ಸಾಲ ಕೊಟ್ಟವ ಅಲ್ಲ, ಈ ಕೇಸ್‌ನಲ್ಲಿ ಸಾಲ ತೆಗೆದುಕೊಂಡವನೇ "ಯಮ"!
ಸಾಲ ತೆಗೆದುಕೊಳ್ಳುವಾಗ ಹಬ್ಬದೂಟ, ತೀರಿಸುವಾಗ ಪ್ರಾಣ ಸಂಕಟ ಎನ್ನುವ ಮಾತಿದೆ. ಆದರೆ, ಇಲ್ಲೊಬ್ಬ ಸಣ್ಣ ಮೊತ್ತದ ಸಾಲ ತೆಗೆದುಕೊಂಡು ಆ ಸಾಲವನ್ನೂ ತೀರಿಸದೆ. ಸಾಲ ಕೊಟ್ಟವನ ಮೇಲೆಯೇ ತನ್ನ ದರ್ಪ ತೋರಿಸಿದ್ದಾನೆ. ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮ ಅನ್ನುವ ಮಾತೂ ಇದೆ. ಆದರೆ, ಇಲ್ಲೊಬ್ಬ ಸಾಲಗಾರ ಸಾಲ ಕೊಟ್ಟವನಿಗೇ ಯಮನಾಗಿದ್ದಾನೆ. ಒಬ್ಬರಲ್ಲ ಒಟ್ಟು ನಾಲ್ಕು ಜನ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಅಷ್ಟಕ್ಕೂ ಏನಿದು ಸಾಲದ ದಾರುಣ ಕಥೆ ಎನ್ನುವ ವಿವರ ಇಲ್ಲಿದೆ.
ಸಣ್ಣ ಮೊತ್ತಕ್ಕೂ ಜಗಳವಾಗಿ ಅದು ತಾರಕಕ್ಕೆ ಹೇರುವುದು ಇದೆ. ಕೆಲವೊಮ್ಮೆ ಹಣ ಕಾಸಿನ ವಿಚಾರದಲ್ಲಿ ಜಗಳಗಳು ಆಗಿ ಅದು ಕೊಲೆಯಲ್ಲಿ ಅಂತ್ಯವಾಗುವುದು ಸಹ ಇದೆ. ಆದರೆ, ಇಲ್ಲೊಂದು ಗುಂಪು ಕೇವಲ 500 ರೂಪಾಯಿಗೆ ಮಾರಾಮಾರಿ ಮಾಡಿಕೊಂಡು ಜೈಲು ಸೇರಿದೆ. ಹುಬ್ಬಳ್ಳಿಯಲ್ಲಿ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಯುವಕನಿಗೆ ಸ್ನೇಹಿತರೇ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಹುಬ್ಬಳ್ಳಿಯ ಆನಂದ ನಗರದಲ್ಲಿ ನಡೆದಿದ್ದು, ಮೊಹಮ್ಮದ್ ಮೊರಬ ಎನ್ನುವ ವ್ಯಕ್ತಿಗೆ ಚಾಕು ಇರಿಯಲಾಗಿದ್ದು, ಆತನನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಸ್ಲಾಂ ಎಂಬಾತ ಮಹ್ಮದ್ ಮೊರಬನಿಂದ 500 ರೂಪಾಯಿ ಸಾಲ ತೆಗೆದುಕೊಂಡಿದ್ದಾನೆ. ಅದನ್ನು ವಾಪಸ್ ಕೊಡುವುದಾಗಿ ಹೇಳಿ ಶನಿವಾರ ರಾತ್ರಿ ಇಲ್ಲಿನ ಹಳೇ ಹುಬ್ಬಳ್ಳಿಯ ರೆಹಮತ್ ನಗರದ ವಾಲಿಬಾಲ್ ಗ್ರೌಂಡ್ ಬಳಿ ಬರುವಂತೆ ಹೇಳಿದ್ದಾನೆ. ಆಗ ಮಹ್ಮದ್ ಮತ್ತು ಅಸ್ಲಾಂ ನಡುವೆ ಗಲಾಟೆಯಾಗಿದೆ. ಅಸ್ಲಾಂ ಜತೆಗಿದ್ದ ಸಾಧಿಕ್, ಅಲ್ತಾಫ್, ಇರ್ಫಾನ್ ಕೂಡಿಕೊಂಡು ಮಹ್ಮದ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.
