2019ರ ಲೋಕಸಭೆ ಚುನಾವಣೆಗೆ ಕರ್ನಾಟಕ ಬಿಜೆಪಿ ಸಿದ್ಧತೆ
ಬೆಂಗಳೂರು, ಜೂನ್ 22 : 2019ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ಆರಂಭವಾಗಿದೆ. ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಸಹ ಚುನಾವಣೆ ಸಿದ್ಧತೆಯನ್ನು ಆರಂಭಿಸಿದೆ.
ಕರ್ನಾಟಕ ಬಿಜೆಪಿಯ ಕೋರ್ ಕಮಿಟಿ ಸಭೆ ಈ ತಿಂಗಳ ಅಂತ್ಯದಲ್ಲಿ ನಡೆಯಲಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮಂಡನೆ ಮಾಡುವ ಬಜೆಟ್, ಲೋಕಸಭೆ ಚುನಾವಣೆಯ ತಯಾರಿಯೇ ಈ ಸಭೆಯ ಮುಖ್ಯ ಚರ್ಚೆಯ ಅಂಶಗಳಾಗಿವೆ.
'ಪಕ್ಷ ಈಗಾಗಲೇ ಲೋಕಸಭೆ ಚುನಾವಣೆ ತಯಾರಿ ಆರಂಭಿಸಿದೆ. ಕೋರ್ ಕಮಿಟಿ ಸಭೆ ಬಳಿಕ ಈ ಕೆಲಸಗಳು ಇನ್ನೂ ಚುರುಕಾಗಲಿವೆ' ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜುಲೈ 18ರಂದು ಕರ್ನಾಟಕಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಅದಕ್ಕೂ ಮೊದಲು ರಾಜ್ಯ ನಾಯಕರು ಸಭೆ ನಡೆಸಿ, ಚುನಾವಣಾ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಸಂಸದರಾದ ಬಿ.ಎಸ್.ಯಡಿಯೂರಪ್ಪ( ಶಿವಮೊಗ್ಗ), ಬಿ.ಶ್ರೀರಾಮುಲು (ಬಳ್ಳಾರಿ) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾದರೆ ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 2019ರ ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳುವ ಕುರಿತು ಘೋಷಣೆ ಮಾಡಲಾಗಿದೆ. ಆದ್ದರಿಂದ, ಬಿಜೆಪಿ ಲೋಕಸಭೆ ಚುನಾವಣೆಯ ಬಗ್ಗೆ ಈಗಾಲೇ ತಂತ್ರವನ್ನು ರೂಪಿಸುತ್ತಿದೆ.











Click it and Unblock the Notifications