ಹೊಸ ಮೈಲಿಗಲ್ಲು: ಕರ್ನಾಟಕದಲ್ಲಿ 6 ಕೋಟಿ ಮಂದಿಗೆ ಕೊರೊನಾವೈರಸ್ ಪರೀಕ್ಷೆ
ಬೆಂಗಳೂರು, ಜನವರಿ 22: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿರ್ವಹಣೆಯಲ್ಲಿ ಕರ್ನಾಟಕವು ಮೊದಲಿನಿಂದಲೂ ಎಚ್ಚರಿಕೆ ಹೆಜ್ಜೆಯನ್ನು ಇಡುತ್ತಾ ಬಂದಿದೆ. ರಾಜ್ಯದಲ್ಲಿ ಈವರೆಗೂ 6 ಕೋಟಿ ಮಂದಿಗೆ ಕೊವಿಡ್-19 ಸೋಂಕಿನ ಪರೀಕ್ಷೆ ನಡೆಸಲಾಗಿದೆ. ದೇಶದಲ್ಲಿ ಅತಿಹೆಚ್ಚು ಸೋಂಕು ಪರೀಕ್ಷೆ ನಡೆಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
Koo AppTesting has been one of the cornerstones of Karnataka’s success in fighting Covid. We have completed 6️⃣ crore tests since the beginning of the pandemic, third highest in the country. Congratulations to all the health workers and district administration who made this possible. - Dr. Sudhakar K (@drsudhakark.official) 22 Jan 2022
6 ಕೋಟಿ ಜನರಿಗೆ ಕೊರೊನಾವೈರಸ್ ಸೋಂಕು ಪರೀಕ್ಷೆ ಮಾಡುವುದರ ಮೂಲಕ ರಾಜ್ಯವು ಹೊಸ ಮೈಲಿಗಲ್ಲು ತಲುಪಿದೆ. ಕೊವಿಡ್ ನಿಯಂತ್ರಣ ಕಾರ್ಯದಲ್ಲಿ ಇದು ದೊಡ್ಡ ಯಶಸ್ಸು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 48,049 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 34,25,002ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 22 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಇದೇ ಅವಧಿಯಲ್ಲಿ 18,115 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇದರ ಮಧ್ಯೆ ರಾಜ್ಯದಲ್ಲಿ ಕೊವಿಡ್-19 ಸೋಂಕಿನ ಪರೀಕ್ಷೆ ಮತ್ತು ಪ್ರಯೋಗಾಲಯಗಳ ಕುರಿತಾಗಿ ಆರೋಗ್ಯ ಸಚಿವರು ನೀಡಿರುವ ಮಾಹಿತಿ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ರಾಜ್ಯದಲ್ಲಿ ಕೊರೊನಾವೈರಸ್ ಪರೀಕ್ಷೆಗೆ 268 ಪ್ರಯೋಗಾಲಯ
ಕೋವಿಡ್ ಆರಂಭವಾದಾಗ ರಾಜ್ಯದಲ್ಲಿ ಎನ್‍ಐವಿ ಘಟಕದಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಈ ಹಿಂದೆ ಪುಣೆಯ ಎನ್‍ಐವಿ ಘಟಕಕ್ಕೆ ಮಾದರಿಗಳನ್ನು ಕಳುಹಿಸಲಾಗುತ್ತಿತ್ತು. ನಂತರ ಹಂತ-ಹಂತವಾಗಿ ಹೊಸ ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳನ್ನು ಆರಂಭಿಸಲಾಯಿತು. ಸದ್ಯ ರಾಜ್ಯದಲ್ಲಿ 99 ಸರ್ಕಾರಿ ಹಾಗೂ 169 ಖಾಸಗಿ ಸೇರಿ ಒಟ್ಟು 268 ಲ್ಯಾಬ್ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಈವರೆಗೆ 1,14,12,162 ರಾಪಿಡ್ ಆಂಟಿಜೆನ್, 4,87,02,653 RT-PCR ಹಾಗೂ ಇತರೆ ವಿಧಾನಗಳು ಸೇರಿ ಒಟ್ಟು 6,01,14,815 ಕೊವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. 2020 ರಲ್ಲಿ ಒಟ್ಟು 1,41,96,065, 2021 ರಲ್ಲಿ 4,23,91,357 ಹಾಗೂ 2022ರಲ್ಲಿ ಈವರೆಗೆ 35,27,393 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಆರೋಗ್ಯ ಸಿಬ್ಬಂದಿಗೆ ಸಚಿವ ಸುಧಾಕರ್ ಅಭಿನಂದನೆ
