371 (ಜೆ ) ಅಡಿ 5977 ಹುದ್ದೆ ಭರ್ತಿ : ಸಚಿವ ಡಿ. ಸುಧಾಕರ್
ಬೆಳಗಾವಿ, ಡಿಸೆಂಬರ್ 19: 371(ಜೆ ) ಕಾಯ್ದೆಯನ್ವಯ ರಾಜ್ಯದಾದ್ಯಂತ ಸರ್ಕಾರಿ ನೇಮಕಾತಿಯಲ್ಲಿ ರಾಜ್ಯಮಟ್ಟದ ಸ್ಥಳೀಯ ವೃಂದದ ನೇರ ನೇಮಕಾತಿಯಲ್ಲಿ 9695 ಹುದ್ದೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ 5977 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಹೇಳಿದರು.
ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಜಗದೇವ್ ಗುತ್ತೇದಾರ್ ಅವರ ಪ್ರಶ್ನೆಗೆ ಉತ್ತರಿಸಿ, 371(ಜೆ ) ಅಡಿ ವಿವಿಧ ನೇಮಕಾತಿ ಸಂಸ್ಥೆಗಳಲ್ಲಿ 1658 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದ್ದು ಇನ್ನು 2035 ಹುದ್ದೆಗಳ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕಿದೆ. ಈಗಾಗಲೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಕ್ರಮವಹಿಸಲು ಎಲ್ಲಾ ಇಲಾಖೆಗಳಿಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸೂಚನೆ ನೀಡಲಾಗಿದೆ ಎಂದರು.

371 (ಜೆ) ಅಡಿಯಲ್ಲಿ ನೇಮಕವಾಗಿರುವ ನೌಕರರು ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಸದರಿ ಅಂಶಗಳನ್ನು ಆದ್ಯತೆ ಮೇಲೆ ಚರ್ಚಿಸಿ, ಸಂಬಂಧಪಟ್ಟ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳಿಗೆ ಲಿಖಿತ ಸೂಚನೆ ನೀಡುವುದರ ಮೂಲಕ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು
ಅಕ್ರಮ ಮದ್ಯ ಮಾರಾಟ ವಿರುದ್ಧ ಕಠಿಣ ಕ್ರಮ : ತಿಮ್ಮಾಪುರ
ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಸ್ಪಷ್ಟಪಡಿಸಿದರು. ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಸುನಿಲ್ ಗೌಡ ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವ ತಿಮ್ಮಾಪುರ ಅವರು ಉತ್ತರಿಸಿದರು.
ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಕಳೆದ ಮೂರು ವರ್ಷಗಳಲ್ಲಿ ಒಟ್ಟು 5751 ದಾಳಿಗಳನ್ನು ನಡೆಸಿ, 4437 ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಕರಣಗಳಲ್ಲಿ ಭಾಗಿಯಾದ 5021 ಆರೋಪಿತರನ್ನು ದಸ್ತಗಿರಿ ಮಾಡಲಾಗಿದೆ ಎಂದು ಸಚಿವ ತಿಮ್ಮಾಪುರ ಅವರು ತಿಳಿಸಿದರು.
ಅಬಕಾರಿ ಇಲಾಖೆಯ ವರ್ಗಾವಣೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಸ್ಪಷ್ಟಪಡಿಸಿದರು. ಅಬಕಾರಿ ಇಲಾಖೆಯಲ್ಲಿ ಡಿಸೇಂಬರ್ 2023 ರಿಂದ ನವೆಂಬರ್ 2024 ರ ವರೆಗೆ ಗ್ರೂಪ್ ಎ, ಬಿ ಮತ್ತು ಸಿ ವೃಂದದಲ್ಲಿ 336 ವರ್ಗಾವಣೆಯಾಗಿದ್ದು ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸಚಿವರು ತಿಳಿಸಿದರು.
ಪ್ರಸಕ್ತ ಆರ್ಥಿಕ ಸಾಲಿನ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ಮಾಹೆಗಳಲ್ಲಿ semi premium ಮತ್ತು premium ಮದ್ಯದ ಸ್ಲಾಬ್‌ಗಳ ಮದ್ಯ ಮಾರಾಟದ ಪಾಲು ಶೇ.21.03 ರಷ್ಟಾಗಿರುತ್ತದೆ. ಅಂದರೆ, semi premium ಮತ್ತು premium ಮದ್ಯದ ಬ್ರಾಂಡ್‌ಗಳ ಮಾರಾಟದಲ್ಲಿ ಶೇ. 6.85 ರಷ್ಟು ಹೆಚ್ಚಳವಾಗಿರುತ್ತದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ semi premium ಮತ್ತು premium ಬ್ರಾಂಡ್‌ಗಳ ಬಳಕೆ ಹೆಚ್ಚಾಗುವ ಮೂಲಕ ಮಾರಾಟ ಹೆಚ್ಚಳದಿಂದ ರಾಜಸ್ವ ಸಂಗ್ರಹಣೆಯಲ್ಲಿ ಧನಾತ್ಮಕ ಬೆಳವಣಿಗೆ ಕಂಡು ಅಂದಾಜಿಸಲಾಗಿದೆ ಎಂದರು.












Click it and Unblock the Notifications