7th pay commission: ತುಟ್ಟಿ ಭತ್ಯೆ, ನಗರ ಪರಿಹಾರ ಭತ್ಯೆ, ಸೇವಾ ಭತ್ಯೆ ಸೇರಿದಂತೆ ವೇತನ ಆಯೋಗದ ಭತ್ಯೆಗಳ ಸಂಪೂರ್ಣ ವಿವರ
ಬೆಂಗಳೂರು, ಮಾರ್ಚ್. 29: ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕರ್ನಾಟಕ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿ ಜಾರಿಯಾಗುವ ಅಷ್ಟರಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಸರ್ಕಾರಿ ನೌಕರರ ಆಸೆಗೆ ತಣ್ಣೀರು ಬಿದ್ದ ಹಾಗಿದೆ.
ಇನ್ನು, ಈ ವೇತನ ಆಯೋಗವು ತನ್ನ ವರದಿಯಲ್ಲಿ ವೇತನ, ಭತ್ಯೆ, ತುಟ್ಟಿ ಭತ್ಯೆ, ನಗರ ಪರಿಹಾರ ಭತ್ಯೆ, ಸೇವಾ ಭತ್ಯೆ ಸೇರಿ ಹಲವು ಶಿಫಾರಸುಗಳನ್ನು ಆಯೋಗ ಸಲ್ಲಿಕೆ ಮಾಡಿದೆ. ಈ ವರದಿಯ ಪ್ರಕಾರ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಸೇವಾ ಭತ್ಯೆ, ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಭತ್ಯೆ, ವೈದ್ಯಕೀಯ ಭತ್ಯೆ ಮತ್ತು ಪ್ರಭಾರ ಭತ್ಯೆ ಎಷ್ಟಕ್ಕೆ ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂಬುದನ್ನು ತಿಳಿಯೋಣ.

1. ವೇತನ ನಿಗದಿಯ ಕ್ರಮ : ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗದಿಯ ಕ್ರಮ ಹೇಗಿದೆ ಎಂದರೇ, ದಿನಾಂಕ: 01.07.2022ರಲ್ಲಿ ಇದ್ದಂತೆ ಮೂಲ ವೇತನ ಮತ್ತು ಸದರಿ ದಿನಾಂಕಕ್ಕೆ ಇದ್ದ ಶೇಕಡಾ 31 ರಷ್ಟು ತುಟ್ಟಿ ಭತ್ಯೆ ಮತ್ತು ದಿನಾಂಕ: 01.07.2022 ರಂದು ಇದ್ದಂತ ಮೂಲ ವೇತನಕ್ಕೆ ಶೇ.27.50ರಷ್ಟು ಫಿಟೆಂಟ್ ಸೌಲಭ್ಯ ಈ ಎಲ್ಲಾ ಸೌಲಭ್ಯಗಳು ಸೇರಿಸಿ ಹೊಸ ಮೂಲ ವೇತನ ಮೊತ್ತದ ಮುಂದಿನ ಹಂತಕ್ಕೆ ನಿಗದಿಗೊಳಿಸನೇಕು ಎಂದು ಶಿಫಾರಸು ಮಾಡಿದೆ.
2. ತುಟ್ಟಿ ಭತ್ಯೆ: ಭಾರತ ಸರ್ಕಾರದಿಂದ ಮಂಜೂರಾಗುವ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರಾಗುವ ತುಟ್ಟಿ ಭತ್ಯೆಯು ಶೇ.0.722 ಆಗಿರುತ್ತದೆ.
3. ಮನೆ ಬಾಡಿಗೆ ಭತ್ಯೆ: 7ನೇ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಮನವಿಯಲ್ಲಿ ಮನೆ ಬಾಡಿಗೆ ಭತ್ಯೆ 25 ಲಕ್ಷಕ್ಕೆ ಮೇಲ್ಪಟ್ಟು 'ಎ' ವರ್ಗ. ಮೂಲ ವೇತನದ ಶೇ 30ರಷ್ಟು. 5 ಲಕ್ಷ ಮತ್ತು ಅದಕ್ಕೂ ಹೆಚ್ಚು ಆದರೆ 25 ಲಕ್ಷ ಮೀರದಂತೆ 'ಬಿ' ವರ್ಗ. ಮೂಲ ವೇತನದ ಶೇ 20ರಷ್ಟು. 5 ಲಕ್ಷಕ್ಕಿಂತ ಕಡಿಮೆ 'ಸಿ' ವರ್ಗ ಮೂಲ ವೇತನದ ಶೇ 15ರಷ್ಟು ನಿಗದಿ ಮಾಡಬೇಕು ಎಂದಿದೆ.

