ಬಿಜೆಪಿ ಪ್ರಚಾರ ವಾಹನದಲ್ಲೇ ಪ್ಲೇ ಆಯ್ತು ಬಿಜೆಪಿ ಭ್ರಷ್ಟರ ಪಕ್ಷ, ಕಳ್ಳರ ಪಕ್ಷ ಎನ್ನುವ ಹಾಡು
ಬಿಜೆಪಿ ಪಕ್ಷದ ಪ್ರಚಾರ ವಾಹನದಲ್ಲಿ ಬಿಜೆಪಿ ಭ್ರಷ್ಟರ ಪಕ್ಷ, ಕಳ್ಳರ ಪಕ್ಷ ಎನ್ನುವ ಸಾಹಿತ್ಯ ಹೊಂದಿರುವ ಹಾಡನ್ನು ಪ್ಲೇ ಮಾಡುತ್ತಿರುವ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್ ಹಂಚಿಕೊಂಡಿದೆ. ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ಬಿಜೆಪಿ ಕೊನೆಗೂ ನಿಜವನ್ನೇ ಹೇಳುತ್ತಿದೆ ಎಂದು ವ್ಯಂಗ್ಯವಾಡಿದೆ.
ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ಯಾವ ಮಾಹಿತಿ ಸಿಕ್ಕಿಲ್ಲ, ಆದರೆ ಬಿಜೆಪಿ ಪಕ್ಷದ ಪ್ರಚಾರ ವಾಹನದಲ್ಲಿ, 'ಬಿಜೆಪಿ ಇದು ಕಳ್ಳರ ಪಕ್ಷ, ಬಿಜೆಪಿ ಇದು ಸುಳ್ಳರ ಪಕ್ಷ, ಬಿಜೆಪಿ ಇದು ಲಂಚದ ಪಕ್ಷ' ಎನ್ನುವ ಸಾಹಿತ್ಯ ಹೊಂದಿರುವ ಹಾಡು ಪ್ಲೇ ಆಗುತ್ತಿರುವುದನ್ನು ಕೇಳಬಹುದಾಗಿದೆ. ಇದನ್ನು ಕೇಳಿ ವಿಡಿಯೋ ಮಾಡುತ್ತಿರುವ ವ್ಯಕ್ತಿ ಕೂಡ ಯಾರು ಇದನ್ನು ಹಾಕಿದ್ದು ಎಂದು ಪ್ರಶ್ನೆ ಮಾಡುತ್ತಿರುವುದನ್ನು ಕೇಳಬಹುದಾಗಿದೆ.

ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ "ಬಿಜೆಪಿ ಎಂದರೆ ಕಳ್ಳರ, ಸುಳ್ಳರ, ಭ್ರಷ್ಟರ ಪಕ್ಷ ಎಂದು ಬಿಜೆಪಿಯವರೇ ಡಂಗೂರ ಸಾರುತ್ತಿದ್ದಾರೆ. ಸತ್ಯಗಳು ಕೆಲವೊಮ್ಮೆ ಹೀಗೂ ಹೊರಬರುತ್ತವೆ ಅಲ್ಲವೇ?" ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ.
ಬಿಜೆಪಿ ಎಂದರೆ ಕಳ್ಳರ, ಸುಳ್ಳರ, ಭ್ರಷ್ಟರ ಪಕ್ಷ ಎಂದು ಬಿಜೆಪಿಯಾವರೇ ಡಂಗೂರ ಸಾರುತ್ತಿದ್ದಾರೆ..
— Karnataka Congress (@INCKarnataka) May 4, 2023
ಸತ್ಯಗಳು ಕೆಲವೊಮ್ಮೆ ಹೀಗೂ ಹೊರಬರುತ್ತವೆ ಅಲ್ಲವೇ @BJP4Karnataka ?! pic.twitter.com/aQTOhU7q0h
ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್, "ಸಿಎಂ ಹುದ್ದೆಗೆ 2,500 ಕೋಟಿ, ಮಂತ್ರಿಗಿರಿಗೆ 50 ಕೋಟಿ ರುಪಾಯಿ, ಪಿಎಸ್‌ಐ ಹುದ್ದೆಗೆ 80 ಲಕ್ಷ ರುಪಾಯಿ, ಪ್ರಾಧ್ಯಾಪಕರ ಹುದ್ದೆಗೆ 70 ಲಕ್ಷ ರುಪಾಯಿ, ವರ್ಗಾವಣೆಗೆ 1 ರಿಂದ 3 ಕೋಟಿ ರುಪಾಯಿ, ಕಾಮಗಾರಿಗಳಿಗೆ 40 % ಕಮಿಷನ್, ಇದು ಡಬಲ್ ಇಂಜಿನ್ ಸರ್ಕಾರದ ರೇಟ್ ಕಾರ್ಡ್ ಎಂದು ಆರೋಪಿಸಿದ್ದು, ಈ ರೇಟ್‌ಗಳನ್ನು ಡಬಲ್ ಮಾಡುವುದಕ್ಕಾಗಿ ಬಿಜೆಪಿ ಮೋದಿಯನ್ನು ಕರೆಸಿ ಕಸರತ್ತು ನಡೆಸುತ್ತಿದೆ!" ಎಂದು ವ್ಯಂಗ್ಯವಾಡಿದೆ.
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರ ಮಾಳಿಗೆ ಸೋರಿ ನೀರು ನಿಂತಿರುವ ಬಗ್ಗೆ ಟ್ವೀಟ್ ಮಾಡಿದ್ದು, ಸೋರುತಿಹುದು ಕರ್ನಾಟಕದ ಘನತೆಯ ಮಾಳಿಗೆ, ಬಿಜೆಪಿಯ ಭ್ರಷ್ಟಾಚಾರದಿಂದ ಎಂದು ಹೇಳಿದೆ. ಬಿಜೆಪಿಯ 40% ಕಮಿಷನ್ ಲೂಟಿ ಬೆಂಗಳೂರಿನ ಮರ್ಯಾದೆಯನ್ನು ವಿಶ್ವಮಟ್ಟದಲ್ಲಿ ಹರಾಜು ಹಾಕಿದೆ. ಮೋದಿ ಉದ್ಘಾಟಿಸಿದ ಕೆಲವೇ ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರ ಮಾಳಿಗೆ ಸೋರಿ ನೀರು ನಿಂತಿದೆ. ನರೇಂದ್ರ ಮೋದಿಯವರಿಗೆ ಈ ಬಗ್ಗೆ ಮಾತನಾಡುವ ತಾಕತ್ತಿದೆಯಾ ಎಂದು ಪ್ರಶ್ನೆ ಮಾಡಿದೆ.












Click it and Unblock the Notifications