7th Pay Commission: ಹೊರಗುತ್ತಿಗೆ, ಗುತ್ತಿಗೆ ನೌಕರಿ ಬಗ್ಗೆ ಆಯೋಗದ ಶಿಫಾರಸುಗಳು
ಬೆಂಗಳೂರು, ಆಗಸ್ಟ್ 08: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿ, ಶಿಫಾರಸುಗಳನ್ನು ಜಾರಿಗೊಳಿಸುತ್ತಿದೆ. ಮೊದಲ ಹಂತದಲ್ಲಿ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿಯಲ್ಲಿ ಹೆಚ್ಚಳವಾಗಿದೆ. ಆದರೆ ವೇತನ ಆಯೋಗ ಇನ್ನೂ ಸಹ ಶಿಫಾರಸು ಮಾಡಿರುವ ಹಲವು ಅಂಶಗಳಿವೆ. ಇವುಗಳನ್ನು ಸಹ ಈಡೇರಿಕೆ ಮಾಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.
ರಾಜ್ಯ 7ನೇ ವೇತನ ಆಯೋಗ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 16ರಂದು ವರದಿ ನೀಡಿತ್ತು. 558 ಪುಟಗಳ ಸಂಪುಟ-1ರ ವರದಿಯಲ್ಲಿ ಹಲವಾರು ಅಂಶಗಳ ಕುರಿತು ಸರ್ಕಾರಕ್ಕೆ ಆಯೋಗ ಶಿಫಾರಸು ಸಲ್ಲಿಕೆ ಮಾಡಿದೆ. ಸದ್ಯ ವೇತನ, ಭತ್ಯೆ ಮಾತ್ರ ಹೆಚ್ಚಳವಾಗಿದ್ದು, ಉಳಿದ ಅಂಶಗಳನ್ನು ಸರ್ಕಾರ ಜಾರಿಗೊಳಿಸಬೇಕಿದೆ.

ಆಯೋಗ ಮಾಡಿರುವ ಶಿಫಾರಸುಗಳಲ್ಲಿ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದೆ. ಅಲ್ಲದೇ ಸರ್ಕಾರ ಗುತ್ತಿಗೆ, ಹೊರಗುತ್ತಿಗೆ ಮೂಲಕ ಹಲವು ಸಿಬ್ಬಂದಿಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತದೆ. ಈ ಕುರಿತು ಆಯೋಗದ ಶಿಫಾರಸು, ಅಭಿಪ್ರಾಯವೇನು? ಇಲ್ಲಿದೆ ಮಾಹಿತಿ.
ಹೊರಗುತ್ತಿಗೆ/ ಗುತ್ತಿಗೆ ನೌಕರರು: ಇಲಾಖೆಯ ಕಾರ್ಯ ನಿರ್ವಹಣೆಯಲ್ಲಿನ ಸಿಬ್ಬಂದಿಯ ಕೊರತೆಯನ್ನು ತಾತ್ಕಾಲಿಕ ಕ್ರಮವಾಗಿ ಹೊರಗುತ್ತಿಗೆಯ ಮೂಲಕ ನೀಗಿಸಲಾಗುತ್ತಿದೆ. ತಾಂತ್ರಿಕ ವಿದ್ಯಾರ್ಹತೆ ಅಗತ್ಯವಿರುವ ಹುದ್ದೆಗಳು, ಇಲಾಖಾ ಮುಖ್ಯಸ್ಥರ ಹುದ್ದೆಗಳು, ಸಚಿವರು ಮತ್ತು ಸಚಿವರ ಸ್ಥಾನಮಾನ ಹೊಂದಿರುವ ಸಚಿವರ ಆಪ್ತ ಶಾಖೆಯಲ್ಲಿನ ಸಿಬ್ಬಂದಿ, ಸಂಸತ್ ಸದಸ್ಯರು, ಕರ್ನಾಟಕ ವಿಧಾನ ಸಭೆ ಸದಸ್ಯರ ಮತ್ತು ವಿಧಾನ ಪರಿಷತ್ ಸದಸ್ಯರ ಆಪ್ತ ಸಹಾಯಕರು ಮತ್ತು ಸರ್ಕಾರದ ಮೂಲಕ ರಚಿಸಲಾದ ಆಯೋಗದ ಅಧ್ಯಕ್ಷಕರು ಅಥವಾ ಸಮಿತಿ ಮತ್ತು ಈ ಕಛೇರಿಗಳ ಅವಧಿಯೊಂದಿಗೆ ಸಹವರ್ತಿಯಾಗಿರುವಂತಹ ಆಪ್ತ ಶಾಖೆಯಲ್ಲಿನ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ನೇಮಕ ಮಾಡಿಕೊಳ್ಳಲು ಅವಕಾಶವಿರುವುದನ್ನು ಗಮನಿಸಲಾಗಿದೆ.
ಇನ್ನೊಂದೆಡೆ, ಇಲಾಖೆಗಳು ಗ್ರೂಪ್-ಡಿ ನೌಕರರು, ವಾಹನ ಚಾಲಕರು, ಬೆರಳಚ್ಚುಗಾರರು, ದತ್ತಾಂಶ ನಮೂದಕರು, ಅಡುಗೆಯವರು, ಅಡುಗೆ ಸಹಾಯಕರು, ಭದ್ರತಾ ಸಿಬ್ಬಂದಿಯ ಸೇವೆಯನ್ನು ಹೊರಗುತ್ತಿಗೆ ಮೂಲಕ ಪಡೆದು, ಇಲಾಖೆಯ ಕಾರ್ಯಬಲವನ್ನು ವೃದ್ಧಿಸಿಕೊಂಡಿರುತ್ತವೆ. 2023-24ರಲ್ಲಿ ಹೊರಗುತ್ತಿಗೆ ಅಥವಾ ಗುತ್ತಿಗೆ ಆಧಾರದ ಮೇಲೆ ಸುಮಾರು 68,000 ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ರೂ.1,685 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ಇದರ ಜೊತೆಗೆ, ಕರ್ನಾಟಕ ದಿನಗೂಲಿ ನೌಕರರ ಕಲ್ಯಾಣ ಅಧಿನಿಯಮ, 2012ರ ಉಪಬಂಧಗಳನ್ವಯ ಸುಮಾರು 7,000 ದಿನಗೂಲಿ ನೌಕರರ ಸೇವೆಗಳನ್ನು ಮುಂದುವರೆಸಲಾದ ಕಾರಣ, ವಿವಿಧ ಹಂತಗಳಲ್ಲಿ ಅಗತ್ಯವಿರುವ ಸಿಬ್ಬಂದಿಯ ಪೂರೈಕೆಯಾಗಿರುತ್ತದೆ ಹಾಗೂ ಈ ಉದ್ದೇಶಕ್ಕಾಗಿ ಪ್ರತಿ ವರ್ಷ ಅಂದಾಜು ರೂ. 250 ಕೋಟಿಗಳ ವೆಚ್ಚವಾಗುತ್ತಿದೆ.
ಹೊರಗುತ್ತಿಗೆ ನೇಮಕವು, ಕೆಲವು ವರ್ಗಗಳ ಕೆಲಸಗಳಿಗೆ ಆರ್ಥಿಕ ದೃಷ್ಟಿಯಿಂದ ಸರಿಯಾಗಿದೆ. ಉದಾಹರಣೆಗೆ, ಕಾರ್ಯಕಾರಿ ಕರ್ತವ್ಯಗಳನ್ನು ನಿರ್ವಹಿಸುವ ಅಧಿಕಾರಿಗಳಿಗೆ ಗೊತ್ತುಪಡಿಸಿದ ವಾಹನಗಳ ಜೊತೆಗೆ ಚಾಲಕರನ್ನು ಒದಗಿಸುವ ವ್ಯವಸ್ಥೆಯು ಮುಂದುವರೆದರೂ, ಅದನ್ನು ಈಗ ಕೇವಲ ಪ್ರಮುಖ ಅಧಿಕಾರಿಗಳಿಗೆ ಸೀಮಿತಗೊಳಿಸಲಾಗಿದೆ. ವಾಹನಗಳನ್ನು ಪಡೆಯಲು ಅರ್ಹರಾದ ಇತರೆ ಅಧಿಕಾರಿಗಳು, ಕಾಲಕಾಲಕ್ಕೆ ಸರ್ಕಾರದಿಂದ ನಿಗದಿಪಡಿಸಲಾದ ದರಗಳಲ್ಲಿ ವಾಹನಗಳನ್ನು ಬಾಡಿಗೆ ಪಡೆಯಲು ಮತ್ತು ಅವುಗಳನ್ನು ಕಛೇರಿಯ ಅಧಿಕೃತ ಕೆಲಸಗಳಿಗೆ ಉಪಯೋಗಿಸಿಕೊಳ್ಳಲು ಅನುಮತಿಸಲಾಗಿರುತ್ತದೆ.