4. ನಗರ ಪರಿಹಾರ ಭತ್ಯೆ: ನಗರ ಪರಿಹಾರ ಭತ್ಯೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು ಪಾಲಿಕೆಗಳು ಎಂದು ಎರಡು ವಿಧದಲ್ಲಿ ವಿಂಗಡಿಸಲಾಗಿದೆ. ಇದರಲ್ಲಿಯೂ ಎ, ಬಿ, ಸಿ, ಡಿ ಎಂದು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಡಿಯಲ್ಲಿ ಎ ಮತ್ತು ಬಿ ವರ್ಗಗಳ ಪ್ರಸ್ತುತ ದರ 600 ಇದ್ದು ಅದು 900ಕ್ಕೆ ಏರಿಕೆಯಾಗಲಿದೆ. ಸಿ ಮತ್ತು ಡಿ ವರ್ಗಗಳ ಪ್ರಸ್ತುತ ದರ 500 ಇದ್ದು ಅದು 750ಕ್ಕೆ ಏರಿಕೆಯಾಗಲಿದೆ. ಇನ್ನು, ಉಳಿದ ಮಹಾನಾಗರ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು ಪಾಲಿಕೆಗಳ ಎ ಮತ್ತು ಬಿ ವರ್ಗಗಳ ಪ್ರಸ್ತುತ ದರ 450 ಇದ್ದು ಅದು 700ಕ್ಕೆ ಏರಿಕೆಯಾಗಲಿದೆ. ಸಿ ಮತ್ತು ಡಿ ವರ್ಗಗಳ ಪ್ರಸ್ತುತ ದರ 400 ಇದ್ದು ಅದು 600ಕ್ಕೆ ಏರಿಕೆಯಾಗಲಿದೆ.
5. ಸಾಮೂಹಿಕ ವಿಮಾ ಯೋಜನೆಯ ಮಾಸಿಕ ವಂತಿಕೆ: ಪ್ರಸ್ತುತ ವಂತಿಕೆ ಗ್ರೂಪ್ -ಎ ವರ್ಗದವರಿಗೆ 480 ಇದ್ದು, ಅದು ಪರಿಷ್ಕೃತ ವಂತಿಕೆ 720ಕ್ಕೆ ಏರಿಕೆಯಾಗಲಿದೆ. ಗ್ರೂಪ್-ಬಿ ವರ್ಗದವರಿಗೆ 360 ಇದ್ದು, ಅದು ಪರಿಷ್ಕೃತ ವಂತಿಕೆ 540ಕ್ಕೆ ಏರಿಕೆಯಾಗಲಿದೆ. ಗ್ರೂಪ್-ಸಿ ವರ್ಗದವರಿಗೆ 240 ಇದ್ದು, ಅದು ಪರಿಷ್ಕೃತ ವಂತಿಕೆ 480ಕ್ಕೆ ಏರಿಕೆಯಾಗಲಿದೆ. ಗ್ರೂಪ್-ಡಿ ವರ್ಗದವರಿಗೆ 120 ಇದ್ದು, ಅದು ಪರಿಷ್ಕೃತ ವಂತಿಕೆ 240ಕ್ಕೆ ಏರಿಕೆಯಾಗಲಿದೆ.
6. ಪ್ರಭಾರ ಭತ್ಯೆ: ಸರ್ಕಾರಿ ನೌಕರರ ಮೂಲ ವೇತನದ ಶೇ.15ರಷ್ಟು ಪ್ರಭಾರ ಭತ್ಯೆ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ.
7. ನಿಯೋಜನೆ ಭತ್ಯೆ/ಅನ್ಯ ಸೇವೆ ಭತ್ಯೆ: ಪ್ರತಿ ಮಾಹೆಯಾನ ಮೂಲ ವೇತನದ ಶೇ.5 ರಷ್ಟು ಮತ್ತು ಗರಿಷ್ಠ ರೂ.2000 ಗಳ ಹೆಚ್ಚಳದೊಂದಿಗೆ ನಿಯೋಜನೆ ಭತ್ಯೆ/ಅನ್ಯ ಸೇವೆ ಭತ್ಯೆ ನೀಡುವಂತೆ ಶಿಫಾರಸು ಮಾಡಲಾಗಿದೆ.
8. ವೈದ್ಯಕೀಯ ಭತ್ಯೆ: ವೈದ್ಯಕೀಯ ಭತ್ಯೆಯಲ್ಲಿ ಗ್ರೂಪ್ ಸಿ ಮತ್ತು ಡಿ ಬರಲಿದ್ದು, ಎರಡು ವರ್ಗಗಳಿಗೆ ಪ್ರಸ್ತುತ ಭತ್ಯೆ 200 ಇದ್ದು, ಇದನ್ನು 500ಕ್ಕೆ ಏರಿಸಬೇಕು ಎಂದು ಶಿಫಾರಸ್ಸು ಮಾಡಿದೆ.
9. ಹೊರ ರಾಜ್ಯ ಭತ್ಯೆ: ಹೊರ ರಾಜ್ಯ ಭತ್ಯೆಯಲ್ಲಿ ನವ ದೆಹಲಿ ಮತ್ತು ಹೊರ ರಾಜ್ಯ ಎಂದು ಎರಡು ವಿಭಾಗ ಮಾಡಲಾಗಿದ್ದು, ಪ್ರಸ್ತುತ ದರ ಮೂಲ ವೇತನಕ್ಕೆ ಶೇ.35 ಇದ್ದು, ಅದನ್ನು ಅಷ್ಟೇ ಉಳಿಸಿಕೊಳ್ಳಬೇಕು. ಹೊರ ರಾಜ್ಯಗಳ ಪರಿಷ್ಕೃತ ದರ ಮೂಲ ವೇತನಕ್ಕೆ ಶೇ.10ರಷ್ಟು ಇದ್ದು ಅದನ್ನು 15ಕ್ಕೆ ಏರಿಕೆ ಮಾಡಲು ಶಿಫಾರಸು ಮಾಡಲಾಗಿದೆ.
10. ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಭತ್ಯೆ ಪ್ರಸ್ತುತ 1000 ಇದ್ದು, ಅದರ ಪರಿಷ್ಕೃತ ಭತ್ಯೆ 2000 ಆಗಬೇಕು ಎಂದು ಏಳನೇ ವೇತನ ಆಯೋಗ ಶಿಫಾರಸು ಮಾಡಿದೆ.












Click it and Unblock the Notifications