7th Pay Commission: ಸಾಮಾನ್ಯ ಅವಲೋಕನಗಳು ಮತ್ತು ಸಲಹೆಗಳು
ಬೆಂಗಳೂರು, ಅಕ್ಟೋಬರ್ 21: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ 558 ಪುಟಗಳ ಸಂಪುಟ-1ರ ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಿದೆ. ಅಲ್ಲದೇ ಸಾಮಾನ್ಯ ಅವಲೋಕನಗಳು ಮತ್ತು ಸಲಹೆಗಳನ್ನು ನೀಡಿದೆ. ಆಯೋಗದ ಪರಿಶೀಲನಾರ್ಹ ಅಂಶಗಳಿಗೆ ಸಂಬಂಧಿಸಿದಂತೆ ಹಲವು ನೌಕರರ ಸಂಘಗಳು ಸಲ್ಲಿಸಿರುವ ಬೇಡಿಕೆಗಳನ್ನು ಪರಿಶೀಲಿಸಿದ್ದೇವೆ.
ಅವುಗಳ ಕುರಿತು ನಮ್ಮ ಶಿಫಾರಸುಗಳನ್ನು ರೂಪಿಸುವಾಗ, ಬೇಡಿಕೆಗಳ ಅರ್ಹತೆ, ಹಿಂದಿನ ವೇತನ ಆಯೋಗದ ಶಿಫಾರಸುಗಳ ನಂತರ ವಿವಿಧ ಇಲಾಖೆಗಳಲ್ಲಿನ ಬದಲಾವಣೆಗಳು, ಪ್ರಸ್ತುತ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರಿ ನೌಕರರ ಜೀವನ ನಿರ್ವಹಣೆ ಗುಣಮಟ್ಟದ ಮೇಲೆ ಪ್ರಭಾವ ಬೀರುವ ಜೀವನಾವಶ್ಯಕ ವೆಚ್ಚ ಮತ್ತು ಬೆಲೆ ಏರಿಕೆಯಂತಹ ಇತರ ಅಂಶಗಳು ಮತ್ತು ನೌಕರರ ಆಶಯಗಳನ್ನು ಪರಿಗಣನೆಗೆ ತೆಗೆದುಕೊಂಡಿರುತ್ತೇವೆ ಎಂದು ಹೇಳಿದೆ.

ವಹಿಸಲಾದ ಔಪಚಾರಿಕ ಪರಿಶೀಲನಾರ್ಹ ಅಂಶಗಳ ವ್ಯಾಪ್ತಿಯಿಂದ ಕೊಂಚ ವಿಮುಖವಾಗಿ, ಎಲ್ಲಾ ಹಂತದ ಸರ್ಕಾರಿ ನೌಕರರ ಕೌಶಲ್ಯವನ್ನು ಹೆಚ್ಚಿಸಲು ಮತ್ತು ನಾಗರಿಕರ ನಿರೀಕ್ಷೆಯಂತೆ ಅವರುಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಯಾವ ರೀತಿಯ ಸುಧಾರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಮೇಲೆ ಸಂಕ್ಷಿಪ್ತವಾಗಿ ಅಭಿಪ್ರಾಯವನ್ನು ತಿಳಿಸಿದ್ದೇವೆ.
ಅಂದರೆ, ನೌಕರರು ತಮ್ಮ ವೇತನ ಮತ್ತು ಭತ್ಯೆಗಳ ದೃಷ್ಟಿಯಿಂದ ಸರ್ಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ಕುರಿತು ಗಮನಿಸಿದಂತೆ, ನಾವು ಸರ್ಕಾರಿ ನೌಕರರಿಂದ ರಾಜ್ಯ ಮತ್ತು ನಾಗರಿಕರು ಏನನ್ನು ನಿರೀಕ್ಷಿಸುತ್ತಿದ್ದಾರೆ ಮತ್ತು ನೌಕರರ ಕಾರ್ಯದ ಗುಣಮಟ್ಟ ಮತ್ತು ಫಲಿತಾಂಶವನ್ನು ಹೆಚ್ಚಿಸಲು ಸರ್ಕಾರದಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತೇವೆ.
