ಉತ್ತರಕನ್ನಡ ಜಿಲ್ಲೆಯಲ್ಲಿ ಆಧಾರ್ ಅದಾಲತ್ ಆರಂಭ
ಕಾರವಾರ, ಸೆಪ್ಟೆಂಬರ್ 22: ಆಧಾರ್ ನೋಂದಣಿ ಅದಾಲತ್ ಕಾರವಾರ ನಗರಸಭೆಯ ಸಭಾಂಗಣದಲ್ಲಿ ಇಂದಿನಿಂದ (ಸೆ.22) ಅಕ್ಟೋಬರ್ 1ರವರೆಗೆ ನಡೆಯಲಿದೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಇ-ಆಡಳಿತ ಬೆಂಗಳೂರು ಹಾಗೂ ಜಿಲ್ಲಾಡಳಿತ ಕಾರವಾರ ಸಹಯೋಗದೊಂದಿಗೆ ಆಧಾರ್ ನೋಂದಣಿ ಅದಾಲತ್ ನಡೆಯುತ್ತಿದ್ದು, ಈ ಹಿಂದೆ ಆಧಾರ್ ನಲ್ಲಿ ಆಗಿರುವ ದೋಷಗಳನ್ನು ಸರಿಪಡಿಸುವುದು ಹಾಗೂ ವಿವಿಧ ಕಾರಣಗಳಿಂದ ಈವರೆಗೆ ಆಧಾರ್ ನೋಂದಣಿ ಮಾಡಿಸದಿದ್ದವರು ಈ ಆದಾಲತ್ ನಲ್ಲಿ ನೋಂದಣಿ ಮಾಡಿಸಲು ಸುವರ್ಣಾವಕಾಶ ಎಂದರು.
ಈ ಹಿಂದೆ ಆಧಾರ್ ನೋಂದಣಿ ಮಾಡಿಸಿ, ತಾಂತ್ರಿಕ ಕಾರಣಗಳಿಂದ ಆಧಾರ್ ಸಿಗದಿದ್ದವರೂ ಮತ್ತೊಮ್ಮೆ ಆಧಾರ್ ನೋಂದಣಿ ಮಾಡಿಸಬೇಕು. ಅಲ್ಲದೆ, ಮೊಬೈಲ್ ಲಿಂಕ್, ವಿಳಾಸ ಬದಲಾವಣೆ, ಹೆಸರಿನಲ್ಲಿನ ದೋಷಗಳ ತಿದ್ದುಪಡಿ, ವಯಸ್ಸು ಮತ್ತು ಹುಟ್ಟಿದ ದಿನಾಂಕದ ತಿದ್ದುಪಡಿಗಳ ಅವಶ್ಯವಿದ್ದಲ್ಲೂ ಅದಾಲತ್ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕಿದೆ ಎಂದರು.

ವಿಶೇಷವಾಗಿ ಕಾರವಾರ ನಗರ ವ್ಯಾಪ್ತಿಯಲ್ಲಿ ವೃದ್ಧರು, ವಿಕಲಾಂಗತೆಯಿಂದ ಆಧಾರ್ ನೋಂದಣಿಗೆ ಆಗಮಿಸದೆ ಬಿಟ್ಟು ಹೋಗಿರುವವರು ಹಾಗೂ ಹಾಸಿಗೆ ಹಿಡಿದಿರುವವರಿಗಾಗಿ ಸಹಾಯವಾಣಿ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಕರೆ ಬಂದಲ್ಲಿ ಅವರ ಮನೆಗೇ ತೆರಳಿ ಆಧಾರ್ ನೋಂದಣಿ ಮಾಡಿಸಲಾಗುವುದು.
ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆ 08382- 229857 ಹಾಗೂ 1077 ನಂಬರಿಗೆ ಕರೆ ಮಾಡಿ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.












Click it and Unblock the Notifications