ಒಳ ಮೀಸಲಾತಿ; ಕಾಂತರಾಜು ಆಯೋಗದ ವರದಿ ಜಾರಿ ಮೂಲಕ ಸಿದ್ದರಾಮಯ್ಯ ಬದ್ಧತೆ ಪ್ರದರ್ಶಿಸಲಿ: ಎ.ನಾರಾಯಣಸ್ವಾಮಿ
ಬೆಂಗಳೂರು, ಜುಲೈ 29: ಒಳ ಮೀಸಲಾತಿ, ಕಾಂತರಾಜು ಆಯೋಗದ ವರದಿ ಅನುಷ್ಠಾನಕ್ಕೆ ತರುವ ಮೂಲಕ ತಮ್ಮ ಬದ್ಧತೆ ತೋರಿಸಿ. ಮತ್ತೊಬ್ಬರ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಸವಾಲೆಸೆದರು.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಗೆ ಬದ್ಧತೆ ಇದೆ. ನಾವು ಒಳ ಮೀಸಲಾತಿ ಶಿಫಾರಸು ಮಾಡಿ ಕಳುಹಿಸಿದ್ದೇವೆ. ಶೆಡ್ಯೂಲ್ 9ಕ್ಕೆ ಸೇರುವ ಮೊದಲೇ ತಮಿಳುನಾಡಿನಲ್ಲಿ ಒಳಮೀಸಲಾತಿ ಜಾರಿಗೊಳಿಸಿದ್ದರು. ಆಂಧ್ರ ಪ್ರದೇಶದಲ್ಲಿ ಒಳ ಮೀಸಲಾತಿ ಜಾರಿಗೆ ಬಂದ 24 ಗಂಟೆಯಲ್ಲೇ ಆ ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಕೊಟ್ಟಿದ್ದರು. ಒಳ ಮೀಸಲಾತಿ ಪರಿಣಾಮವಾಗಿ ವಂಚಿತ- ಶೋಷಿತ ಅನೇಕ ವರ್ಗಕ್ಕೆ ಉದ್ಯೋಗ, ಶಿಕ್ಷಣಾವಕಾಶ ಲಭಿಸಿತ್ತು. ಇದಕ್ಕೆ ದಾಖಲೆಗಳಿವೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬದ್ಧತೆ ಇದ್ದರೆ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಶೋಷಿತರಿಗೆ ನ್ಯಾಯ ನೀಡಿದ ಮಾದರಿಯಲ್ಲಿ ಕೊಡುವ ಎದೆಗಾರಿಕೆ ತೋರಿಸಬೇಕು. ಅದಕ್ಕಾಗಿ ವಿಶೇಷ ಅಧಿವೇಶನ ಕರೆದು ಜಾರಿ ಮಾಡಿ ಎಂದು ಒತ್ತಾಯಿಸಿದರು. ನಾನು ಸ್ವಯಂಘೋಷಿತ ಹಿಂದುಳಿದ ವರ್ಗಗಳ ನಾಯಕ ಎಂಬ ಸಿಎಂ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಕಾಂತರಾಜು ಆಯೋಗದ ವರದಿ ಜಾರಿ ಮಾಡುವುದಾಗಿ ಹೇಳಿದ್ದನ್ನು ತಿಳಿಸಿದರು.
ಆರ್ಟಿಕಲ್ 341 ತಿದ್ದುಪಡಿ ಆಗಬೇಕು. ರಾಜ್ಯಗಳಿಂದ ಇದಕ್ಕೆ ಉತ್ತರ ಬೇಕಿತ್ತು. ಶೂನ್ಯ ಎಸ್‍ಸಿ ಜನಸಂಖ್ಯೆ ಇರುವ ರಾಜ್ಯಗಳು ಋಣಾತ್ಮಕ ಉತ್ತರ ನೀಡಿವೆ. 7 ರಾಜ್ಯಗಳು ಪರವಾಗಿವೆ. ದೆಹಲಿ ಮತ್ತು ಪಂಜಾಬ್ ರಾಜ್ಯಗಳ ಎಎಪಿಯ ಮಹಾ ಘಟಬಂಧನ್ ಸದಸ್ಯರು ತಿದ್ದುಪಡಿ ವಿರೋಧಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಿಮ್ಮದೇ ಸರಕಾರವಿದ್ದು ವಿರೋಧಿಸಿದ್ದಾರೆ. ಘಟಬಂಧನ್ ಸದಸ್ಯರಾದ ಪಶ್ಚಿಮ ಬಂಗಾಲ ಸರಕಾರ ವಿರೋಧಿಸಿದೆ. ಸಿದ್ದರಾಮಯ್ಯನವರು ಒಳ ಮೀಸಲಾತಿಗೆ ಒಪ್ಪಿಗೆ ಕೊಡಿಸಲು ಆ ರಾಜ್ಯಗಳ ಸಿಎಂಗಳ ಜೊತೆ ಚರ್ಚಿಸಬೇಕು. ವಿಶೇóಷ ಅಧಿವೇಶನ ಕರೆದು ಒಳ ಮೀಸಲಾತಿಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ಅವಧಿಯಲ್ಲಿ ಒಳ ಮೀಸಲಾತಿ ವಿಚಾರದಲ್ಲಿ ನಿಜವಾದ ಬಯಲಾಟ ಮಾಡಿದ್ದರು ಎಂದು ಆರೋಪಿಸಿದರು. ಚುನಾವಣೆ ನಡೆಯುತ್ತಿರುವಾಗ ಮೊದಲನೇ ಸದನದಲ್ಲಿ ಒಳ ಮೀಸಲಾತಿ ಜಾರಿ ಮಾಡುವುದಾಗಿ ಅವರು ತಿಳಿಸಿದ್ದರು. ಪ್ರಣಾಳಿಕೆಯಲ್ಲೂ ಅದನ್ನು ತಿಳಿಸಿದ್ದರು.

ಎಲ್ಲವನ್ನೂ ತಿಳಿದಿರುವ ವಕೀಲರಾದ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಬದ್ಧತೆ ಮಾತನಾಡುತ್ತಾರೆ. ಸಿದ್ದರಾಮಯ್ಯನವರು ಚುನಾವಣಾ ಪೂರ್ವದಲ್ಲಿ ಒಂದು ಸಭೆಯಲ್ಲಿ, ಪ್ರಣಾಳಿಕೆಯಲ್ಲಿ ಒಳ ಮೀಸಲಾತಿಯ ಬದ್ಧತೆ ಬಗ್ಗೆ ತಿಳಿಸಿದ್ದರು. ಒಳ ಮೀಸಲಾತಿಯನ್ನು ಮಾಡಿ ತೀರುತ್ತೇವೆ ಎಂದು 25- 30 ಸಾವಿರ ಜನರಿದ್ದ ಸಭೆಯ ವೇದಿಕೆ ಮೇಲೆ ಹೇಳಿದ್ದರು. ಬಳಿಕ ಕೆಳಗಿಳಿದು ಬಂದು 5 ನಿಮಿಷದಲ್ಲಿ ಇತರ ಸಮಾಜzವರು ಕೇಳಿದಾಗ 'ನಾನು ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಮಾಡುವುದಿಲ್ಲ. ಸಿಎಂ ಆಗಿದ್ದಾಗ ನಾನು ಮಾಡಲಿಲ್ಲ. ನೀವು ಹೆದರಬೇಡಿ' ಎಂದಿದ್ದರು ಎಂದು ಕಿಡಿಕಾರಿದರು.
ಸಿದ್ದರಾಮಯ್ಯರು ಹಿಂದುಳಿದ ವರ್ಗಗಳ ಸ್ವಯಂಘೋಷಿತ ನಾಯಕರು ಅಲ್ಲದೆ ಅವರು ವಕೀಲರೂ ಹೌದು. ರಾಜ್ಯದ ವಿಧಾನಸಭಾ ಕಲಾಪ, ಸಂಸತ್ತಿನ ಕಲಾಪ ನಡೆಯುವಾಗ ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ ಅಥವಾ ಮುಖ್ಯಮಂತ್ರಿಯಾಗಿದ್ದಾಗ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಬೇಕೆಂಬ ಬಹಳ ಅನುಭವ ಇದೆ ಎಂದುಕೊಂಡಿರುವುದಾಗಿ ತಿಳಿಸಿದರು.
ಸಂಸತ್ತಿನಲ್ಲಿ ಪ್ರಶ್ನೆಗೆ ನೀಡಿದ ಉತ್ತರದ ವಿಚಾರದಲ್ಲಿ ಮಾತನಾಡಿದ ಸಿದ್ದರಾಮಯ್ಯನವರು ಬಿಜೆಪಿ ಬೂಟಾಟಿಕೆ ಬಯಲಾಗಿದೆ ಎಂದಿದ್ದಾರೆ. ಕೇಂದ್ರ ಸಚಿವ, ಕರ್ನಾಟಕದ ಪ್ರತಿನಿಧಿ ಹಾಗೂ ಒಳಮೀಸಲಾತಿಯ ಫಲಾನುಭವಿಯಾಗಿ ಮಾಧ್ಯಮದ ಮುಂದೆ ಜನತೆಗೆ ಸ್ಪಷ್ಟೀಕರಣ ಕೊಡಲು ಪತ್ರಿಕಾಗೋಷ್ಠಿ ಕರೆದಿದ್ದೇನೆ ಎಂದು ತಿಳಿಸಿದರು.
ಎಸ್‍ಸಿಗಳಿಗೆ ಒಳ ಮೀಸಲಾತಿ ಸಂಬಂಧ ಈಗ ಸಂವಿಧಾನದ 341ನೇ ಆರ್ಟಿಕಲ್‍ನಡಿ ಏನು ಹೇಳುತ್ತಾರೆ ಎಂಬುದನ್ನು ಸಚಿವನಾಗಿ ತಿರುಚಿ ಹೇಳುವಂತಿಲ್ಲ. ತಿರುಚಿ ಹೇಳುವ ಮನೋಭೂಮಿಕೆಯೂ ನನ್ನದಲ್ಲ. ಈಗಿನ ಸ್ಥಿತಿ ಬಗ್ಗೆ ನಾನು ಉತ್ತರಿಸಿದ್ದೇನೆ ಎಂದು ಹೇಳಿದರು.












Click it and Unblock the Notifications