ದಾವಣಗೆರೆ ಬೈಎಲೆಕ್ಷನ್ ಬೆನ್ನಲ್ಲೇ ಭಿನ್ನಮತ ಸ್ಫೋಟ: KPCC ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಈಗ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಬಿರುಗಾಳಿ ಎಬ್ಬಿಸಿದೆ. ಚುನಾವಣಾ ಕಣದಲ್ಲಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡಿರುವ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಟಿಕೆಟ್ ಹಂಚಿಕೆ ಮತ್ತು ಬಂಡಾಯದ ಕಿಡಿ
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಅಬ್ದುಲ್ ಜಬ್ಬಾರ್ ಅವರಿಗೆ ಪಕ್ಷವು ಟಿಕೆಟ್ ನಿರಾಕರಿಸಿತ್ತು. ಅವರ ಬದಲಿಗೆ ಸಮರ್ಥ್ ಶಾಮನೂರು ಅವರಿಗೆ ಹೈಕಮಾಂಡ್ ಮಣೆ ಹಾಕಿತ್ತು. ಈ ನಿರ್ಧಾರವು ಸಚಿವ ಜಮೀರ್ ಅಹ್ಮದ್ ಖಾನ್ ಬಣದ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಟಿಕೆಟ್ ತಪ್ಪಿದ ಬೇಸರದಲ್ಲಿದ್ದ ಜಬ್ಬಾರ್ ಅವರು ಅಭ್ಯರ್ಥಿ ಸಮರ್ಥ್ ಪರವಾಗಿ ಪ್ರಚಾರ ಕಾರ್ಯದಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಬೆಂಬಲ ಸೂಚಿಸಿ, ಪ್ರತ್ಯಕ್ಷವಾಗಿ ಮೌನಕ್ಕೆ ಶರಣಾಗಿದ್ದರು.

ಸಚಿವ-ಶಾಸಕರ ಬಹಿರಂಗ ಅಸಮಾಧಾನ
ಕಾಂಗ್ರೆಸ್‌ನ ಮುಸ್ಲಿಂ ಶಾಸಕರು ನಡೆಸಿದ ಜಂಟಿ ಸುದ್ದಿಗೋಷ್ಠಿಯು ಈ ಭಿನ್ನಮತಕ್ಕೆ ಮತ್ತಷ್ಟು ತುಪ್ಪ ಸುರಿದಿತ್ತು. ಪರೋಕ್ಷವಾಗಿ ಸಚಿವ ಜಮೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅವರ ನಡೆಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದ ಅಧಿಕೃತ ಅಭ್ಯರ್ಥಿಯ ಪರ ಕೆಲಸ ಮಾಡದ ನಾಯಕರ ವಿರುದ್ಧ ಕ್ರಮಕ್ಕೆ ಒತ್ತಾಯವೂ ಕೇಳಿಬಂದಿತ್ತು.
ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅಬ್ದುಲ್ ಜಬ್ಬಾರ್ ಅವರ ಮೇಲೆ ಶಿಸ್ತು ಕ್ರಮ ಜರುಗಿಸಿ, ಸಸ್ಪೆಂಡ್ ಮಾಡುವ ಸಾಧ್ಯತೆಗಳಿವೆ ಎಂಬ ಸೂಚನೆ ಸಿಗುತ್ತಿದ್ದಂತೆಯೇ ಅವರು ಅಲರ್ಟ್ ಆಗಿದ್ದಾರೆ ಎನ್ನಲಾಗಿದೆ. ಪಕ್ಷ ಕ್ರಮ ಕೈಗೊಳ್ಳುವ ಮುನ್ನವೇ ಗೌರವಯುತವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ ಎನ್ನಲಾಗಿದೆ. ಉಪಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್‌ನ ಅಲ್ಪಸಂಖ್ಯಾತ ನಾಯಕರ ನಡುವಿನ ಈ 'ಶೀತಲ ಸಮರ' ಬೀದಿಗೆ ಬಂದಿರುವುದು ಕೈ ಪಾಳಯಕ್ಕೆ ತೀವ್ರ ಮುಜುಗರ ತಂದಿದೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಈ ಬಂಡಾಯವನ್ನು ಹೇಗೆ ಶಮನಗೊಳಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಟಿಕೆಟ್ ಆಸೆ ಹುಟ್ಟಿಸಿ ಕೈಕೊಟ್ಟರು
ದಾವಣಗೆರೆ ದಕ್ಷಿಣ ಉಪಚುನಾವಣೆಯ ಸೋಲಿನ ಭೀತಿಯಿಂದ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಕೈತಪ್ಪಿದ ವಿಚಾರ ಹಾಗೂ ಪ್ರಚಾರದಿಂದ ದೂರ ಉಳಿದ ಬಗ್ಗೆ ಮಾತನಾಡಿದ್ದಾರೆ. ನಾನು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಮೊದಲು ನನಗೆ ಟಿಕೆಟ್ ನೀಡುವ ಭರವಸೆ ನೀಡಿ ಆಸೆ ಹುಟ್ಟಿಸಿದ್ದೇ ಇದೇ ನಾಯಕರು. ಆದರೆ ಕೊನೆ ಕ್ಷಣದಲ್ಲಿ ನನಗೆ ಅರ್ಹತೆ ಇಲ್ಲ ಎಂಬ ನೆಪವೊಡ್ಡಿ ಟಿಕೆಟ್ ನಿರಾಕರಿಸಿದರು. ಈಗ ಚುನಾವಣೆ ಮುಗಿದ ಮೇಲೆ ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ನನ್ನನ್ನು ಪ್ರಚಾರಕ್ಕೆ ಯಾರೂ ಅಧಿಕೃತವಾಗಿ ಆಹ್ವಾನಿಸಿಲ್ಲ, ಹೀಗಿರುವಾಗ ನಾನೇಕೆ ಹೋಗಲಿ? ಎರಡು ಬಾರಿ ಮಲ್ಲಿಕಾರ್ಜುನ್ ಅವರಿಂದ ಅವಮಾನಕ್ಕೊಳಗಾದರೂ ಸಚಿವ ಜಮೀರ್ ಅಹ್ಮದ್ ಖಾನ್ ಅಲ್ಲಿಗೆ ಹೋಗಿರಬಹುದು. ಆದರೆ ನನಗೆ ಅಂತಹ ಸ್ವಭಾವವಿಲ್ಲ. ಎಲ್ಲಿ ಗೌರವ ಸಿಗುವುದಿಲ್ಲವೋ ಅಲ್ಲಿಗೆ ನಾನು ಹೋಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ನಾವು ಪಕ್ಷದ ವಿರುದ್ಧ ಕೆಲಸ ಮಾಡಿದ್ದೇವೆ ಎಂದು ಹೇಳುವವರು ಮೊದಲು ಅದಕ್ಕೆ ಸಾಕ್ಷಿ ನೀಡಲಿ. ಜಮೀರ್ ಅಹ್ಮದ್ ಪ್ರಚಾರ ಮಾಡಿಲ್ಲ ಎಂಬುದು ಸುಳ್ಳು. ಚುನಾವಣೆ ಮುಗಿದ ಮೇಲೆ ಸೋಲುವ ಭಯದಿಂದ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications