ರಾಜ್ಯ-ಜಿಲ್ಲಾ ಘಟಕಗಳ ವಿಸರ್ಜಿಸಿದ ಎಎಪಿಯಿಂದ ಹೊಸ ಸಂಘಟನಾ ತಂಡದ ರಚನೆ ಶೀಘ್ರ
ಬೆಂಗಳೂರು, ಜನವರಿ 12 : ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜುಗೊಳ್ಳಲು ಆಮ್ ಆದ್ಮಿ ಪಾರ್ಟಿಯ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕಗಳನ್ನು ವಿಸರ್ಜಿಸಲಾಗಿದ್ದು, ಸದ್ಯದಲ್ಲೇ ಕ್ರಿಯಾಶೀಲ ತಂಡವನ್ನು ರಚಿಸಲಾಗುತ್ತದೆ ಎಂದು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ದೆಹಲಿ ಶಾಸಕ ದಿಲೀಪ್ ಪಾಂಡೆ ಹೇಳಿದರು.
ಬೆಂಗಳೂರಿನ ಗುರುವಾರ ಉದ್ದೇಶಿಸಿ ಮಾತನಾಡಿದ ದಿಲೀಪ್ ಪಾಂಡೆ ಅವರು, ಆಮ್ ಆದ್ಮಿ ಪಾರ್ಟಿ (ಎಎಪಿ)ಯು ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಮರೋಪಾದಿಯಲ್ಲಿ ಸಿದ್ಧಗೊಳ್ಳಲಿದೆ. ಈವರೆಗಿದ್ದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ತಂಡವನ್ನು ವಿಸರ್ಜನೆ ಮಾಡಲಾಗಿದೆ. ಗ್ರಾಮ ಸಂಪರ್ಕ ಅಭಿಯಾನ ಎಂಬ ರಾಜ್ಯಾವ್ಯಾಪಿ ಅಭಿಯಾನದ ಮೂಲಕ ಆಮ್ ಆದ್ಮಿ ಪಾರ್ಟಿಯು ಕಳೆದ ಐದು ತಿಂಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಿಕೊಂಡಿದೆ ಎಂದರು.
ಈ ಅಭಿಯಾನದಲ್ಲಿ ಕರ್ನಾಟಕದ ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರ ಜೊತೆ ಆಮ್ ಆದ್ಮಿ ಪಾರ್ಟಿ ಸಂಪರ್ಕ ಸಾಧಿಸಿದೆ. ಈಗ ಬದಲಾವಣೆ ತರುವಂತಹ ಹೊಸ ತಂಡವನ್ನು ರೂಪಿಸಲಾಗುತ್ತಿದೆ. ಬದಲಾವಣೆ ತರಬಲ್ಲ ಈ ಸಾಮಾನ್ಯ ಪುರುಷರು ಹಾಗೂ ಮಹಿಳೆಯರೊಂದಿಗೆ ಕೈಜೋಡಿಸುವುದರಿಂದ ಪಕ್ಷವು ಚುನಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲಿದೆ ಎಂದು ದೃಢವಾಗಿ ನಂಬಿದ್ದೇವೆ. ಬಿಜೆಪಿಯ ಭ್ರಷ್ಟ ಹಾಗೂ ಅಸಮರ್ಥ ಸರ್ಕಾರವನ್ನು ನಾವು ಮಣಿಸಲಿದ್ದೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಹೊಸ ತಂಡ ಚುನಾವಣೆಯಲ್ಲಿ ಸಕ್ರಿಯ
ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ತಂಡವು ಮುಂಬರುವ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ. ಇದಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಸಂದೀಪ್ ಪಾಠಕ್‌ರವರ ಸಮರ್ಥ ಮಾರ್ಗದರ್ಶನ ಇರಲಿದೆ. ಎಎಪಿ ರಾಷ್ಟ್ರೀಯ ಪಕ್ಷವಾದ ಬಳಿಕ, ರಾಜ್ಯವನ್ನು ಅಭಿವೃದ್ಧಿಯಲ್ಲಿ ನಂಬರ್ ಒನ್ ಮಾಡಲು ಜನರು ಆಮ್ ಆದ್ಮಿ ಪಾರ್ಟಿಯನ್ನು ಭರವಸೆಯಿಂದ ನೋಡುತ್ತಿದ್ದಾರೆ. ಆದ್ದರಿಂದ ನಾವು ಒಳ್ಳೆಯ ಉದ್ದೇಶ ಹೊಂದಿದ ವ್ಯಕ್ತಿಗಳು, ಹೋರಾಟಗಾರರು, ರಾಜಕಾರಣಿಗಳು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿ ಈ ಕನಸನ್ನು ನನಸಾಗಿಸುವುದಾದರೆ ಸ್ವಾಗತಿಸುತ್ತೇವೆ ಎಂದರು.
ಕಳೆದ ಐದು ತಿಂಗಳಲ್ಲಿ ನಡೆದ ಸಂಘಟನೆ ಬಲಪಡಿಸುವ ಪ್ರಕ್ರಿಯೆಯಿಂದಾಗಿ ಆಮ್ ಆದ್ಮಿ ಪಾರ್ಟಿಯು ಎಲ್ಲ ಜಿಲ್ಲೆಗಳು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಭದ್ರವಾದ ಅಸ್ತಿತ್ವ ಹೊಂದಿದೆ. ಮುಂದಿನ ಎರಡು ವಾರಗಳಲ್ಲಿ ನಾವಿದನ್ನು ಗ್ರಾಮೀಣ ಭಾಗಕ್ಕೆ ತೆಗೆದುಕೊಂಡು ಹೋಗುತ್ತೇವೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ವಿಧಾನಸಭಾ ಸ್ಪರ್ಧಿಸುವ ಆಕಾಂಕ್ಷಿಗಳ ಸಭೆಯಲ್ಲಿ, 224 ಕ್ಷೇತ್ರಗಳಿಗೆ ಸಾವಿರ ಆಕಾಂಕ್ಷಿಗಳು ಚರ್ಚೆ ಹಾಗೂ ತರಬೇತಿಯಲ್ಲಿ ಭಾಗವಹಿಸಿದ್ದರು. ಅಮೂಲಾಗ್ರ ಬದಲಾವಣೆಗೆ ಕರ್ನಾಟಕ ಸಿದ್ಧವಾಗುತ್ತಿದೆ ಎಂಬುದರ ಸಂಕೇತವಿದು ಎಂದು ವಿವರಿಸಿದರು.
ಆಮ್ ಆದ್ಮಿ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications