ಹುಲಿ ಉಗುರು ವಿವಾದ: ನಟ ದರ್ಶನ್, ಜಗ್ಗೇಶ್, ನಿಖಿಲ್ ಬಂಧಿಸಿ!
ಬೆಂಗಳೂರು, ಅಕ್ಟೋಬರ್26: ರಾಜ್ಯದಲ್ಲಿ ಹುಲಿ ಉಗುರು ವಿವಾದ ಹೆಚ್ಚಾಗಿ ಚರ್ಚೆಯಾಗುತ್ತಿದ್ದು, ಕಾನೂನು ಬಾಹಿರವಾಗಿ ಹುಲಿ ಉಗುರು ಇಟ್ಟುಕೊಂಡಿರುವವರನ್ನೆಲ್ಲಾ ಬಂಧಿಸಬೇಕು. ನಟ ದರ್ಶನ್, ಜಗ್ಗೇಶ್, ನಿಖಿಲ್ ಅವರನ್ನು ಬಂಧಿಸಿ, ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಮನಗರವನ್ನು ಬೆಂಗಳೂರಿಗೆ ಸೇರಿಸಲು ವಿರೋಧ ವ್ಯಕ್ತಪಡಿಸಿದ ಅವರು, ಕುಮಾರಸ್ವಾಮಿಯವರು 110 ಹಳ್ಳಿಗಳನ್ನು ಬಿಬಿಎಂಪಿ ವಲಯಕ್ಕೆ ಸೇರಿಸಿದರು. ಹೆಚ್‌ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರಿಗೆ ರಿಯಲ್ ಸ್ಟೇಟ್ ಮಾತ್ರ ಗೊತ್ತು, ಅಭಿವೃದ್ಧಿ ಗೊತ್ತಿಲ್ಲ. ಅಂದು ಬಿಬಿಎಂಪಿ ವಲಯಕ್ಕೆ ಸೇರಿದ 110 ಹಳ್ಳಿಗಳಿಗೆ ಇಂದಿಗೂ ಸರಿಯಾದ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 28 ಮತ್ತು 29ರಂದು ಸಿ ಗ್ರೂಪಿನ ಹುದ್ದೆ ನೇಮಕಾತಿಗೆ ಪರೀಕ್ಷೆ ನಡೆಸುತ್ತಿದ್ದು, ಈ ಪರೀಕ್ಷೆಗೆ ಹಾಜರಾಗಲು ಪರೀಕ್ಷಾರ್ಥಿಗಳಿಗೆ ವಸ್ತ್ರ ಸಂಹಿತೆ ವಿಧಿಸಲಾಗಿದೆ. ಇದು ಕಾನೂನು ಬಾಹಿರ. ಅಕ್ಟೋಬರ್ 28 ಮತ್ತು 29ರ ಪರೀಕ್ಷೆಗೆ ಸೂಚಿಸಿರುವ ವಸ್ತ್ರ ಸಂಹಿತೆಯನ್ನು ಹಿಂಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಗ್ರಹಿಸಿದರು.
ನವೆಂಬರ್ 5 ರಂದು ಒಂದೇ ದಿನ ಮೂರು ಪರೀಕ್ಷೆ ನಡೆಸುತ್ತಿರುವುದರಿಂದ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತದೆ. ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಇವರೆಲ್ಲ ಪರೀಕ್ಷೆ ಬರೆಯದೆ ದುಡ್ಡು ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ ಎನಿಸುತ್ತದೆ. ತಕ್ಷಣವೇ ರಾಜ್ಯ ಸರ್ಕಾರ ಪರೀಕ್ಷೆಯನ್ನು ಮುಂದೂಡಬೇಕು. ಬುರ್ಖಾ ಹಾಕಿ ಬರುವ ಮುಸ್ಲಿಂ ಹೆಣ್ಣು ಮಕ್ಕಳಿಗೆ ಒಂದೂವರೆ ಗಂಟೆ ಮುಂಚೆ ಬರುವಂತೆ ಹೇಳಿದ್ದಾರೆ. ದೂರದ ಊರಿನಿಂದ ಬರುವವರು ತಡವಾಗಿ ಬಂದರೆ ಅವರ ಕತೆ ಏನು? ಈ ನಿಯಮಗಳನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
700 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಸುಮಾರು 2.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಪರೀಕ್ಷಾರ್ಥಿಗಳಿಗೆ ವಿಚಿತ್ರ ನಿಮಯಗಳನ್ನು ಮಾಡಲಾಗಿದೆ. ಅದರಲ್ಲೂ, ಮಹಿಳೆಯರಿಗೆ ತಾಳಿ ಸೇರಿ ಎಲ್ಲಾ ಆಭರಣಗಳನ್ನು ಬಿಚ್ಚಿಟ್ಟು ಬರುವಂತೆ ಸೂಚಿಸಿದೆ. ಪೂರ್ತಿ ತೋಳಿನ ಬಟ್ಟೆ ಧರಿಸಬಾರದು, ಜೀನ್ಸ್ ಧರಿಸಬಾರದು ಎಂದಿದ್ದು, ಅರ್ಧ ತೋಳಿನ ಬಟ್ಟೆ ಧರಿಸಲು ಸೂಚಿಸಿದ್ದಾರೆ. ಇದು ನಿಯಮ ಬಾಹಿರ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಲೋಹಿತ್ ಹನುಮಾಪುರ ಹೇಳಿದರು.
