Aadhaar ಎಲ್ಲದಕ್ಕೂ ಆಧಾರವಯ್ಯಾ: ನಿಲೇಕಣಿ ಘೋಷಣೆ
ಬೆಂಗಳೂರು, ಅಕ್ಟೋಬರ್ 30: ರಾಜಧಾನಿ ಬೆಂಗಳೂರು, ಕರ್ನಾಟಕ ಸೇರಿದಂತೆ ಇಡೀ ರಾಷ್ಟ್ರದಲ್ಲಿ ಎಲ್ಲ ಸರಕಾರಿ ಯೋಜನೆಗಳಿಗೂ ಆಧಾರ್ ಕಾರ್ಡ್ ಆಧಾರವಾಗಲಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆಧಾರ್ ಸಾರಥಿ ನಂದನ್ ನಿಲೇಕಣಿ ಸ್ಪಷ್ಟಪಡಿಸಿದ್ದಾರೆ.
ಆಧಾರ್ ಕಾರ್ಡ್ ಸರ್ವಾಂತರ್ಯಾಮಿ ಆಗಲಿದೆ:
ನಗರದಲ್ಲಿ ನಿನ್ನೆ Nasscom ಸಭೆಯಲ್ಲಿ ಭಾಗವಹಿಸಿ ಮಾತನಾಡಿದ 'ಆಧಾರ್' ಗುರುತಿನ ಕಾರ್ಡ್ ವಿತರಕ Unique Identification Authority of India (UIDAI) ಸಂಸ್ಥೆಯ ಅಧ್ಯಕ್ಷರಾದ ಕನ್ನಡಿಗ ನಂದನ್ ನಿಲೇಕಣಿ ಅವರು ಆಧಾರ್ ಅಭಿಯಾನ ಅಬಾಧಿತವಾಗಿ ಮುಂದುವರಿಯಲಿದೆ. ಎಲ್ಲದಕ್ಕೂ Aadhaar ಆಧಾರವಾಗುವುದು ಖಚಿತ ಎಂದು ಹೇಳಿದ್ದಾರೆ.
ಭಾರತದಲ್ಲಿ ಅಸಲಿಗೆ ಕಡುಬಡವರಿಗೆ ಗುರುತಿನ ಮಾನ್ಯತೆಯೇ ಇಲ್ಲವಾಗಿದೆ. ಆದರೆ ಆಧಾರ್ ನಿಂದಾಗಿ ಡಿಜಿಟಲ್ ಐಡೆಂಟಿಟಿ ಪ್ರಾಪ್ತಿಯಾಗುತ್ತಿದೆ. ಇದು ವಿಶ್ವದಲ್ಲೇ ವಿಶಿಷ್ಟವಾಗಿದೆ. 470 ದಶ ಲಕ್ಷ ಮಂದಿ 'ಆಧಾರ್' ಗುರುತಿನ ಸಂಖ್ಯೆ ಪಡೆಯಲು ಮುಂದಾಗಿ ಬಂದಿದ್ದಾರೆ. ಇದಕ್ಕಿಂತ ದೊಡ್ಡ ಸಾಧನೆ ಇನ್ನೇನಿದೆ ಎಂದು ನಂದನ್ ನಿಲೇಕಣಿ ಪ್ರಶಂಸೆಪಟ್ಟರು. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಖಾಸಗಿ ಕಂಪನಿಗಳಲ್ಲಿಯೂ ಆಧಾರ್ ದರ್ಬಾರ್ ಕಂಡುಬರಲಿದೆ ಎಂದು ನಿಲೇಕಣಿ ಹೇಳಿದರು.

Aadhaar ಅಂತೂ ಖಂಡಿತ ಉಳಿಯುತ್ತದೆ
Aadhaar ಇರುತ್ತದೋ ಅಥವಾ Facebook ಉಳಿಯುತ್ತದೋ ಎಂದು ಉದ್ಯಮಿಯೊಬ್ಬರು ಕೇಳಿದಾಗ 'Aadhaar ಅಂತೂ ಖಂಡಿತ ಉಳಿಯುತ್ತದೆ. Facebook ಸಹ ಉಳಿಯಬಹುದು' ಎಂದು ನಿಲೇಕಣಿ ಪ್ರತಿಕ್ರಿಯಿಸಿದ್ದಾರೆ.

