ಕೆಪಿಎಸ್‌ಸಿ ನೇಮಕಾತಿ ರದ್ದು ಸ್ವಾಗತಿಸಿದ ಎಎಪಿ
ಬೆಂಗಳೂರು, ಆ.7 : 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ರದ್ದುಪಡಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಆಮ್ ಆದ್ಮಿ ಪಕ್ಷ ಸ್ವಾಗತಿಸಿದೆ. ನೇಮಕಾತಿಯನ್ನು ರದ್ದುಗೊಳಿಸುವ ಮೂಲಕ ಕೆಪಿಎಸ್‌ಸಿಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ ಎಂದು ಪಕ್ಷ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರದ ನಿರ್ಧಾರದ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕ, 2011 ರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೆಪಿಎಸ್‌ಸಿಯ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ನಡೆಸಿದ್ದರು. ಈ ಬಗ್ಗೆ ಸರ್ಕಾರ ಸಿಐಡಿ ತನಿಖೆ ನಡೆಸಿತ್ತು. [ಸರ್ಕಾರದ ನಿರ್ಧಾರವೇನು?]

ಅಕ್ರಮದ ಬಗ್ಗೆ ಸಿಐಡಿ ನೀಡಿದ ವರದಿ ಆಧಾರದ ಮೇಲೆ ಮುಖ್ಯ ಮಂತ್ರಿಗಳು ಮತ್ತು ಅವರ ಸಂಪುಟ ದಿಟ್ಟ ನಿರ್ಧಾರ ಕೈಗೊಂಡು ನೇಮಕಾತಿ ಆದೇಶವನ್ನು ರದ್ದುಗೊಳಿಸಿದೆ. ಸರ್ಕಾರದ ಈ ಕ್ರಮವನ್ನು ಆಮ್ ಆದ್ಮಿ ಪಕ್ಷವು ಸ್ವಾಗತಿಸುತ್ತದೆ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. [ಸಚಿವ ಸಂಪುಟ ಸಭೆಯ ನಿರ್ಣಯಗಳು]
ಸರ್ಕಾರದ ಈ ಕ್ರಮದಿಂದ ಅರ್ಹರಾಗಿರುವ ಮತ್ತು ಯಾವುದೇ ರೀತಿಯ ಅಕ್ರಮ ಮಾಡದಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎನ್ನುವುದು ನಿಜ. ಆದರೆ, ರಾಜ್ಯದ ಸಮಷ್ಟಿಯ ದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಕ್ರಮ ಸರಿಯಾದುದು ಮತ್ತು ನೈತಿಕವಾದದ್ದು ಎಂದು ಪಕ್ಷವು ಭಾವಿಸುತ್ತದೆ ಎಂದು ಸ್ಪಷ್ಟನೆ ನೀಡಲಾಗಿದೆ.
ವಯೋಮಿತಿ ಸಡಲಿಸಿ 2011ರ ಎಲ್ಲಾ ಅಭ್ಯರ್ಥಿಗಳಿಗೂ ಮತ್ತೊಮ್ಮೆ ಪರೀಕ್ಷೆ ಬರೆಯಲು ಅನುವುಮಾಡಿಕೊಡುವುದರಿಂದ ಎಲ್ಲರಿಗೂ ನ್ಯಾಯ ದೊರೆತಂತಾಗುತ್ತದೆ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರರಹಿತ ಆಡಳಿತಕ್ಕೆ ಮುನ್ನುಡಿ ಬರೆಯಲಿದೆ ಎಂದು ಪಕ್ಷದ ಮುಖಂಡರಾದ ರವಿ ಕೃಷ್ಣ ರೆಡ್ಡಿಯವರು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications