ಕರಾವಳಿ ಕಾವಲು ಪಡೆ ಬೋಟ್‌ನ ಡೀಸೆಲ್ ಶೇ.50% ಕಡಿತ: ಭದ್ರತೆ ಆತಂಕ!
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಇದೀಗ ಮತ್ತೊಮ್ಮೆ ಟೀಕೆಗೆ ಗುರಿಯಾಗಿದೆ. ರಾಜ್ಯದಲ್ಲಿ ವಿವಿಧ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಟೀಕೆಗೆ ಗುರಿಯಾಗುತ್ತಿರುವ ರಾಜ್ಯ ಸರ್ಕಾರವು ಇದೀಗ ಕರಾವಳಿ ಕಾವಲು ಪಡೆ ವಿಚಾರದಲ್ಲಿ ತೆಗೆದುಕೊಂಡಿರುವ ಒಂದು ನಿರ್ಧಾರವು ಭಾರೀ ಚರ್ಚೆಗೆ ಕಾರಣವಾಗಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ. ಕರ್ನಾಟಕ ಸರ್ಕಾರದ ಕೆಲವೊಂದು ನಿರ್ಧಾರಗಳು ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಶುಕ್ರವಾರ ಸಹ ಕರ್ನಾಟಕದಲ್ಲಿನ ಹೊಸ 9 ವಿಶ್ವ ವಿದ್ಯಾವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ರಾಜ್ಯ ಸರ್ಕಾರ ಚರ್ಚೆ ಮಾಡಿದ್ದು, ಈ ವಿಚಾರಕ್ಕೂ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಕರಾವಳಿ ಕಾವಲು ಪಡೆಯಲ್ಲಿ ಬಳಸಲಾಗುವ ಬೋಟ್‌ಗಳಿಗೆ ನೀಡುವ ಇಂಧನ (ಡೀಸೆಲ್) ಪ್ರಮಾಣವನ್ನು ಸಹ ಶೇ.50% ರಷ್ಟು ರಾಜ್ಯ ಸರ್ಕಾರ ಕಡಿತಗೊಳಿಸಿದೆ ಎನ್ನಲಾಗಿದ್ದು. ಸರ್ಕಾರದ ಈ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿ ತಮ್ಮ ವಿರೋಧವನ್ನು ದಾಖಲಿಸಿವೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ಆದೇಶ ಈಗ ದೇಶದ ಕರಾವಳಿ ಭದ್ರತೆಗೆ ದೊಡ್ಡ ಗಂಡಾಂತರ ತಂದೊಡ್ಡಿದೆ ಎಂದು ದೂರಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕರಾವಳಿ ಕಾವಲು ಪಡೆ ಬಳಸುವ ಬೋಟ್‌ಗಳಿಗೆ ನೀಡುವ ಇಂಧನ ಪ್ರಮಾಣವನ್ನು ಶೇ.50% ಕಡಿತಗೊಳಿಸಿದೆ ಇದು ಭದ್ರತೆ ದೃಷ್ಟಿಯಿಂದ ಸಮುದ್ರ ಗಸ್ತು ಕಾರ್ಯಾಚರಣೆಗೆ ಭಾರಿ ಹೊಡೆತ ಬಿದ್ದಿದೆ ಎಂದು ಜೆಡಿಎಸ್ ಹೇಳಿದೆ. ಮುಂದುವರಿದು ಬೋಟ್ಗಳಿಗೆ ಮಾಸಿಕ ಪೂರೈಕೆ ಮಾಡುತ್ತಿದ್ದ 600 ಲೀಟರ್ ಇಂಧನವನ್ನು, ಕೇವಲ 250 ಲೀಟರ್ಗೆ ಸೀಮಿತಗೊಳಿಸಿದೆ. ಇದರ ಪರಿಣಾಮ ದಿನಕ್ಕೆ 10 ತಾಸಿನವರೆಗೂ ಗಸ್ತು ತಿರುಗುತ್ತಿದ್ದ ಕಾವಲು ಪಡೆ ಕೇವಲ 1 ಗಂಟೆ ಮಾತ್ರ ಸಮುದ್ರದಲ್ಲಿ ಗಸ್ತು ತಿರುಗಲು ಸಾಧ್ಯವಿದೆ ಎಂದು ಆರೋಪಿಸಲಾಗಿದೆ.
ಸರ್ಕಾರದ ಇಂಧನ ಕಡಿತ ಆದೇಶ ಮುಂದೊಂದು ದಿನ ರಾಜ್ಯದ ಭದ್ರತೆಗೂ ಹಾನಿ ಉಂಟುಮಾಡುವುದರಲ್ಲಿ ಅನುಮಾನವೇ ಇಲ್ಲ. ರಾಜ್ಯ ಸರ್ಕಾರ ಭದ್ರತೆಯ ದೃಷ್ಟಿಯಿಂದ ಈ ಎಡವಟ್ಟು ನಿರ್ಧಾರವನ್ನು ಹಿಂಪಡೆಯಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ವಿಶ್ವ ವಿದ್ಯಾಲಯ ಮುಚ್ಚುವ ನಿರ್ಧಾರಕ್ಕೂ ವಿರೋಧ: ಇನ್ನು ರಾಜ್ಯ ಸರ್ಕಾರವು ವಿಶ್ವವಿದ್ಯಾಲಯ ಮುಚ್ಚುವ ಬಗ್ಗೆ ಚರ್ಚೆ ಮಾಡಿರುವುದಕ್ಕೂ ಜೆಡಿಎಸ್ ವಿರೋಧ ವ್ಯಕ್ತಪಡಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಗ್ರಹಣ ಸಿದ್ದರಾಮಯ್ಯ ಅವರ ಸರ್ಕಾರ ಅನುದಾನ ಕೊರತೆಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಕಲ್ಲು ಹಾಕುತ್ತಿದೆ. ರಾಜ್ಯದ 10 ವಿಶ್ವವಿದ್ಯಾಲಯಗಳ ಪೈಕಿ 9 ವಿವಿಗಳಿಗೆ ಬೀಗ ಹಾಕಲು ತೀರ್ಮಾನಿಸಿದೆ ಎಂದು ದೂರಿದೆ.
* ಬೆಂಗಳೂರಿನ ಮಹಾರಾಣಿ ಕ್ಲಸ್ಟರ್
* ಬೆಂಗಳೂರಿನ ನೃಪತುಂಗ
* ಹಾಸನ
* ಚಾಮರಾಜನಗರ
* ಹಾವೇರಿ
* ಕೊಡಗು
* ಕೊಪ್ಪಳ
* ಬಾಗಲಕೋಟೆ
* ಮಂಡ್ಯ
ಬೊಕ್ಕಸವನ್ನು ಖಾಲಿ ಮಾಡಿ ಎಲ್ಲಾ ಕ್ಷೇತ್ರಗಳನ್ನು ಕಡೆಗಣಿಸುತ್ತಾ, ಜನವಿರೋಧಿ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತಕ್ಕೆ ಹಿಡಿದಿರುವ ಕೈಗನ್ನಡಿ ಎಂದು ಹೇಳಿದೆ.












Click it and Unblock the Notifications