ನೆಲಮಂಗಲ-ತುಮಕೂರು ರಾಷ್ಟ್ರೀಯ ಹೆದ್ದಾರಿ ಸೇರಿ ರಾಜ್ಯದಲ್ಲಿ ₹31,749 ಕೋಟಿ ವೆಚ್ಚದ ಯೋಜನೆಗಳು: ನಿತಿನ್ ಗಡ್ಕರಿ ಮಹತ್ವದ ಅಪ್ಡೇಟ್
Karnataka Expressway: ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ವಿಚಾರದಲ್ಲಿ ಬಹುದೊಡ್ಡ ಕ್ರಾಂತಿಯೇ ಆಗುತ್ತಿದೆ. ಹಾಗೆಯೇ ಇದೀಗ ರಾಜ್ಯಾದ್ಯಂತ ಒಟ್ಟು 27 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಪ್ರಸ್ತುತ ನಡೆಯುತ್ತಿದ್ದು, ಒಟ್ಟಾರೆ 31,749 ಕೋಟಿ ರೂಪಾಯಿ ವೆಚ್ಚ ಮಂಜೂರು ಆಗಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಬಗ್ಗೆ ಲೋಕಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಲಿಖಿತ ಪ್ರತಿಕ್ರಿಯೆ ಮೂಲಕ ಸಂಪೂರ್ಣ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ.

ರಾಜ್ಯದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳ ಸ್ಥಿತಿಗತಿಯ ಬಗ್ಗೆ ಕೋಟ ಶ್ರೀನಿವಾಸ್ ಪೂಜಾರಿ ಅವರು ಸ್ಪಷ್ಟಿಕರಣವನ್ನು ಕೇಳಿದರು. ಎಲ್ಲೆಲ್ಲಿ ಯೋಜನೆಗಳು ಪ್ರಕ್ರಿಯೆಯಲ್ಲಿ ಇವೆ? ಎಷ್ಟು ಮಂಜೂರು ಮಾಡಲಾಗಿದೆ? ಇದುವರೆಗೂ ಖರ್ಚಾದ ಹಣ ಎಷ್ಟು ಎನ್ನುವ ಪ್ರಶ್ನೆಗಳಿಗೆ ಇಂಚಿಂಚು ಮಾಹಿತಿಯನ್ನು ನಿತಿನ್ ಗಡ್ಕರಿ ಅವರು ಬಿಚ್ಚಿಟ್ಟಿದ್ದಾರೆ.
ಕಾರ್ಯಸಾಧ್ಯತಾ ಅಧ್ಯಯನಗಳು ಮತ್ತು ವಿವರವಾದ ಯೋಜನಾ ವರದಿಗಳು ಹೂಡಿಕೆ ನಿರ್ಧಾರಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತವೆ. ಇವು ಇವುಗಳನ್ನು ಪಿಎಂ ಗತಿ ಶಕ್ತಿ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿದೆ ಎಂದು ನಿತಿನ್ ಗಡ್ಕರಿ ಅವರು ವಿವರಣೆ ನೀಡಿದರು.
ರಾಜ್ಯಾದ್ಯಂತ 27 ಪ್ರಮುಖ ಎನ್‌ಎಚ್‌ಎಐ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿವೆ. ಈ ಯೋಜನೆ ಒಟ್ಟು 1,151 ಕಿ.ಮೀ ಉದ್ದವನ್ನು ಒಳಗೊಂಡಿದ್ದು, ಇರುವರೆಗೂ ಈ ಹೆದ್ದಾರಿ ಯೋಜನೆಗಳಲ್ಲಿ 537 ಕಿಲೋ ಮೀಟರ್ ಮಾತ್ರ ಪೂರ್ಣಗೊಂಡಿದ್ದು, 14,455 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
ನೆಲಮಂಗಲ-ತುಮಕೂರು ವಿಭಾಗ NH 48ದ ಆರು ಪಥದ ಹೆದ್ದಾರಿ ನಿರ್ಮಾಣ ಕಾಮಗಾರಿಗೆ 2,032 ಕೋಟಿ ರೂಪಾಯಿ ಮಂಜೂರಾಗಿದೆ. ಮಂಜೂರಾದ 44.73 ಕಿ.ಮೀ.ಗಳಲ್ಲಿ ಇದುವರೆಗೂ ಕೇವಲ 10.3 ಕಿಲೋ ಮೀಟರ್ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ.
ಮಂಗಳೂರಿನ ಕೂಳೂರು NH 66 ಬಳಿ ಫಲ್ಗುಣಿ ನದಿಗೆ ಅಡ್ಡಲಾಗಿ 6 ಪಥಗಳ ಹೊಸ ಸೇತುವೆಯ ನಿರ್ಮಾಣ ಪ್ರಗತಿಯಲ್ಲಿರುವ ಮತ್ತೊಂದು ಯೋಜನೆ ಆಗಿದೆ. ಅಲ್ಲಿ ಅಡಿಪಾಯ ಕಾಮಗಾರಿಗಾಗಿ ಈಗಾಗಲೇ 27 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಆದರೂ, ಕೆಲಸವು ಹೆಚ್ಚು ಪ್ರಗತಿ ಸಾಧಿಸಿಲ್ಲ. ಈ ಸೇತುವೆಯನ್ನೂ ಪೂರ್ಣಗೊಳಿಸಲು ಡಿಸೆಂಬರ್ 31, 2025ರ ವರೆಗೆ ಗಡುವು ನೀಡಲಾಗಿದೆ.