ಕೊವಿಡ್-19 ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಉತ್ತಮ ಪರೀಕ್ಷಾ ವ್ಯವಸ್ಥೆ ಕೂಡ ಪ್ರಮುಖ ಕಾರಣವಾಗಿದೆ. ಆರಂಭದಿಂದಲೂ ಕರ್ನಾಟಕ ಪರೀಕ್ಷಾ ವ್ಯವಸ್ಥೆಯಲ್ಲಿ ಮುಂದಿದ್ದು, ಉತ್ತಮ ಪರೀಕ್ಷೆ ಹಾಗೂ ಟ್ರ್ಯಾಕಿಂಗ್ ವಿಧಾನ ಅಳವಡಿಸಿಕೊಂಡಿದೆ. ಈಗ 6 ಕೋಟಿ ಪರೀಕ್ಷೆಗಳ ಮೂಲಕ ಕೊವಿಡ್ ಹೋರಾಟದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ಹೆಚ್ಚು ಕೊವಿಡ್ ಪರೀಕ್ಷೆ ನಡೆಸಿದ ರಾಜ್ಯಗಳಲ್ಲಿ ರಾಜ್ಯವು ಇಡೀ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಇದನ್ನು ಸಾಧ್ಯವಾಗಿಸಿದ ಎಲ್ಲಾ ಜಿಲ್ಲಾಡಳಿತ ಹಾಗೂ ಆರೋಗ್ಯ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ," ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಕೊವಿಡ್-19 ಪರೀಕ್ಷಾ ಸಾಮರ್ಥ್ಯ ಹೆಚ್ಚಿಸುವುದು
ಕರ್ನಾಟಕದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಆರಂಭದಿಂದ 5ಟಿ ವಿಧಾನ (ಟೆಸ್ಟ್, ಟ್ರ್ಯಾಕ್, ಟ್ರೇಸಿಂಗ್, ಟ್ರಯಾಜಿಂಗ್, ಟೆಕ್ನಾಲಜಿ) ಅನುಸರಿಸಿದ್ದವು. 20 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿಯ 3,102 ಮತ್ತು ಖಾಸಗಿಯ 666 ಸೇರಿದಂತೆ ಒಟ್ಟು 3,678 ಮಾದರಿ ಸಂಗ್ರಹ ಕೇಂದ್ರಗಳನ್ನು ಆರಂಭಿಸಲಾಯಿತು. ಇದರ ಜೊತೆಗೆ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆಯ ಪ್ರಯೋಗಾಲಯಗಳಲ್ಲಿ RT-PCR ಪರೀಕ್ಷೆ ಆರಂಭಿಸಲಾಯಿತು.
ರಾಜ್ಯದಲ್ಲಿ ಒಟ್ಟು 63 ವೈದ್ಯಕೀಯ ಕಾಲೇಜುಗಳಲ್ಲಿ RT-PCR ಪರೀಕ್ಷೆ ಆರಂಭಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ 10 ರಿಂದ 12 ಸರ್ಕಾರಿ ಪ್ರಯೋಗಾಲಯಗಳಲ್ಲಿ ಮಾತ್ರ RT-PCR ಪರೀಕ್ಷಾ ವ್ಯವಸ್ಥೆಗಳಿದ್ದು, ಈಗ ಆದರ ಸಂಖ್ಯೆಯನ್ನು 57ಕ್ಕೆ ಹೆಚ್ಚಿಸಲಾಗಿದೆ. 108 ಆರ್ಎನ್‍ಎ ಎಕ್ಸ್ ಟ್ರ್ಯಾಕ್ಟರ್, 139 ಆರ್ ಟಿಪಿಸಿಆರ್ ಯಂತ್ರ ಹಾಗೂ ಒಂದು ಪೂರ್ಣ ಪ್ರಮಾಣದ ಯಂತ್ರದ ಮೂಲಕ ದಿನದ ಪರೀಕ್ಷಾ ಸಾಮರ್ಥ್ಯವನ್ನು 1,20,800ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ರೂಪಾಂತರಿ ಪ್ರಕರಣ ಪತ್ತೆಯಾದ ಬಳಿಕ, ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಲ್ಲಿ ಶೇ.2ರಷ್ಟು ಪರೀಕ್ಷೆಗೊಳಪಡಿಸುವ ಕ್ರಮ ಜಾರಿ ಮಾಡಲಾಯಿತು. ಡಿಸೆಂಬರ್ ನಂತರ ಪರೀಕ್ಷಾ ಗುರಿಯನ್ನು 80,000 ದಿಂದ 1 ಲಕ್ಷಕ್ಕೆ ಹೆಚ್ಚಿಸಲಾಯಿತು ಎಂದು ಅವರು ವಿವರಿಸಿದ್ದಾರೆ.

