ಸಚಿವ ಎಚ್‌ಸಿ ಮಹದೇವಪ್ಪ 'ಶೂ' ಪ್ರಕರಣ: ಕ್ಷಮೆಯಾಚನೆಗೆ ಎಎಪಿ ಆಗ್ರಹ
ಬೆಂಗಳೂರು, ನವೆಂಬರ್ 08: ರಾಜ್ಯ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ತಮ್ಮ ಗನ್ ಮ್ಯಾನ್ ನಿಂದ ಶೂ ಹಾಕಿಸಿಕೊಳ್ಳುತ್ತಿರುವ ಪ್ರಕರಣವನ್ನು ಆಮ್ ಆದ್ಮಿ ಪಕ್ಷವು (ಎಎಪಿ) ತೀವ್ರವಾಗಿ ಖಂಡಿಸಿದೆ. ಈ ನಿಮಿತ್ತ ಸಚಿವರು ರಾಜ್ಯ ಜನತೆ ಮುಂದೆ ಕೂಡಲೇ ಕ್ಷಮೆ ಕೇಳಬೇಕು ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರು ಪ್ರತಿಪಾದಿಸಿಕೊಂಡು ಬಂದ ಸಾಮಾಜಿಕ ನ್ಯಾಯ, ಸಮಾನತೆಯ ತತ್ವಗಳಿಗೆ ಸಂಪೂರ್ಣ ಎಳ್ಳು ನೀರು ಬಿಟ್ಟು ಅಧಿಕಾರದ ಮದದಿಂದ ಈ ರೀತಿಯ ವರ್ತನೆಗಳನ್ನು ಮಾಡುವುದನ್ನು ರಾಜ್ಯದ ಜನ ಸಹಿಸುವುದಿಲ್ಲ ಎಂದು ಅವರು ಕಿಡಿ ಕಾರಿದರು.

ಮಂತ್ರಿಗಳಾದ ನೀವು ಈ ರೀತಿಯ ವರ್ತನೆ ತೋರಿದ್ದೀರಿ. ಹೀಗಾದರೆ ಶೋಷಣೆ ಒಳಗಾಗಿರುವ ಸಮುದಾಯಗಳು ಎಷ್ಟರಮಟ್ಟಿಗೆ ನಿಮ್ಮಿಂದ ನ್ಯಾಯವನ್ನು ಪಡೆದುಕೊಳ್ಳುತ್ತವೆ ಎಂಬ ಪ್ರಶ್ನೆ ಎದ್ದಿದೆ. ನಿಮ್ಮಂತಹ ಬಲಿತ, ದೂರ್ತ ರಾಜಕಾರಣಿಗಳು ಈಗಾಗಲೇ ರಾಜಕಾರಣದಿಂದ ಹೆಸರಿಲ್ಲದೆ ಅಳಿಸಿ ಹೋಗಿದ್ದಾರೆ.
ಮುಂಬರುವ ದಿವಸಗಳಲ್ಲಿ ಇದೇ ಸಾಲಿನಲ್ಲಿ ತಾವು ಸಹ ಅಳಿಸಿ ಹೋಗುವ ಮೊದಲು ನಿಮ್ಮ ಈ ಕೃತ್ಯಕ್ಕೆ ಬಳಸಿಕೊಂಡ ಆ ಪೊಲೀಸ್ ಗನ್ ಮ್ಯಾನ್ ಮುಂದೆ ಹಾಗೂ ರಾಜ್ಯದ ಜನತೆಯ ಮುಂದೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಈ ಮೂಲಕ ಆದ ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಮೋಹನ್ ದಾಸರಿ ಆಗ್ರಹಿಸಿದರು.
ಘಟನೆಯ ವಿವರಣೆ
ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿರುವ ಎಚ್‌ಸಿ ಮಹಾದೇವಪ್ಪ ಅವರು ಬುಧವಾರ ಧಾರವಾಡದ ಡಿಸಿ ಕಾಂಪೌಂಡ್ ಬಳಿ ಇರುವ ಗೌರಿ ಶಂಕರ್ ಹಾಸ್ಟೆಲ್ ಭೇಟಿ ನೀಡಿದ್ದರು. ಅಡುಗೆ ಮನೆಗೆ ತೆರಳುವಾಗ ಶೂ ಬಿಚ್ಚಿ ಒಳನಡೆದಿದ್ದರು. ಹಾಸ್ಟೇಲ್ ಕೋಣೆ, ಅಡುಗೆ ಮನೆ ಪರಿಶೀಲನೆ ಮಾಡಿ ಮತ್ತೆ ಹೊರ ಬಂದಾಗ ಸಚಿವರ ಬೆಂಗಾವಲು ಸಿಬ್ಬಂದಿ ಅವರ ಶೂ ಹಾಕಿದ್ದರು. ಸಿಬ್ಬಂದಿಯಿಂದ ಶೂ ಹಾಕಿಸಿಕೊಂಡ ಎಚ್‌ಸಿ ಮಹಾದೇವಪ್ಪ ಅವರ ಈ ನಡೆ ತೀವ್ರ ಚರ್ಚೆಗೆ ಗುರಿಯಾಗಿದೆ. ಎಎಪಿಯು ಸಚಿವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.












Click it and Unblock the Notifications