ಈ ಕ್ರಮದಿಂದ ಹೊಸ ವಾಹನಗಳ ಖರೀದಿಯನ್ನು ಸೀಮಿತಗೊಳಿಸಿದ್ದು, ವಾಹನ ಚಾಲಕರ ನೇಮಕಾತಿ, ನಿರ್ವಹಣೆ ದರದಲ್ಲಿ ಗಮನಾರ್ಹ ಇಳಿಕೆ ಮತ್ತು ಸೀಮಿತ ಸರ್ಕಾರಿ ವಾಹನಗಳ ಬಳಕೆಗೆ ಕಾರಣವಾಗಿದೆ. ಅದೇ ರೀತಿ, ಕೇಂದ್ರ ಸ್ಥಳದಲ್ಲಿ ಬೃಹತ್ ಕಛೇರಿಗಳು ಇರುವಲ್ಲಿ, ಅವುಗಳ ಸುಸ್ಥಿತಿ ಮತ್ತು ನಿರ್ವಹಣೆ, ಉದ್ಯಾನ ನಿರ್ವಹಣೆ ಮತ್ತು ಭದ್ರತಾ ಸೇವೆಗಳನ್ನು ಹೊರಗುತ್ತಿಗೆಯ ಮೂಲಕವೇ ಪಡೆಯುವುದರಿಂದಾಗಿ ಇಂತಹ ಪ್ರತಿಯೊಂದು ದಿನನಿತ್ಯದ ಕೆಲಸಗಳಿಗಾಗಿ ನೌಕರರನ್ನು ನೇಮಕ ಮಾಡಿಕೊಳ್ಳುವ ಅವಶ್ಯಕತೆ ಇಲ್ಲದಂತಾಗಿದೆ.
ಕೆಲವು ಇಲಾಖೆಗಳು ಪ್ರಮುಖ ಸೇವೆಗಳನ್ನು ಸಹ ಹೊರಗುತ್ತಿಗೆಯ ಮೂಲಕ ಪಡೆಯುತ್ತಿರುವುದನ್ನು ಗಮನಿಸಲಾಗಿದೆ. ಈ ಸನ್ನಿವೇಶದಲ್ಲಿ, ಶಿಕ್ಷಣ, ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಭದ್ರತೆ, ಸಮಾಜ ಕಲ್ಯಾಣ, ಸಾರಿಗೆ ಇಲಾಖೆಗಳಂತ ಅಗತ್ಯ ಸೇವೆಗಳನ್ನು ಪೂರೈಸುವ ಇಲಾಖೆಗಳು, ದಕ್ಷತೆ, ಹೊಣೆಗಾರಿಕೆ ಮತ್ತು ನಿರಂತರ ಸೇವೆಗಳ ಪೂರೈಕೆಯನ್ನು ಖಚಿತಪಡಿಸಲು ಅಗತ್ಯ ಸಂಖ್ಯೆಯ ಖಾಯಂ ಸಿಬ್ಬಂದಿಯನ್ನು ಹೊಂದಿರಬೇಕು ಎಂಬುದು ಆಯೋಗದ ಅಭಿಪ್ರಾಯವಾಗಿದೆ.












Click it and Unblock the Notifications