ರಾಜ್ಯದಲ್ಲಿ ಮಕ್ಕಳಿಗೂ ಕೊವಿಡ್-19 ಪರೀಕ್ಷೆ
ಕೊರೊನಾವೈರಸ್ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಅಭಿಪ್ರಾಯವಿದೆ. ಈ ಹಿನ್ನೆಲೆ ಒಟ್ಟು ಪರೀಕ್ಷೆಯಲ್ಲಿ ಶೇ.2ರಷ್ಟು ಮಕ್ಕಳು ಇರಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಕಳೆದ ಡಿಸೆಂಬರ್ 1 ರಿಂದ ಜನವರಿ 20ರ ಅವಧಿಯಲ್ಲಿ ನಡೆಸಲಾದ ಒಟ್ಟು ಕೊವಿಡ್-19 ಪರೀಕ್ಷೆಯಲ್ಲಿ ಶೇ.29ರಷ್ಟು ಮಕ್ಕಳಿದ್ದಾರೆ. ಇದರ ಜೊತೆಗೆ, 15 ದಿನಕ್ಕೊಮ್ಮೆ ಕಾಲೇಜು, ಪ್ರೌಢಶಾಲೆ, ಹೋಟೆಲ್, ರೆಸ್ಟೋರೆಂಟ್, ಅಡುಗೆ ಸಿಬ್ಬಂದಿ ಮೊದಲಾದವರಿಗೆ ರಾಂಡಮ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.
ಕೊವಿಡ್-9 ಕುರಿತಾದ ಇತರೆ ಅಂಶಗಳು:
- ಕೊವಿಡ್-19 ಮೂರನೇ ಅಲೆ ನಿರ್ವಹಣೆಗಾಗಿ ಜನವರಿ 18 ರಿಂದ ದಿನಕ್ಕೆ 2 ಲಕ್ಷ ಜನರಿಗೆ ಪರೀಕ್ಷೆ ನಡೆಸುವ ಗುರಿ ನಿಗದಿಪಡಿಸಲಾಗಿದೆ
- ಪ್ರಾಥಮಿಕ ಸಂಪರ್ಕ ಹಾಗೂ ರೋಗಲಕ್ಷಣ ಇರುವವರಿಗೆ ಪರೀಕ್ಷೆಗೆ ಒತ್ತು. RAT ಪರೀಕ್ಷೆಯಲ್ಲಿ ನೆಗಟಿವ್ ವರದಿ ಬಂದರೂ, ರೋಗ ಲಕ್ಷಣವಿದ್ದರೆ RT-PCR ಪರೀಕ್ಷೆ ನಡೆಸುವುದು.
- ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರಿಂದ ಮನೆ-ಮನೆ ಭೇಟಿ ನೀಡಿ ಪರೀಕ್ಷೆ ನಡೆಸುವುದು
- ಸಂಚಾರಿ ತಂಡಗಳನ್ನು ಬಳಸಿಕೊಂಡು ಮಾನಸಿಕ ಅಸ್ವಸ್ಥರು, ಅಂಗವಿಕಲರ ಮನೆಗೆ ಭೇಟಿ ನೀಡಿ ಕೊವಿಡ್ ಪರೀಕ್ಷೆ ನಡೆಸುವುದು












Click it and Unblock the Notifications