ಆಗ ಅಸ್ಲಾಂ ಚಾಕುವಿನಿಂದ ಮಹ್ಮದ್ ಬೆನ್ನು, ಎದೆಗೆ ಇರಿದಿದ್ದಾರೆ. ಗಾಯಾಳು ಮಹ್ಮದ್ ಮೊರಬನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಾದ ಅಸ್ಲಾಂ, ಜಮೀರ, ಸಾಧಿಕ, ಅಲ್ತಾಫ್, ಇರ್ಫಾನ್ ಎನ್ನುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿರುವ ಹಾಗು ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಹ್ಮದ್ ಮೊರಬ, ನಾನು ಕೊಟ್ಟಿದ್ದ ಹಣ ವಾಪಸ್ ಕೇಳಿದಕ್ಕೆ ಈ ರೀತಿ ಹಲ್ಲೆ ಮಾಡಿದ್ದಾರೆ. ಕೇವಲ 500 ರೂಪಾಯಿಯನ್ನು ಅಸ್ಲಾಂ ಎನ್ನುವವ ಅವರ ಹೆಂಡತಿಗೆ ಔಷಧಿ ತರುವುದಕ್ಕೆ ಬೇಕು ಎಂದು ತಗೆದುಕೊಂಡಿದ್ದ. ಆ ಹಣವನ್ನು ಕೊಡುತ್ತೇನೆ ಎಂದು ಕರೆದು ಚಾಕುವಿನಿಂದ ಚುಚ್ಚಿದ್ದಾನೆ. ಇದನ್ನು ಬಿಟ್ಟು ಬೇರೆ ಯಾವ ಕಾರಣವು ಇಲ್ಲ ಎಂದು ತಿಳಿಸಿದ್ದಾನೆ.
ಮಗಾ ಉಳಿದಿದ್ದು ದೊಡ್ಡ ವಿಷಯ: ನನ್ನ ಮಗ ಉಳಿದಿದ್ದು ದೊಡ್ಡ ವಿಷಯ ಎಂದು ಅವರ ತಾಯಿ ಹಬೀದಾ ಅವರು ಹೇಳಿದ್ದಾರೆ. ನನ್ನ ಮಗನಿಗೆ ಎಲ್ಲೆಂದರಲ್ಲಿ ಚುಚ್ಚಲಾಗಿದೆ. ಐದಾರು ಜನ ಸೇರಿ ಅವನಿಗೆ ಹೊಡೆದಿದ್ದಾರೆ. ಹಿಂದಿನಿಂದಲೇ ಅವನಿಗೆ ಹೊಡೆಯಲಾಗಿದೆ. ಕೊಟ್ಟ ಸಾಲವನ್ನು ವಾಪಸ್ ಕೇಳಿಸಿದಾಗ ಈ ರೀತಿ ಮಾಡಿದ್ದಾರೆ.
ಎಲ್ಲರೂ ಗುಂಪು ಸೇರಿ ನನ್ನ ಮಗನನ್ನು ಹೊಡೆದಿದ್ದಾರೆ. ಅವನಿಗೆ ಮೊದಲೇ ಆರೋಗ್ಯ ಸಮಸ್ಯೆ ಇತ್ತು. ಕೇಲವ 500 ರೂಪಾಯಿಗೆ ಈ ರೀತಿ ಹಲ್ಲೆ ಮಾಡಿದ್ದಾರೆ ಎಂದು ಅವರು ಕಣ್ಣೀರಾಗಿದ್ದಾರೆ.












Click it and Unblock the Notifications