಸರ್ಕಾರ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಗುರುವಾರ ಎಸಿಬಿ ಅಧಿಕಾರಿಗಳು ಮಂಡಳಿ ಪ್ರಧಾನ ವ್ಯವಸ್ಥಾಪಕ ನಾಗೇಶ್, ಸಹಾಯಕ ವ್ಯವಸ್ಥಾಪಕರಾದ ಮಂಜುಳಾ ಮತ್ತು ಸುಬ್ಬಯ್ಯ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಮೂವರು ಅಧಿಕಾರಿಗಳ ಮನೆಗಳಲ್ಲಿ ಪತ್ತೆಯಾಗಿತ್ತು.
ಪ್ರಧಾನ ವ್ಯವಸ್ಥಾಪಕ ನಾಗೇಶ್ ಮನೆಯಲ್ಲಿ 32 ಲಕ್ಷ ರೂ., ಸಹಾಯಕ ವ್ಯವಸ್ಥಾಪಕ ಸುಬ್ಬಯ್ಯ ಮನೆಯಲ್ಲಿ 27 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು. ಈಗ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಸಮಾಜ ಕಲ್ಯಾಣ ಸಚಿವ, ಉಪ ಮುಖ್ಯಮಂತ್ರಿ ಗೋವಿಂದ್ ಎಂ. ಕಾರಜೋಳ ಅವರು, "ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಮಾನತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಡದಂತೆ ಆದೇಶಿಸಲಾಗಿದೆ" ಎಂದು ಹೇಳಿದ್ದಾರೆ.
ಸರ್ಕಾರದಿಂದ ಜಮೀನು ಖರೀದಿಸಿ ಅದನ್ನು ಪರಿಶಿಷ್ಟ ಪಂಗಡದ ಭೂರಹಿತ ಪಲಾನುಭವಿಗಳಿಗೆ ಮಂಜೂರು ಮಾಡುವ ಯೋಜನೆಯಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂಬುದು ಆರೋಪ. ಕಳಪೆ ಗುಣಮಟ್ಟದ ಜಮೀನನ್ನು ಮಧ್ಯವರ್ತಿಗಳ ಮೂಲಕ ಖರೀದಿ ಮಾಡಿ, ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದ ಅಕ್ರಮ ಇದಾಗಿದೆ.












Click it and Unblock the Notifications