ಈ ನಿಯಮಗಳು ನಮ್ಮ ಸಂವಿಧಾನ ಮತ್ತು ಧರ್ಮಕ್ಕೆ ವಿರುದ್ಧವಾಗಿದೆ. ಆ ಅಧಿಕಾರಿಗಳಿಗೆ ಈ ಬಗ್ಗೆ ಜ್ಞಾನ ಇಲ್ಲ ಎನಿಸುತ್ತದೆ. ದೂರದ ಊರಿನಿಂದ ಬಂದ ಪರೀಕ್ಷಾರ್ಥಿಗಳು ಚಿನ್ನದ ಆಭರಣಗಳನ್ನು ಎಲ್ಲಿಟ್ಟು ಹೋಗಬೇಕು. ನವೆಂಬರ್ 5 ರಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೊಲೀಸ್ ಪೇದೆ ಹುದ್ದೆ ನೇಮಕಾತಿಗೆ ಪರೀಕ್ಷೆ ನಡೆಸುತ್ತಿದ್ದು, ಅದೇ ದಿನ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಪರೀಕ್ಷೆ ಕೂಡ ನಡೆಸುತ್ತಿದೆ. ಇದರ ಜೊತೆ ಮತ್ತೊಂದು ಪರೀಕ್ಷೆ ಕೂಡ ಅಂದೇ ನಡೆಯಲಿದ್ದು, ಇದರಿಂದ ಎರಡು ಮೂರು ಪರೀಕ್ಷೆ ಬರೆಯುವವರಿಗೆ ತೊಂದರೆಯಾಗುತ್ತದೆ, ಇದು ಕೇಂದ್ರ ಮತ್ತು ರಾಜ್ಯದ ನಡುವೆ ಹೊಂದಾಣಿಕೆ ಇಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದರು.
ಪಕ್ಷದ ಕಾರ್ಯದರ್ಶಿ, ಉಪಾಧ್ಯಕ್ಷರ ನೇಮಕ
ಆಮ್ ಆದ್ಮಿ ಪಕ್ಷದ ಸಂಘಟನೆ ಕ್ರಮದ ಭಾಗವಾಗಿ ಹಲವು ನಾಯಕರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ. ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದ ಮೋಹನ್ ದಾಸರಿ ಅವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ರಾಜ್ಯ ಉಪಾಧ್ಯಕ್ಷರನ್ನಾಗಿ ವಿಜಯ್ ಶರ್ಮಾ ಮತ್ತು ಶಾಂತಲಾ ದಾಮ್ಲೆ ಅವರನ್ನು ನೇಮಿಸಲಾಗಿದೆ. ಮಾಲವಿಕ ಗುಬ್ಬಿವಾಣಿಯವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾಹಿತಿ ನೀಡಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ನವೀನಚಂದ್ರ ಪೂಜಾರಿ, ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಲೋಹಿತ್ ಹನುಮಾಪುರ, ಯುವ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಗಿರೀಶ್ ನಾಯ್ಡು, ರಾಜ್ಯ ಕಾಫಿ ಬೆಳೆಗಾರರ ಘಟಕದ ಅಧ್ಯಕ್ಷರನ್ನಾಗಿ ಹೇಮಂತ್ ಕುಮಾರ್, ರಾಜ್ಯ ಆಟೋ ಚಾಲಕರ ಘಟಕದ ಅಧ್ಯಕ್ಷರಾಗಿ ಆಯುಬ್ ಖಾನ್, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಗೀತಾ ಎಂ ಯಾಡಗಿ, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ರಾಜೇಶ್ವರಿ ಮತ್ತು ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿಯನ್ನಾಗಿ ಜ್ಯೋತಿ ವಿ ಅವರನ್ನು ನೇಮಿಸಲಾಗಿದೆ.












Click it and Unblock the Notifications