ABP-CVoter survey: ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್, ಕರಾವಳಿ ಕರ್ನಾಟಕದಲ್ಲಿ ಬಿಜೆಪಿಗೆ ಜೈ!
ಬೆಂಗಳೂರು, ಮೇ. 07: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ, ಎಬಿಪಿ ನ್ಯೂಸ್ - ಸಿವೋಟರ್ ಸಹಯೋಗದೊಂದಿಗೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಭಾನುವಾರ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಆಡಳಿತರೂಢ ಬಿಜೆಪಿಗೆ ಭಾರೀ ಮುಖಭಂಗವಾಗಲಿದ್ದು, ಪ್ರತಿಪಕ್ಷ ಕಾಂಗ್ರೆಸ್ ಈ ಬಾರಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ತಿಳಿಸಿದೆ.
ಕರ್ನಾಟಕ ವಿಧಾನಸಭೆಯ ಒಟ್ಟು 224 ಸ್ಥಾನಗಳಲ್ಲಿ ಎಬಿಪಿ-ಸಿವೋಟರ್ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 73 ರಿಂದ 85 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಪ್ರತಿಪಕ್ಷ ಕಾಂಗ್ರೆಸ್ 110 ರಿಂದ 122 ಸ್ಥಾನಗಳನ್ನು ಮತ್ತು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ 21 ರಿಂದ 29 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದಿದೆ.

ಪ್ರಸ್ತುತ 224 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 119 ಸ್ಥಾನಗಳನ್ನು ಹೊಂದಿದೆ, ಕಾಂಗ್ರೆಸ್ 75 ಸ್ಥಾನಗಳನ್ನು ಹೊಂದಿದ್ದು, ಜೆಡಿಎಸ್ 28 ಶಾಸಕರನ್ನು ಹೊಂದಿದೆ. ಎರಡು ಸ್ಥಾನಗಳು ಖಾಲಿ ಉಳಿದಿವೆ. ಈ ಬಾರಿ ಕರ್ನಾಟಕದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ.
ಪ್ರದೇಶವಾರು ಸಮೀಕ್ಷೆಯ ಫಲಿತಾಂಶ ಪ್ರಕಟಿಸಿರುವ ಎಬಿಪಿ ನ್ಯೂಸ್ - ಸಿವೋಟರ್ ಸಮೀಕ್ಷೆಯು ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದರೇ, ಆಡಳಿತರೂಢ ಬಿಜೆಪಿ ಕರಾವಳಿ ಕರ್ನಾಟಕದಲ್ಲಿ ತನ್ನ ಛಾಪು ಮೂಡಿಸಲಿದೆ ಎಂದು ಭವಿಷ್ಯ ನುಡಿದಿದೆ. ಎರಡೂ ಪ್ರದೇಶಗಳಲ್ಲಿ ಜೆಡಿಎಸ್‌ನ ಪ್ರಭಾವ ಕಡಿಮೆಯಿದೆ.
ಮಧ್ಯ ಕರ್ನಾಟಕ
35 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಮಧ್ಯ ಕರ್ನಾಟಕದ ಪ್ರದೇಶದಲ್ಲಿ, ಸಮೀಕ್ಷೆಯ ಫಲಿತಾಂಶಗಳು ಬಿಜೆಪಿ 10 ರಿಂದ 14 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಕಾಂಗ್ರೆಸ್ 35 ಸ್ಥಾನಗಳಲ್ಲಿ 20 ರಿಂದ 24 ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ. ಇನ್ನು, ಜೆಡಿಎಸ್ ಒಂದು ಅಥವಾ ಎರಡು ಸ್ಥಾನಗಳಿಗೆ ತೃಪ್ತಿ ಪಡಬೇಕಿದೆ. ಇತರ ಪಕ್ಷಗಳು ಇಲ್ಲಿ ಒಂದು ಸ್ಥಾನವನ್ನು ಪಡೆಯಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.
ಇನ್ನು, ಮಧ್ಯ ಕರ್ನಾಟಕದ ಪ್ರದೇಶದಲ್ಲಿ ವೋಟ್ ಶೇರ್ ನೋಡುವುದಾದರೇ, ಕಾಂಗ್ರೆಸ್ 42%, ಬಿಜೆಪಿ 37% ಮತ್ತು ಜೆಡಿಎಸ್ 12% ಅಷ್ಟು ಮತಗಳನ್ನು ಗಳಿಸಲಿವೆ ಎಂದು ವರದಿ ಹೇಳಿದೆ.
ಕರಾವಳಿ ಕರ್ನಾಟಕ
21 ಸ್ಥಾನಗಳನ್ನು ಹೊಂದಿರುವ ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ 13 ರಿಂದ 17 ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಈ ಭಾಗದಲ್ಲಿ ಹೊರಹೊಮ್ಮಲಿದೆ. ಕಾಂಗ್ರೆಸ್ 4 ರಿಂದ 8 ಸ್ಥಾನಗಳನ್ನು ಪಡೆಯಬಹುದು, ಆದರೆ ಪ್ರಾದೇಶಿಕ ಪಕ್ಷ ಇಲ್ಲಿ ಯಾವುದೇ ಸ್ಥಾನ ಪಡೆಯುವ ಸಂಭವವಿಲ್ಲ ಎಂದು ಸಮೀಕ್ಷೆ ವರದಿ ತಿಳಿಸಿದೆ. ಮತ ಹಂಚಿಕೆ ವಿಷಯಕ್ಕೆ ಬಂದರೇ, ಬಿಜೆಪಿ 46% ಪಡೆಯಲಿದ್ದು, ಕಾಂಗ್ರೆಸ್ 37% ಮತಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಫಲಿತಾಂಶ ನೀಡಿದೆ.












Click it and Unblock the Notifications