PSI 545 Re-exam Selection List : 545 PSI ಮರುಪರೀಕ್ಷೆಯ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟ
ಬೆಂಗಳೂರು, ಅಕ್ಟೋಬರ್ 21: ಕರ್ನಾಟಕ ರಾಜ್ಯ ಸರ್ಕಾರವು ದೀಪಾವಳಿಗೆ ಸಿಹಿ ಸುದ್ದಿ ನೀಡಿದೆ. ದೊಡ್ಡ ಅಕ್ರಮ ನಡೆದ ಬಳಿಕ ಮರು ಪರೀಕ್ಷೆ ನಡೆಸಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪಟ್ಟಿಯನ್ನು ಸರ್ಕಾರ ಸೋಮವಾರ (ಅಕ್ಟೋಬರ್ 21) ರಂದು ಬಿಡುಗಡೆ ಮಾಡಿದೆ. ಈ ಮೂಲಕ ಆರೋಪ ಮಾಡುತ್ತಿದ್ದ ವಿಪಕ್ಷಗಳ ಬಾಯಿಗೆ ಬೀಗ ಹಾಕಿದೆ.
ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಯಲ್ಲಿ ನಡೆದಿದ್ದ ಅಕ್ರಮವು ಸಂಚಲನ ಸೃಷ್ಟಿಸಿತ್ತು. ಇದಾದ ಬಳಿಕ ಹೈಕೋರ್ಟ್ ಸೂಚನೆ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರವು ಮತ್ತೆ ಮರು ಪರೀಕ್ಷೆ ನಡೆಸಿತ್ತು. ಆದರೆ ಫಲಿತಾಂಶ ಹೊರ ಬಿಟ್ಟಿತೆ ವಿನಃ ಆಯ್ಕೆ ಪಟ್ಟಿ ಪ್ರಕಟಿಸಿರಲಿಲ್ಲ. ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಇದೀಗ ರಾಜ್ಯ ಸರ್ಕಾರ ಅಕ್ಟೊಬರ್ 21ರಂದು ಪಿಎಸ್‌ಐ ನೇರ ನೇಮಕಾತಿಗಳ 01.01.2023ರ ಸುತ್ತೋಲೆಯ ಅನ್ವಯ ಆಯ್ಕೆ ಪಟ್ಟಿ ತಯಾರಿಸಿ ಪ್ರಕಟಗೊಳಿಸಿದೆ.
ದಿನಾಂಕ: 06.06.2020 ರ ಸುತ್ತೋಲೆ ಅನ್ವಯ ಆಯ್ಕೆ ಪಟ್ಟಿಯಿಂದ ಹೊರಗುಳಿಯುವ 40 ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗನುಗುಣವಾಗಿ 40 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ ಕಾಯ್ದಿರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಯ್ಕೆಯನ್ನು ಪ್ರಕಟಿಸುವ ಸಂದರ್ಭದಲ್ಲಿ ಈ ಆಯ್ಕೆ ಪಟ್ಟಿಯು ಮಾನ್ಯ ಉಚ್ಚ ನ್ಯಾಯಾಲಯವು ರಿಟೊ ಪಿಟಿಷನ್ 20:16343/20240 ಅಂತಿಮ ತೀರ್ಪಿಗೊಳಪಟ್ಟಿದೆ. ಅಲ್ಲದೇ ಈ ಆಯ್ಕೆ ಪಟ್ಟಿಯ ವೃಂದ ಬದಲಾವಣೆ, ಮೀಸಲಾತಿ ಪ್ರಚಾರ ಬದಲಾವಣೆ, ಅರ್ಹತಾ ಸ್ಥಾನ ಮತ್ತು ಘಟಕಗಳ ಬದಲಾವಣೆ ಆಗುವ ಸಾಧ್ಯತೆಗಳಿರುವ ಷರತ್ತುಗಳನ್ನು ವಿಧಿಸುತ್ತದೆ ಎಂದು ಸರ್ಕಾರ ಆಯ್ಕೆ ಪಟ್ಟಿಯಲ್ಲಿ ತಿಳಿಸಿದೆ.
ಸಿಎಂಗೆ ಅಭ್ಯರ್ಥಿಗಳ ರಕ್ತದಿಂದ ಪತ್ರ
ಇತ್ತೀಚೆಗೆ ರಾಜ್ಯ ಸರ್ಕಾರದ ವಿರುದ್ಧ ಪಿಎಸ್ಐ ಪರೀಕ್ಷೆ ಬರೆ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದರು. ಈ ಮೂಲಕ ತಮ್ಮ ಹತಾಶೆ, ನಿರೀಕ್ಷೆ ಹುಸಿಯಾಗುತ್ತಿರುವ ಬಗ್ಗೆ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದರು.
ಇದರ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಭ್ಯರ್ಥಿಗಳ ಪರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದರು. ಜಾತಿ ಗಣತಿ ವರದಿ ಬಿಡುಗಡೆಗೆ ಆತುರ ತೋರುವ ರಾಜ್ಯ ಸರ್ಕಾರ, ಪಿಎಸ್ಐ ನೇಮಕಾತಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಲು ಯಾಕೆ ತಡ ಮಾಡುತ್ತಿದೆ ಎಂದು ಪ್ರಶ್ನಿಸಿದ್ದರು. ಇದೀಗ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದು ತಾತ್ಕಾಲಿಕ ಆಯ್ಕೆ ಪಟ್ಟಿ ಎನ್ನಲಾಗುತ್ತಿದೆ.












Click it and Unblock the Notifications