ಒಂದು ಸುಪ್ರಸಿದ್ಧ ಮಾತನ್ನು ಹೇಳುವುದಾದರೆ, ನೌಕರರು ಸರ್ಕಾರದಿಂದ ಏನು ಮಾಡಬಹುದು ಎಂದು ನಿರಂತರವಾಗಿ ಕೇಳುವ ಬದಲು ರಾಜ್ಯ ಮತ್ತು ನಾಗರಿಕರಿಗೆ ತಾವು ಏನನ್ನು ಮಾಡಬಹುದು ಎಂದು ಕೇಳುವ ಕಾರ್ಯಪ್ರವೃತ್ತಿಯನ್ನು ನಾವು ತರಬೇಕಾಗಿದೆ. ಸಮುದಾಯಕ್ಕೆ ಸೇವೆಗಳನ್ನು ಒದಗಿಸುವುದು ಮತ್ತು ಸಾರ್ವಜನಿಕರ ಜೀವನ ಗುಣಮಟ್ಟವನ್ನ ಸುಧಾರಿಸುವುದು ವಿಶೇಷವಾಗಿ, ಕೆಳ ಹಂತದಲ್ಲಿರುವವರ ಆರ್ಥಿಕ ಯೋಗಕ್ಷೇಮ ಸುಧಾರಿಸುವುದು ಸಾರ್ವಜನಿಕ ವಲಯದ ಪ್ರಮುಖ ಉದ್ದೇಶವಾಗಿರುತ್ತದೆ.
ಅಗಾಧ ಪರಿಣಾಮಗಳು: ಸರ್ಕಾರಿ ನೌಕರರು ತಮ್ಮ ಕಾರ್ಯಸ್ಥಳವನ್ನಾಧರಿಸಿ, ಸಾಮಾಜಿಕ ದಿಕ್ಕೂಚಿಯಾಗಿ ಲಭ್ಯ ಸಂಪನ್ಮೂಲಗಳ ನಿರ್ವಾಹಕನಾಗಿ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿಯುವವರಾಗಿ ಮತ್ತು ಕಾನೂನು ಪಾಲಕರಾಗಿ, ಉತ್ತಮ ಆಡಳಿತವನ್ನು ಪ್ರೋತ್ಸಾಹಿಸಲು ಬದಲಾವಣೆಯ ಹರಿಕಾರರು, ಇತ್ಯಾದಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾರೆ. ಈ ರೀತಿ, ಸರ್ಕಾರಿ ನೌಕರರು ತಾವು ಹೊಂದಿರುವ ಪ್ರಭಾವಿಯುತ ಸ್ನಾನಗಳಲ್ಲಿನ ಕಾರ್ಯವೈಖರಿ ಮತ್ತು ಅವರು ತೆಗೆದುಕೊಳ್ಳುವ ನಿರ್ಧಾರಗಳು ಸಮಾಜ ಮತ್ತು ಪರಿಸರದ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತವೆ. ಸಮಕಾಲಿನ ಜಗತ್ತಿನಲ್ಲಿ ಆಡಳಿತ ಶಾಹಿ ಸೇರಿದಂತೆ ರಾಜ್ಯ ಮತ್ತು ಸಾರ್ವಜನಿಕ ಸಂಸ್ಥೆಗಳ ಪ್ರಸಕ್ತತೆಯನ್ನು ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ವರದಿ (2023) ಯಲ್ಲಿ ಪ್ರಮುಖವಾಗಿ ಗುರುತಿಸಿದ್ದು, ಇತರ ವಿಷಯಗಳ ಜೊತೆಗೆ "ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ವೇಗವರ್ಧಿತ ಪ್ರಗತಿಯನ್ನು ತಲುಪಲು ಸರ್ಕಾರಗಳು ರಾಷ್ಟ್ರೀಯ ಮತ್ತು ಅದರಡಿಯಲ್ಲಿಯ ಸಾಮರ್ಥ್ಯ, ಹೊಣೆಗಾರಿಕೆ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಬಲಪಡಿಸಬೇಕು" ಎಂದು ತಿಳಿಸಿದೆ.