ಪ್ರಗತಿಯಲ್ಲಿರುವ ಹೆದ್ದಾರಿ ಯೋಜನೆಗಳು: ತಮಿಳುನಾಡು ಗಡಿ-ಹೊಸಕೋಟೆ ವಿಭಾಗ, ಬೆಳಗಾವಿ- ಸಂಕೇಶ್ವರ ಬೈಪಾಸ್ - ಮಹಾರಾಷ್ಟ್ರ ಗಡಿ, ಹುಬ್ಬಳ್ಳಿ-ಧಾರವಾಡ ಬೈಪಾಸ್ 6 ಲೇನ್, ಖಾನಾಪುರ- ಗೋವಾ ಗಡಿ 2 ಲೇನ್, ಅಕ್ಕಲಕೋಟೆ - ತೆಲಂಗಾಣ ಗಡಿ ವಿಭಾಗ,ಸಣ್ಣೂರು - ಬಿಕನಕಟ್ಟೆ ವಿಭಾಗ, ಕುಳೂರು ಬಳಿ ಫಲ್ಗುಣಿ ನದಿ ಸೇತುವೆ 6 ಲೇನ್, ನೆಲಮಂಗಲ - ತುಮಕೂರು 6 ಲೇನ್, ತುಮಕೂರು - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಯೋಜನನೆಗಳು ಪ್ರಗತಿಯಲ್ಲಿವೆ.
ಚನ್ನರಾಯಪಟ್ಟಣ - ಹಾಸನ ಬೈಪಾಸ್‌ನ 4-ಲೇನ್, ಅದ್ದಹೊಳೆಯಿಂದ ಬಂಟ್ವಾಳ ಕ್ರಾಸ್ ವಿಭಾಗ, ಹೊಸಪೇಟೆ - ಬಳ್ಳಾರಿ - ಆಂಧ್ರಪ್ರದೇಶ ಗಡಿ, ಬಳ್ಳಾರಿ ಬೈಪಾಸ್‌ನ ಪೇವ್ಡ್ ಶೋಲ್ಡರ್ 4 ಲೇನ್, ಹಾವೇರಿ - ಯಕಂಬಿ - ಶಿರಸಿ ರಸ್ತೆ, ಶಿರಸಿ - ಕುಮಟಾ - ಬೆಳಕೇರಿ ಬಂದರು, ಬೆಳಗಾವಿ - ಹುನಗುಂದ - ರಾಯಚೂರು ವಿಭಾಗ, ಮೈಸೂರು - ಮಡಿಕೇರಿ ರಸ್ತೆ ಯೋಜನನೆಗಳು ಪ್ರಗತಿಯಲ್ಲಿ ಇವೆ. ಇನ್ನೂ ಇವೆಲ್ಲ ಸಂಪೂರ್ಣ ಆದರೆ, ಈ ಭಾಗದ ಭೂಮಿಗೆ ಚಿನ್ನದ ಬೆಲೆ ಬರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ. ಈಗಲೇ ಬೆಲೆ ಗಗನಕ್ಕೇರಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗುವುದರಲ್ಲಿ ಆಶ್ಚರ್ಯವಿಲ್ಲ.
ಈಗಾಗಲೇ ರಾಜ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಹೆದ್ದಾರಿ ಉದ್ಘಾಟನೆಯಾಗಿ ವಾಹನಗಳು ಕೂಡ ಸಂಚಾರ ಮಾಡುತ್ತಿವೆ. ಮತ್ತೊಂದೆಡೆ ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕ ಭಾಗದಲ್ಲಿ ಪೂರ್ಣಗೊಂಡಿದ್ದು, ವಾಹನಗಳು ಸಂಚಾರ ಮಾಡುತ್ತಿವೆ. ಆದರೆ, ಉದ್ಘಟನೆಉಯಾಗಿಲ್ಲ. ಯಾಕಂದ್ರೆ ಆಂಧ್ರಪ್ರದೇಶ, ತಮಿಳುನಾಡು ಭಾಗದಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಲೋಕಾರ್ಪಣೆ ದಿನಾಂಕ ಮುಂದೂಡಿಕೆಯಾಗುತ್ತಲಿದ್ದು, ಶೀಘ್ರದಲ್ಲೇ ಇದು ಕೂಡ ನೆರವೇರಲಿದೆ ಎನ್ನುವ ಮಾಹಿತಿ ಇದೆ. ಇನ್ನೂ ಈ ಎರಡು ಎಕ್ಸ್‌ಪ್ರೆಸ್ ವೇ ಅಕ್ಕಪಕ್ಕ ಭೂಮಿ ಬೆಲೆಗೆ ಗಗನಕ್ಕೇರಿದೆ. ಆದರೂ, ಹೂಡಿಕೆದಾರರು ಹೆಚ್ಚು ಆಸಕ್ರಿ ವಹಿಸಿ ಭೂಮಿ ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಭಾಗಗಳ ಭೂಮಿಗೆ ಡಿಮ್ಯಾಂಡ್ ಬಂದಿದೆ.












Click it and Unblock the Notifications