ಬಸ್ ಪ್ರಯಾಣಿಕರಿಗೆ ಭರ್ಜರಿ ಸುದ್ದಿ: ಮುಂಬೈಗೆ ಸಿಗಲಿದೆ ಎಸಿ ಸ್ಲೀಪರ್ ಬಸ್!
ಹುಬ್ಬಳ್ಳಿ: ಪ್ರಯಾಣಿಕರ ಬೇಡಿಕೆ ಹಿನ್ನೆಲೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿ & ಮುಂಬೈ ನಡುವೆ ಎಸಿ ಸ್ಲೀಪರ್ ಬಸ್ ಸಂಚಾರ ಮತ್ತೆ ಆರಂಭಿಸಲಾಗಿದೆ. ಈ ಸೇವೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತದೆ. ಇದೇ ಕಾರಣಕ್ಕೆ ಎಸಿ ಸ್ಲೀಪರ್ ಬಸ್ ಸೇವೆ ಮತ್ತೆ ಆರಂಭ ಮಾಡಿ ಅಂತಾ ಬೇಡಿಕೆ ಸಲ್ಲಿಸಲಾಗಿತ್ತು. ಈ ಬೇಡಿಕೆಗೆ ಸ್ಪಂದಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತೆ ಹುಬ್ಬಳ್ಳಿ & ಮುಂಬೈ ನಡುವೆ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭಿಸಲು ಮುಂದಾಗಿದ್ದಾರೆ.
ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾ ಅಧಿಕಾರಿ ಎಚ್. ರಾಮನಗೌಡರ ಅವರು, ಹುಬ್ಬಳ್ಳಿ & ಮುಂಬೈ ನಡುವೆ ಎಸಿ ಸ್ಲೀಪರ್ ಬಸ್ ಸಂಚಾರ ಮತ್ತೆ ಆರಂಭಿಸಿದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂದಹಾಗೆ ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಮುಂಬೈ ನಡುವೆ ಈ ಹಿಂದೆ ಎಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರಯಾಣಿಕರ ಕೊರತೆ ಕಾರಣಕ್ಕೆ ಬಸ್ ಸೇವೆ ದಿಢೀರ್ ನಿಂತು ಹೋಗಿತ್ತು. ಆದರೆ ಈ ಕುರಿತು ಬಸ್ ಪ್ರಯಾಣಿಕರು ಮನವಿ ಸಲ್ಲಿಸಿ, ಬಸ್ ಸೇವೆಯನ್ನು ಮತ್ತೆ ಆರಂಭ ಮಾಡಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದೀಗ ಆ ಮನವಿಯ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಬಸ್ ಸೇವೆ ಮತ್ತೆ ಆರಂಭಿಸಲು ಮುಂದಾಗಿದ್ದಾರೆ.

ಸೆಪ್ಟೆಂಬರ್ 2ರಿಂದ ಸೇವೆ ಆರಂಭ
ಗೌರಿ & ಗಣೇಶ ಹಬ್ಬ ಸಮೀಸುತ್ತಿದ್ದು, ಗಣೇಶ ಚತುರ್ಥಿಗೆ ಮೊದಲು & ಆ ನಂತರ ಅವಧಿಯಲ್ಲಿ ಕೂಡ, ಹುಬ್ಬಳ್ಳಿ ಹಾಗೂ ಮುಂಬೈ ನಡುವೆ ಹೆಚ್ಚಿನ ಜನರ ಓಡಾಟವನ್ನ ನಿರೀಕ್ಷಿಸಲಾಗಿದೆ. ಈ ಹಿನ್ನೆಲೆ ಹುಬ್ಬಳ್ಳಿ & ಮುಂಬೈ ನಡುವೆ ಎಸಿ ಸ್ಲೀಪರ್ ಬಸ್ ಸಂಚಾರವನ್ನ ಪುನರಾರಂಭಿಸಿ ಗುಡ್ ನ್ಯೂಸ್ ನೀಡಲಾಗಿದೆ. ಈ ಸೇವೆ ಮತ್ತೆ ಆರಂಭ ಆಗುತ್ತಿರುವ ಕಾರಣಕ್ಕೆ, ಮೊದಲನೇ ಬಸ್ ಹುಬ್ಬಳ್ಳಿ ಟು ಮುಂಬೈಗೆ ಸೆಪ್ಟೆಂಬರ್ 2ರ ಸೋಮವಾರ ಸಂಚಾರ ಮಾಡಲಿದೆ. ಮತ್ತೊಂದು ಕಡೆ ಮುಂಬೈ ನಗರದಿಂದ ಹುಬ್ಬಳ್ಳಿಗೆ ಸೆಪ್ಟೆಂಬರ್ 3 ರಂದು ಮಂಗಳವಾರ ವಾಪಸ್ ಬರಲಿದೆ.
ಬಸ್ ವೇಳಾಪಟ್ಟಿ ಹೀಗಿದೆ ನೋಡಿ!
ಹುಬ್ಬಳ್ಳಿಯಿಂದ ಮುಂಬೈಗೆ ಹೊರಡುವ ಬಸ್ ಗೋಕುಲ ರಸ್ತೆ ಬಸ್ ನಿಲ್ದಾಣದ ಮೂಲಕ ರಾತ್ರಿ 8:30ಕ್ಕೆ ಹೊರಡುತ್ತದೆ. ಧಾರವಾಡದ ಹೊಸ ಬಸ್ ನಿಲ್ದಾಣ (9-30), ಬೆಳಗಾವಿ (10-30), ಕೊಲ್ಲಾಪುರ, ಪುಣೆ ಮಾರ್ಗವಾಗಿ ಮರುದಿನ ಬೆಳಗ್ಗೆಯೇ 8ಕ್ಕೆ ಮುಂಬೈ ಸೆಂಟ್ರಲ್ ಬಸ್ ನಿಲ್ದಾಣ ತಲುಪುತ್ತದೆ. ಮುಂಬೈನಿಂದ ಹುಬ್ಬಳ್ಳಿಗೆ ಬರುವ ಬಸ್ ಸೆಂಟ್ರಲ್ ಬಸ್ ನಿಲ್ದಾಣದಿಂದ ರಾತ್ರಿ 8-30ಕ್ಕೆ ಹೊರಡುತ್ತೆ. ಮರುದಿನ ಬೆಳಗ್ಗೆ ಬೆಳಗಾವಿಗೆ 6-30ಕ್ಕೆ, ಧಾರವಾಡ 7:50 ಗಂಟೆ ಹಾಗೂ ಹುಬ್ಬಳ್ಳಿಗೆ 8-30ಕ್ಕೆ ಆಗಮಿಸುತ್ತದೆ.
ಮುಂಗಡ ಬುಕಿಂಗ್ ಬಗ್ಗೆ ಮಾಹಿತಿ
https://www.ksrtc.in ಅಥವಾ KSRTC Mobile App, ಗೋಕುಲ ರಸ್ತೆ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣ, ಮತ್ತಿತರ ಪ್ರಮುಖ ಬಸ್ ನಿಲ್ದಾಣದಲ್ಲಿ ಮುಂಗಡ ಬುಕ್ಕಿಂಗ್ ಕೂಡ ಮಾಡಬಹುದಾಗಿದೆ. ಒಂದೇ ಟಿಕೆಟ್‌ನಲ್ಲಿ 04 ಅಥವಾ ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇಕಡಾ 5ರಷ್ಟು ರಿಯಾಯಿತಿ ಸಿಗುತ್ತದೆ. ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇ. 10 ರಿಯಾಯಿತಿ ನೀಡಲಾಗುತ್ತದೆ.











Click it and Unblock the Notifications