ಇಂದು ಸರ್ಕಾರದಲ್ಲಿ ಕೆಲವು ಹೊಸ ಕಾರ್ಯ ಕ್ಷೇತ್ರಗಳಾದ ತಂತ್ರಜ್ಞಾನ ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ವಿಶೇಷವಾಗಿ ರಾಜ್ಯಗಳಲ್ಲಿ ಪ್ರತಿಭಾನ್ವಿತರ ಕೊರತೆಯಿರುವುದು ಕಂಡು ಬಂದಿರುತ್ತದೆ. ಸರ್ಕಾರಿ ವಲಯಗಳ ಸಾಮರ್ಥ್ಯವು, ಕೌಶಲ್ಯಗಳ ಕೊರತೆಯಿಂದಾಗಿ ಪರಿಣಾಮಕಾರಿ ಸೇವೆಗಳನ್ನು ಒದಗಿಸಲು ಅಡ್ಡಿಯಾಗಿರುತ್ತದೆ. ಈ ಅಂಶವನ್ನು ಹೊರತುಪಡಿಸಿ, ಹೊಸ ಕಾರ್ಯಗಳನ್ನು ಸೃಷ್ಟಿಸುವುದರ ಮೂಲಕ ಸರ್ಕಾರವು ಅಗತ್ಯವಿರುವ ಹೊಸ ಪ್ರತಿಭೆಗಳನ್ನು ಗುರುತಿಸಿ ನೇಮಕ ಮಾಡಿಕೊಳ್ಳುವ ಅಗತ್ಯವಿರುವುದಲ್ಲದೆ, ಅಪ್ರಸ್ತುತವಾಗಿರುವುದನ್ನು ತೆಗೆದು ಹಾಕುವ ಅಗತ್ಯತೆಯು ಸಹ ಇರುತ್ತದೆ.
ರಾಜ್ಯ ಸರ್ಕಾರವು ಅಧಿಕಾರಿ ಶಾಯಿ ಎದುರಿಸುತ್ತಿರುವ ಕ್ಷಿಪ್ರವಾಗಿ ಬದಲಾಗುತ್ತಿರುವ ನಿರ್ಣಯ ಮಾಡಬೇಕಾದ ವಾತವರಣಕ್ಕೆ ಹೊಂದಿಕೊಳ್ಳುವ ಮಾನವ ಸಂಪನ್ಮೂಲಗಳು ಮತ್ತು ಸೂಕ್ತ ಕೌಶಲ್ಯಗಳ ಅಗತ್ಯತೆಗಳ ನಿರಂತರವಾದ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಸರ್ಕಾರದ ಉದ್ಯೋಗವು ಸಮಾಜಕ್ಕೆ ಕೊಡುಗೆ ನೀಡುವ ಅವಕಾಶವೆಂದು ಪರಿಗಣಿಸಲಾಗಿದ್ದು, ಅದು ಹಾಗೆಯೇ ಮುಂದುವರೆಯುತ್ತಿದೆ. ಸ್ಥಿರ ಆದಾಯ, ಉದ್ಯೋಗ ಭದ್ರತೆ ಮತ್ತು ವೃತ್ತಿ ಪ್ರಗತಿಗೆ ರಚನಾತ್ಮಕ ಅವಕಾಶಗಳು ಉದ್ಯೋಗದಾತರಾಗಿ ಸರ್ಕಾರದ ಉದ್ಯೋಗದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಆದಾಗ್ಯೂ, ಇಂದಿನ ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದಲ್ಲಿ ಅಗತ್ಯವಿರುವ ಪ್ರತಿಭಾನ್ವಿತರನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಸಾಂಪ್ರದಾಯಿಕ ಮಾನವ ಸಂಪನ್ಮೂಲ ನಿರ್ವಹಣೆ ಅಭ್ಯಾಸಗಳನ್ನು ಮೀರಿ ಮತ್ತು ನೌಕರರ ಒಟ್ಟಾರೆ ಯೋಗ ಕ್ಷೇಮ ಮತ್ತು ತೃಪ್ತಿಯನ್ನು ಹೆಚ್ಚಿಸುವ ಉಪಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದೆ.
ಕ್ರಿಯಾಶೀಲ ಮತ್ತು ತೊಡಗಿಸಿಕೊಳ್ಳುವ ಕಾರ್ಯಸ್ಥಳ ಸಂಸ್ಕೃತಿ, ಕೌಶಲ್ಯ ಅಭಿವೃದ್ಧಿಗೆ ಅವಕಾಶಗಳು ಮತ್ತು ಪೂರಕ ವಾತಾವರಣವು ಅಗತ್ಯವಾಗಿದೆ. ಕಾರ್ಯಸ್ವರೂಪ, ಕಾರ್ಯಬಲ ಮತ್ತು ಕಾರ್ಯಸ್ಥಳ, ಇವುಗಳ ಸತತವಾಗಿ ವಿಕಾಸಗೊಳ್ಳುವುದರ ಜೊತೆಗೆ ಹೊಸ ಆಲೋಚನೆಗಳು ಮತ್ತು ನಾವೀನ ಯೋಜನೆಗಳೊಂದಿಗೆ ನೌಕರರನ್ನು ನಿರಂತರವಾಗಿ ಕಾರ್ಯತತ್ಪರರನ್ನಾಗಿ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ತಿಳಿಸಿದೆ.












Click it and Unblock the Notifications