40% ಕಮಿಷನ್ ಆರೋಪ: ತನಿಖಾ ಸಮಿತಿಗೆ ದಾಖಲೆ ಸಲ್ಲಿಸಿದ ಗುತ್ತಿಗೆದಾರರ ಸಂಘ
ಬೆಂಗಳೂರು, ನವೆಂಬರ್ 29: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಮಂಗಳವಾರ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ನೇತೃತ್ವದ ಆಯೋಗಕ್ಕೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ 40% ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಯನ್ನು ಸಲ್ಲಿಸಿದೆ.
ಜುಲೈ 2021 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಗುತ್ತಿಗೆದಾರರ ಸಂಘವು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಸಂಬಂಧ ಪತ್ರ ಬರೆದಿತ್ತು. ಇದು ವಿಧಾನಸಭೆ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷಕ್ಕೆ ಅಸ್ತ್ರವಾಯಿತು.

ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮಾತನಾಡಿ, ಭ್ರಷ್ಟಾಚಾರ ಆರೋಪಗಳನ್ನು ರುಜುವಾತುಪಡಿಸುವ 600 ಪುಟಗಳ ದಾಖಲೆ ಪತ್ರವನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಇನ್ನು ಹತ್ತು ದಿನಗಳೊಳಗೆ ಇನ್ನೂ ಕೆಲವು ದಾಖಲೆಗಳನ್ನು ಸಲ್ಲಿಸಲಾಗುವುದು. ನಾವು ಕೆಲವು ಮಾಹಿತಿಯನ್ನು ಕೋರಿ ಆರ್‌ಟಿಐ ಅರ್ಜಿ ಸಲ್ಲಿಸಿದ್ದೇವೆ. ಅದನ್ನು ಸ್ವೀಕರಿಸಬೇಕಾಗಿದೆ ಎಂದು ಕೆಂಪಣ್ಣ ತಿಳಿಸಿದರು.
ಗುತ್ತಿಗೆದಾರರ ಸಂಘದ ಆರೋಪಗಳು ಹಿಂದಿನ ಬಿಜೆಪಿ ಸರ್ಕಾರವನ್ನು 2023 ರ ವಿಧಾನಸಭಾ ಚುನಾವಣೆಯಲ್ಲಿ ಬಹು ದೊಡ್ಡ ಹೊಡೆತ ನೀಡಿತು. ಆದರೆ ಯಾವುದೇ ಪುರಾವೆ ಒದಗಿಸದ ಕಾರಣ ಹಲವಾರು ಬಿಜೆಪಿ ನಾಯಕರು ಆರೋಪಗಳನ್ನು ಅಲ್ಲಗೆಳೆದಿದ್ದಾರೆ. ವರದಿಯು ಕಳೆದ ಮೂರು ವರ್ಷಗಳಲ್ಲಿ ಮತ್ತು ಸರ್ಕಾರಿ ಇಲಾಖೆಗಳಾದ್ಯಂತ ಭ್ರಷ್ಟಾಚಾರ ಆರೋಪಗಳನ್ನು ಒಳಗೊಂಡ ದಾಖಲೆಗಳಿಗೆ ಸಂಬಂಧಿಸಿದೆ. ದಾಖಲೆಗಳಲ್ಲಿ ಇಂಜಿನಿಯರ್‌ಗಳು ಲಂಚ ಕೇಳಿರುವ ವಿವರಗಳು, ಟೆಂಡರ್ ನಿಯಮ ಉಲ್ಲಂಘನೆ, ಬಿಲ್ ಪಾವತಿಯಲ್ಲಿ ಹಿರಿತನದ ಮಾನದಂಡಗಳನ್ನು ಅನುಸರಿಸದಿರುವುದು ಇತ್ಯಾದಿಗಳನ್ನು ಒಳಗೊಂಡಿದೆ.

ದಾಖಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಕೆಲವು ನಿದರ್ಶನಗಳೂ ಸೇರಿವೆ. ಆಯೋಗವು ನಮ್ಮಿಂದ ಕೇಳುವ ಎಲ್ಲಾ ಮಾಹಿತಿಯನ್ನು ನಾವು ಒದಗಿಸುತ್ತೇವೆ ಎಂದು ಕೆಂಪಣ್ಣ ವಿವರಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಜುಲೈ 26, 2019 ಮತ್ತು ಮಾರ್ಚ್ 31, 2023 ರ ನಡುವೆ ನಡೆದ ಸಾರ್ವಜನಿಕ ಕಾರ್ಯಗಳಲ್ಲಿನ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ಮಾಡಲು ನ್ಯಾಯಮೂರ್ತಿ ದಾಸ್ ಆಯೋಗವನ್ನು ಆಗಸ್ಟ್‌ನಲ್ಲಿ ರಚಿಸಲಾಯಿತು.
ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರು, ತಮಗೆ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುವುದು. ಇದಲ್ಲದೆ, ಆಯೋಗವು ಸಾರ್ವಜನಿಕರಿಂದ 100 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ. ಅವುಗಳನ್ನು ಸಹ ಪರಿಶೀಲಿಸಲಾಗುವುದು. ಪ್ರಾಥಮಿಕವಾಗಿ ಈ ದೂರುಗಳು ನಮ್ಮ ಉಲ್ಲೇಖದ ನಿಯಮಗಳೊಳಗೆ ಬರುತ್ತವೆಯೇ ಮತ್ತು ಅದರಲ್ಲಿ ತನಿಖೆ ಮಾಡಲು ಏನಾದರೂ ಇದ್ದರೆ ನಾವು ಪರಿಶೀಲಿಸಬೇಕಾಗಿದೆ ಎಂದು ಅವರು ಹೇಳಿದರು.
ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯ ಆರ್.ಅಂಬಿಕಾಪತಿ ಅವರ ಹಠಾತ್ ನಿಧನದ ಕುರಿತು ಕೆಂಪಣ್ಣ ಅವರು, ಹಾಲಿ ಶಾಸಕರಾಗಿರುವ ಮಾಜಿ ಸಚಿವರು ಮತ್ತು ಕೆಲವು ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದಿದ್ದು, ಆದರೆ, ಅವರು ಯಾವುದೇ ಹೆಸರನ್ನು ಉಲ್ಲೇಖಿಸಿಲ್ಲ. ಈ ಮಾಜಿ ಸಚಿವರ ಕಿರುಕುಳದಿಂದಲೇ ಅಂಬಿಕಾಪತಿ ಕೊಲೆಯಾಗಿದ್ದಾರೆ ಎಂದು ಆರೋಪಿಸಿದ್ದು, ಅವರ ಮನೆ ಮೇಲೆ ಐಟಿ ದಾಳಿ ನಡೆದಾಗಿನಿಂದ ಗುತ್ತಿಗೆದಾರರು ಒತ್ತಡಕ್ಕೆ ಒಳಗಾಗಿದ್ದರು. ಅವರ ವಿರುದ್ಧ ಹೊರಿಸಲಾದ ಯಾವುದೇ ಆರೋಪಗಳಲ್ಲಿ ಅವರು ಭಾಗಿಯಾಗಿಲ್ಲ ಎಂದು ಕೆಂಪಣ್ಣ ಹೇಳಿದ್ದಾರೆ.












Click it and Unblock the Notifications