3 ದಿನದಲ್ಲಿ 2,150 ವೈದ್ಯರ ನೇಮಕ; ಯಡಿಯೂರಪ್ಪ ಘೋಷಣೆ
ಬೆಂಗಳೂರು, ಮೇ 19; ಕರ್ನಾಟಕ ಸರ್ಕಾರ ಕೋವಿಡ್ 2ನೇ ಅಲೆಯು ಹರಡುವಿಕೆ ತಡೆಯಲು ಮೇ 24ರ ತನಕ ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಕೋವಿಡ್ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸಲಾಗುತ್ತಿದೆ.
ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗಾಗಿ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು. ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸಲು ವೈದ್ಯರ ನೇಮಕ ಮಾಡಿಕೊಳ್ಳುವುದಾಗಿ ಹೇಳಿದರು.

ಸರ್ಕಾರ ಸ್ಥಾಪನೆ ಮಾಡುತ್ತಿರುವ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕಾರ್ಯ ನಿರ್ವಹಣೆ ಮಾಡಲು ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ವಿವಿಧ ಜಿಲ್ಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕ ಪ್ರಕ್ರಿಯೆಗೆ ನೇರ ಸಂದರ್ಶನಗಳು ನಡೆಯುತ್ತಿವೆ.
"ಕೋವಿಡ್ ಚಿಕಿತ್ಸೆಗೆ ಅನುಕೂಲವಾಗಲು 2,150 ವೈದ್ಯರನ್ನು 3 ದಿನಗಳೊಳಗಾಗಿ ನೇಮಕಾತಿ ಮಾಡಲಾಗುವುದು" ಎಂದು ಯಡಿಯೂರಪ್ಪ ಹೇಳಿದರು.
"ಕೋವಿಡ್ ಸೋಂಕಿಗೊಳಗಾದ ರೋಗಿಗಳಿಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸರ್ಕಾರದಿಂದ ನಿಯೋಜಿಸಿದ (ಖಾಸಗಿ ಮತ್ತು ಸರ್ಕಾರಿ) ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದರು.
"ಕೋವಿಡ್ 1ನೇ ಮತ್ತು 2ನೇ ಅಲೆಯಲ್ಲಿ ಒಟ್ಟಾಗಿ ಇಲ್ಲಿಯ ತನಕ 2.06 ಲಕ್ಷ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, ರೂ. 965 ಕೋಟಿಗಳಿಗೂ ಹೆಚ್ಚು ಖರ್ಚು ಭರಿಸಲಾಗಿದೆ" ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications