Electric Bus: ಮುಂದಿನ ಐದು ವರ್ಷಗಳಲ್ಲಿ 8 ಲಕ್ಷ ಇ.ವಿ. ಬಸ್ ಸೇವೆ ಲಭ್ಯ: ಸಂಪೂರ್ಣ ಮಾಹಿತಿ ಇಲ್ಲಿದೆ
ಬೆಂಗಳೂರು, ನವೆಂಬರ್ 21: ಭಾರತದಲ್ಲಿ ಇ.ವಿ. ವಾಹನಗಳು ಜನಪ್ರಿಯವಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ 8 ಲಕ್ಷ ವಿದ್ಯುತ್ ಚಾಲಿತ ಬಸ್ಸುಗಳು ರಸ್ತೆಗಿಳಿಯಲಿವೆ ಎಂದು 'ನಮ್ಮ ಯಾತ್ರಿ' ಕಂಪನಿಯ ಮುಖ್ಯಸ್ಥ ಎಂ ಎಸ್ ಶಾನ್ ಬುಧವಾರ ಹೇಳಿದರು.
ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ನಡೆದ 'ಇ.ವಿ. ಮತ್ತು ಭವಿಷ್ಯದ ಸಂಚಾರ ವ್ಯವಸ್ಥೆ ಕುರಿತು ಮಾತನಾಡಿ, ಯಾವುದೇ ಬದಲಾವಣೆ ಜನಕೇಂದ್ರಿತವಾಗಿರಬೇಕು. ಬಳಕೆದಾರರಿಗೆ ಹೊಸ ಪರಿವರ್ತನೆಯು ಕೊಡುವ ಹಿತಕರ ಅನುಭವ ಮುಖ್ಯವಾಗುತ್ತದೆ. ಸಂಚಾರ ದಟ್ಟಣೆ ಮತ್ತು ಮಾಲಿನ್ಯದಿಂದ ಬಳಲುತ್ತಿರುವ ಭಾರತಕ್ಕೆ ಸುಗಮ ಸಂಚಾರ ವ್ಯವಸ್ಥೆಗೆ ಇ.ವಿ. ಅನಿವಾರ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇ.ವಿ. ವಾಹನಗಳು ಮಹಿಳೆಯರಿಗೆ ತುಂಬಾ ಇಷ್ಟವಾಗುತ್ತಿದೆ. ಈ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಬಂಡವಾಳ ಹೂಡಿಕೆ ಹೆಚ್ಚಾಗಬೇಕಾದುದು ಅನಿವಾರ್ಯ. ಇದು ಅಂತಿಮವಾಗಿ ಸುಸ್ಥಿರ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂಡೋಫಾಸ್ಟ್ ಎನರ್ಜಿ ಕಂಪನಿಯ ಸಿಇಒ ಅನಂತ್ ಬಡಿಜಾತ್ಯ ಮಾತನಾಡಿ, "ಭಾರತವು ಇ.ವಿ. ವಾಹನಗಳಿಗೆ ಒಂದು ಅನನ್ಯ ಮಾರುಕಟ್ಟೆ ಆಗಿದೆ. ಇಲ್ಲಿ ಶೇ.7ರಷ್ಟು ದ್ವಿಚಕ್ರ ವಾಹನಗಳು ಇವಿ ಆಗಿದ್ದು, ತ್ರಿಚಕ್ರ ವಾಹನಗಳು ಮತ್ತು ಕಾರುಗಳು ಕೂಡ ಹೆಚ್ಚಾಗಿ ಇ.ವಿ.ಗೆ ಹೊರಳಿ ಕೊಳ್ಳುತ್ತಿವೆ. ಈಗ ಕೇವಲ ಎರಡು ನಿಮಿಷಗಳಲ್ಲಿ ಬ್ಯಾಟರಿ ಚಾರ್ಜಿಂಗ್ ಮಾಡುವಂಥ ತಂತ್ರಜ್ಞಾನ ಬಂದಿದೆ ಎಂದರು.
2 ಮತ್ತು 3ನೇ ಸ್ತರದ ನಗರಗಳಲ್ಲಿ ಕೂಡ ಈಗ ಇ.ವಿ. ವಾಹನಗಳು ವ್ಯಾಪಕವಾಗುತ್ತಿವೆ. ಆದರೆ ಶೇ.18ರಷ್ಟಿರುವ ಜಿ.ಎಸ್.ಟಿ. ಗ್ರಾಹಕರಿಗೆ ಹೊರೆಯಾಗಿದೆ. ಸರಕಾರಗಳು ಇದನ್ನು ಬಗೆಹರಿಸಬೇಕು ಎಂದು ಅಭಿಪ್ರಾಯಪಟ್ಟರು.
ರ್‍ಯಾಪಿಡೋ ಕಂಪನಿಯ ಸಿಇಒ ಅರವಿಂದ್ ಸಂಕಾ ಮಾತನಾಡಿ, ಸಂಚಾರ ಸಮಸ್ಯೆಗೆ ಇ.ವಿ. ವಾಹನಗಳೇ ಪರಿಹಾರ. ಇವು ಜತೆಯಲ್ಲೇ ಸಂಪಾದನೆಯ ಅವಕಾಶಗಳನ್ನೂ ಸೃಷ್ಟಿಸುತ್ತಿವೆ. ಕಟ್ಟಕಡೆಯ ಜಾಗಕ್ಕೆ ಸಂಪರ್ಕ ವ್ಯವಸ್ಥೆ ಒದಗಿಸುವ ಸಾಧ್ಯತೆ ಇ.ವಿ. ಕ್ಷೇತ್ರಕ್ಕಿದೆ ಎಂದರು.
ರೆವ್ ಫಿನ್ ಕಂಪನಿಯ ಸಂಸ್ಥಾಪಕ ಸಮೀರ್ ಅಗರವಾಲ್, ಒಂದು ಉತ್ಪನ್ನದ ಸುತ್ತ ಇರುವ ಮೂಲಸೌಕರ್ಯ ಯಾವಾಗಲೂ ಮುಖ್ಯ ಪಾತ್ರ ವಹಿಸುತ್ತದೆ. ಇ.ವಿ.ಯಲ್ಲಿ ಬ್ಯಾಟರಿ ಚಾರ್ಜಿಂಗ್, ಸ್ವಾಪಿಂಗ್, ವಿಮೆ ಮತ್ತು ದುರಸ್ತಿಯ ಸವಾಲುಗಳಿವೆ ಎಂದು ಗಮನ ಸೆಳೆದರು.
ಉದ್ಯಮಿಗಳಿಂದಾಗಿ ಸಮಾಜಕ್ಕೆ ತಂತ್ರಜ್ಞಾನದ ಲಾಭ : ಎಂ ಬಿ ಪಾಟೀಲ
ಬೆಂಗಳೂರು: ಉದ್ಯಮಿಗಳು ಕೇವಲ ವಾಣಿಜ್ಯ ದೃಷ್ಟಿಯ ಲಾಭವನ್ನು ಮಾತ್ರ ನೋಡುತ್ತಿರುವುದಿಲ್ಲ. ತಮ್ಮ ಪರಿಶ್ರಮ ಮತ್ತು ಬದ್ಧತೆಗಳ ಮೂಲಕ ತಂತ್ರಜ್ಞಾನದ ಭವಿಷ್ಯವನ್ನು ಕೂಡ ನಿರ್ಧರಿಸುತ್ತಾರೆ. ಇದರ ಲಾಭ ಕೊನೆಗೆ ಸಮಾಜಕ್ಕೆ ಸಿಗುತ್ತದೆ. ರಾಜ್ಯದಲ್ಲಿ ನೆಲೆಯೂರಿರುವ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳು ಈ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಬುಧವಾರ ಅಭಿಪ್ರಾಯಪಟ್ಟರು.
ಬೆಂಗಳೂರು ತಂತ್ರಜ್ಞಾನ ಸಮಾವೇಶ'ದಲ್ಲಿ ಅವರು ರಫ್ತು ವಹಿವಾಟಿನಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಾಜ್ಯದ ವಿವಿಧ ಐಟಿ ಕಂಪನಿಗಳಿಗೆ ಭಾರತೀಯ ಸಾಫ್ಟ್ವೇರ್ ಪಾರ್ಕುಗಳ ಕೂಟ (ಎಸ್.ಟಿ.ಪಿ.ಐ) ನೀಡುವ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ, ಅತ್ಯುತ್ತಮ ಸಾಧನೆ ಮಾಡಿರುವ ಇನ್ಫೋಸಿಸ್ ಕಂಪನಿಗೆ ಕರ್ನಾಟಕದ ಐಟಿ ರತ್ನ' ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ಎಸ್ ಟಿ ಪಿ ಐ ಏಳು ವರ್ಷಗಳ ಹಿಂದೆಯೇ ರಾಜ್ಯ ಸರಕಾರದ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಸ್ಮಾರ್ಟ್' (ಸೆಮಿಕಂಡಕ್ಟರ್ ಮೆಷರ್ಮೆಂಟ್ ಅನಾಲಿಸಿಸ್ & ರಿಲೈಯಬಿಲಿಟಿ ಟೆಸ್ಟ್) ತೆರೆದಿದೆ. ಇದರಿಂದ ದೇಶದ ಸೆಮಿಕಂಡಕ್ಟರ್ ಮತ್ತು ಇ ಎಸ್ ಡಿಎಂ ವಲಯಗಳ ಕಾರ್ಯ ಪರಿಸರ ಸುಧಾರಿಸಿತು. ಜೊತೆಗೆ ನವೋದ್ಯಮಗಳು ಮತ್ತು ಸೆಮಿಕಂಡಕ್ಟರ್ ಕಂಪನಿಗಳು ವಿನ್ಯಾಸವನ್ನು ರೂಪಿಸಲು ತೆಗೆದುಕೊಳ್ಳುತ್ತಿದ್ದ ದೀರ್ಘ ಸಮಯಕ್ಕೆ ತೆರೆ ಬಿತ್ತು ಎಂದು ವಿವರಿಸಿದರು.












Click it and Unblock the Notifications