2nd PUC Result: ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ: ಎಷ್ಟು ಮಂದಿ ಪಾಸ್, ಮುಂದಿನ ಪರೀಕ್ಷೆ ಯಾವಾಗ?
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಇಂದು ಪ್ರಕಟವಾಗಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.inನಲ್ಲಿ ನೋಡಬಹುದು. ಏಪ್ರಿಲ್ 24ರಿಂದ ಮೇ 8ರವರೆಗೆ ನಡೆದಿದ್ದ ದ್ವಿತೀಯ ಪಿಯು ಎರಡನೇ ಪರೀಕ್ಷೆಗೆ ಒಟ್ಟು 1,94,077 ವಿದ್ಯಾರ್ಥಿಗಳು ಹಾಜರಾಗಿದ್ದರು. ಇಂದು ಈ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಇದೇ ವೇಳೆ ದ್ವಿತೀಯ ಪಿಯುಸಿ ಪರೀಕ್ಷೆ-3ರ ದಿನಾಂಕ ಕೂಡ ಘೋಷಣೆಯಾಗಿದೆ.
ಈ ಪರೀಕ್ಷೆ ಬರೆದಿದ್ದ 1,94,077 ವಿದ್ಯಾರ್ಥಿಗಳ ಪೈಕಿ 60,692 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ-1ರಲ್ಲಿ ಉತ್ತೀರ್ಣರಾಗಿದ್ದ 71,964 ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೂ ಹಾಜರಾಗಿದ್ದರು. ಇವರಲ್ಲಿ 41,719 ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಮೊದಲ ಬಾರಿಗಿಂತ ಹೆಚ್ಚಿಸಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ-2ರಲ್ಲಿ ಉತ್ತೀರ್ಣರಾದ ಎಲ್ಲ 60,692 ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಫಲಿತಾಂಶದ ಸುಧಾರಣೆ ಬಯಸಿ, ಮತ್ತೊಮ್ಮೆ ಪರೀಕ್ಷೆ ಎದುರಿಸಿದ್ದ 41,719 ವಿದ್ಯಾರ್ಥಿಗಳು ಕಳೆದ ಬಾರಿಗಿಂತಲೂ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ತೋರಿದ್ದಾರೆ. ನಿಮ್ಮೆಲ್ಲರ ಮುಂದಿನ ಶೈಕ್ಷಣಿಕ ಬದುಕು ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಹಿಂದಿನ ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳು ಆತಂಕ ಅಥವಾ ಹತಾಶೆಗೆ ಒಳಗಾಗುವ ಅಗತ್ಯವಿಲ್ಲ. ಯಾವುದೇ ಶುಲ್ಕವಿಲ್ಲದೆ ಪರೀಕ್ಷೆ-3 ಅನ್ನು ಬರೆದು ಉತ್ತೀರ್ಣರಾಗುವ ಅವಕಾಶವನ್ನು ಸರ್ಕಾರ ನಿಮಗೆ ಒದಗಿಸಿಕೊಟ್ಟಿದೆ. ಇದರ ಸದುಪಯೋಗ ಪಡೆದು ಭವಿಷ್ಯ ರೂಪಿಸಿಕೊಳ್ಳಿ ಎಂದು ಸಿಹಿಸುದ್ದಿ ನೀಡಿದ್ದಾರೆ.
ಜೂನ್ 9ರಿಂದ ದ್ವಿತೀಯ ಪಿಯು ಪರೀಕ್ಷೆ-3
ಎರಡನೇ ಪರೀಕ್ಷೆ ಪೂರ್ಣಗೊಂಡ ಹಿನ್ನೆಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂರನೇ ಪರೀಕ್ಷೆ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ. ಅದರಂತೆ ಇದೇ ಜೂನ್ 9ರಿಂದ 20ರವರೆಗೆ ದ್ವಿತೀಯ ಪಿಯು ಪರೀಕ್ಷೆ-3 ನಡೆಯಲಿವೆ. ದ್ವಿತೀಯ ಪಿಯು ಪರೀಕ್ಷೆ-3 ತೆಗೆದುಕೊಳ್ಳುವವರಿಗೂ ಕೂಡ ಯಾವುದೇ ಶುಲ್ಕ ಇರುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಫಲಿತಾಂಶ ನೋಡುವುದು ಹೇಗೆ?
ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ನೋಡಲು ಬಯಸುವ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.inಗೆ ಭೇಟಿ ನೀಡಿ. ಇಲ್ಲಿನ ಹೋಂ ಪೇಜ್ನಲ್ಲಿ Second PU Results-2025 ಎನ್ನುವ ಲಿಂಕ್ ಕ್ಲಿಕ್ ಮಾಡಿ. ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಹಾಗೂ ಪಾಸ್‌ವರ್ಡ್ ಆಯ್ಕೆಮಾಡಿ. ನಂತರ ಸ್ಕ್ರೀನ್‌ನಲ್ಲಿ Second PU Results 2025 ಎಂದು ಕಾಣಿಸುತ್ತದೆ. ಅಲ್ಲಿ ನಿಮ್ಮ ಫಲಿತಾಂಶ ನೋಡಬಹುದು ಹಾಗು ಅಲ್ಲಿಯೇ ಅದನ್ನು ಪಿಡಿಎಫ್ ರೀತಿ ಡೌನ್ಲೋಡ್ ಮಾಡಿಕೊಳ್ಳುವ ಅವಕಾಶವೂ ಇದೆ.












Click it and Unblock the Notifications