ಹಾಗಾದರೆ Supreme Court ಕಥೆಯೇನು?
ಆಧಾರ್ ಬೇಡ ಎಂದು ಕೋರ್ಟ್ ಹೇಳಿದೆಯಲ್ಲಾ ಎಂದು ಮತ್ತೊಬ್ಬರು ಕೇಳಿದ್ದಕ್ಕೆ 'ವಿಷಯ ನ್ಯಾಯಾಂಗದ ಪರಿಧಿಯಲ್ಲಿದೆ. ದೇಶದ ಅರ್ಧದಷ್ಟು ಜನ ಈಗಾಗಲೇ ಕಾರ್ಡ್ ಹೊಂದಿದ್ದಾರೆ. ಉಳಿದವರಿಗೂ ಅದು ಬೇಕಾಗಿದೆ. ಆದ್ದರಿಂದ ಇದಿಷ್ಟೇ ಸಾಕು ಭಾರತದಲ್ಲಿ ಆಧಾರ್ ದೃಢವಾಗಿ ಉಳಿಯುತ್ತದೆ ಎಂಬುದಕ್ಕೆ' ಎಂದು ನಿಲೇಕಣಿ ಉತ್ತರಿಸಿದ್ದಾರೆ.

ಖಾಸಗಿ ಕಂಪನಿಗಳಲ್ಲೂ ಆಧಾರ್ ಬಳಕೆಯಾಗಲಿದೆ
ನೋಡ್ತಾ ಇರಿ. ಆಧಾರ್ ಕೇವಲ ಸರಕಾರ/ ಸರಕಾರಿ ಯೋಜನೆಗಳಿಗೆ ಸೀಮಿತವಾಗಿ ಉಳಿಯುವುದಿಲ್ಲ. ಖಾಸಗಿ ಸಂಸ್ಥೆಗಳೂ ಆಧಾರ್ ಗುರುತಿನ ಸಂಖ್ಯೆಗೆ ಜೋತು ಬೀಳಲಿವೆ. ಖಾಸಗಿ ಸಂಸ್ಥೆಗಳಲ್ಲಿ ಸಂಬಳ ವಿತರಣೆ ಸೇರಿದಂತೆ ಎಲ್ಲ ವ್ಯವಸ್ಥೆಗಳಲ್ಲೂ ಆಧಾರ್ ಗುರುತಿನ ಸಂಖ್ಯೆ ಮೂಲಕವೇ ವ್ಯವಹಾರಗಳು ನಡೆಯುವ ದಿನಗಳು ದೂರವಿಲ್ಲ' ಎಂದು ನಿಲೇಕಣಿ ಆಶಿಸಿದ್ದಾರೆ.

ಆಧಾರ್ ನೋಂದಣಿಯಲ್ಲೂ ಬೆಂಗಳೂರಿಗೆ ಅಗ್ರ ಸ್ಥಾನ
ಸಿಲಿಕಾನ್ ಕಣಿವೆ ಬೆಂಗಳೂರು ಹೆಸರಿಗೆ ತಕ್ಕಂತೆ ತಂತ್ರಜ್ಞಾನವನ್ನು ಅಪ್ಪಿಕೊಳ್ಳುವ/ಒಪ್ಪಿಕೊಳ್ಳುವ ಮೊದಲ ನಗರವಾಗಿದೆ. ಹಾಗಾಗಿ ಆಧಾರ್ ನೋಂದಣಿ ಕಾರ್ಯದಲ್ಲೂ ಅಗ್ರ ಸ್ಥಾನ ಕಾಯ್ದುಕೊಳ್ಳುತ್ತದೆ ಎಂದು ನಿಲೇಕಣಿ ಭರವಸೆ ವ್ಯಕ್ತಪಡಿಸಿದರು.

ಆಧಾರ್ ಮಾಹಿತಿ ಸುರಕ್ಷತೆ ಆತಂಕ ಬೇಡ
ಹಾಗಾದರೆ ಆಧಾರ್ ಮಾಹಿತಿ ಸುರಕ್ಷೆ/ ಸೋರಿಕೆ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ 'ಏನು ನಾವೇನೂ ಕಡ್ಲೆಪುರಿ ಥರ ಆಧಾರ್ ಮಾಹಿತಿಯನ್ನು ಎಲ್ಲ ಕಡೆಗೂ ಹಂಚುತ್ತಿದ್ದೇವಾ? ಎಲ್ಲ ಸುರಕ್ಷಾ ಮಾರ್ಗಗಳನ್ನು ಅಳವಡಿಸಿಕೊಂಡಿದ್ದೇವೆ. ಸುಮ್ಮನೇ ಗೊಂದಲ ಯಾಕೆ ಸೃಷ್ಟಿಸುತ್ತೀರಿ. ಆಧಾರ್ ಮಾಹಿತಿ ಸುರಕ್ಷತೆ ಬಗ್ಗೆ ಯಾವುದೇ ಆತಂಕ ಬೇಡ. ಅದಕ್ಕೆಲ್ಲಾ ಭಾರಿ ಭದ್ರತೆ ಕಲ್ಪಿಸಲಾಗಿದೆ ಎಂದು ನಿಲೇಕಣಿ ಭರವಸೆ ನೀಡಿದ್ದಾರೆ. (ಚಿತ್ರ)












Click it and Unblock the Notifications