5 ವರ್ಷದಲ್ಲಿ 20 ಲಕ್ಷ ಉದ್ಯೋಗ: ಮಹತ್ವದ ಮಾಹಿತಿ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು, ಫೆಬ್ರವರಿ 12: ರಾಜ್ಯ ಸರಕಾರವು ಮುಂದಿನ ಐದು ವರ್ಷಗಳ (2025-30) ಉದ್ಯಮ ಬೆಳವಣಿಗೆಗೆ ರೂಪಿಸಿರುವ ನೂತನ ಕೈಗಾರಿಕಾ ನೀತಿಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಿಡುಗಡೆ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಂಗಳವಾರ ಅನಾವರಣಗೊಳಿಸಿದರು. ಹೊಸ ನೀತಿಯು ಇನ್ನು ಐದು ವರ್ಷಗಳಲ್ಲಿ ರಾಜ್ಯಕ್ಕೆ 7.50 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಕರ್ಷಿಸುವ, 20 ಲಕ್ಷ ಉದ್ಯೋಗ ಸೃಷ್ಟಿಸುವ ಮತ್ತು ಸನ್-ರೈಸ್ ವಲಯದಲ್ಲಿ ರಾಜ್ಯವನ್ನು ಇಡೀ ದೇಶಕ್ಕೆ ನಂಬರ್ ಒನ್ ಆಗಿ ಪ್ರತಿಷ್ಠಾಪಿಸುವ ಹೆಗ್ಗುರಿಗಳನ್ನು ಹೊಂದಿದೆ ಎಂದು ತಿಳಿಸಿದರು.
ಬೆಂಗಳೂರಿನ ಆಚೆಗೆ ಹಾಗೂ ಹಿಂದುಳಿದ ಮತ್ತು ಅತೀ ಹಿಂದುಳಿದ ಜಿಲ್ಲೆ/ತಾಲ್ಲೂಕುಗಳಿಗೆ ಆದ್ಯತೆ ಕೊಡಲಾಗಿದೆ. ಇದಕ್ಕಾಗಿ ಕೈಗಾರಿಕಾ ಬೆಳವಣಿಗೆ ಆಧರಿಸಿ ಪ್ರದೇಶವಾರು ಪ್ರೋತ್ಸಾಹಕ ಭತ್ಯೆಗಳನ್ನು ನೀಡಲಾಗುವುದು ಎಂದು ಹೊಸ ನೀತಿಯಲ್ಲಿ ತಿಳಿಸಲಾಗಿದೆ. ಈ ನೀತಿಯಲ್ಲಿ ಡಿ ಎಂ ನಂಜುಂಡಪ್ಪ ವರದಿ ಆಧರಿಸಿ ಕೈಗಾರಿಕಾ ಬೆಳವಣಿಗೆಯಲ್ಲಿ ಹಿಂದುಳಿದಿರುವ ಜಿಲ್ಲೆ/ತಾಲ್ಲೂಕುಗಳನ್ನು ಝೋನ್-1 ಮತ್ತು 2ರಡಿ ತರಲಾಗಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಝೋನ್-3' ಎಂದು ಗುರುತಿಸಲಾಗಿದೆ. ಉದ್ಯಮಗಳ ಸಾಮರ್ಥ್ಯ ಮತ್ತು ಬೆಳವಣಿಗೆ ನಿಚ್ಚಳತೆಗೆ ಅನುಗುಣವಾಗಿ ವಲಯಗಳನ್ನಾಗಿ ಮಾಡಿದ್ದು, ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗಸೃಷ್ಟಿಗೆ ಆದ್ಯತೆ ಇರುವಂತೆ ಎಚ್ಚರ ವಹಿಸಲಾಗಿದೆ ಎಂದು ಪಾಟೀಲ ಅವರು ತಿಳಿಸಿದರು.

ಹೈಟೆಕ್ ತಯಾರಿಕೆ ವಲಯದಲ್ಲಿ ರಾಜ್ಯವನ್ನು ದೇಶದಲ್ಲೇ ಪ್ರಥಮ ಸ್ಥಾನಕ್ಕೆ ಏರುವಂತೆ ಮಾಡಲಾಗುವುದು. ಜೊತೆಗೆ ಸುಸ್ಥಿರ, ಪರಿಸರಸ್ನೇಹಿ, ಸಮತೋಲಿತ ಮತ್ತು ಎಲ್ಲರನ್ನೂ ಒಳಗೊಳ್ಳಲಿರುವ ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸಲಾಗುವುದು. ಕೈಗಾರಿಕಾ ಕ್ಷೇತ್ರದಲ್ಲಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದ ಮೂಲಕ ವಿಶ್ವ ದರ್ಜೆಯ ಮೂಲಸೌಕರ್ಯ ಅಭಿವೃದ್ಧಿ ಪಡಿಸುವಂತಹ ವ್ಯವಸ್ಥೆ ಮುಂದೆ ಬರಲಿದೆ. ಭಾರೀ ಹೂಡಿಕೆ ಇರುವ ಕೈಗಾರಿಕಾ ಯೋಜನಗೆಳ ವ್ಯಾಪ್ತಿಯಲ್ಲಿ ಡಾರ್ಮಿಟರಿ ಮತ್ತು ವಸತಿ ವ್ಯವಸ್ಥೆಗೆ ಸರಕಾರ ಕೈಜೋಡಿಸಲಿದೆ ಎಂದು ಅವರು ವಿವರಿಸಿದ್ದಾರೆ.
ನೂತನ ಕೈಗಾರಿಕಾ ನೀತಿಯಲ್ಲಿ ಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯತೆಯ ಅಭಿವೃದ್ಧಿಗೆ ಕ್ವಿನ್ ಸಿಟಿಯನ್ನು ಅಭಿವೃದ್ಧಿ ಪಡಿಸಲಾಗುವುದು. ಕೆಐಎಡಿಬಿ ಮೂಲಕ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಶೇಕಡ 30ರಷ್ಟು ಜಾಗವನ್ನು ಮೀಸಲಿಟ್ಟು, ತಂತ್ರಜ್ಞಾನದ ಉನ್ನತೀಕರಣ, ಕೌಶಲ್ಯಾಭಿವೃದ್ಧಿ, ಉತ್ಕೃಷ್ಟತಾ ಪುರಸ್ಕಾರ, ಕ್ಲಸ್ಟರ್ಸ್ ಅಭಿವೃದ್ಧಿ, ಆಕರ್ಷಕ ಪ್ರೋತ್ಸಾಹನಾ ಭತ್ಯೆ ಮತ್ತು ರಿಯಾಯಿತಿಗಳಿಗೆ ಗಮನ ಹರಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು.
ಕೆಲವು ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶ' (ಸ್ಪೆಷಲ್ ಇನ್ವೆಸ್ಟ್ಮೆಂಟ್ ರೀಜನ್) ಆಗಿ ಘೋಷಿಸಿ, ಉದ್ಯಮಗಳ ಆರ್ & ಡಿ ವಿಭಾಗ ಮತ್ತು ಉತ್ಪಾದನಾ ಘಟಕಗಳು ಒಂದೇ ಕಡೆ ಇರುವುದನ್ನು ಉತ್ತೇಜಿಸಲಾಗುವುದು. ಹೂಡಿಕೆದಾರರು ತಮ್ಮ ಕೇಪೆಕ್ಸ್ ಸಬ್ಸಿಡಿ ಅಥವಾ ಉತ್ಪಾದನೆ ಆಧರಿತ ಪ್ರೋತ್ಸಾಹನಾ ಭತ್ಯೆ ನಡುವೆ ತಮಗೆ ಯಾವುದು ಅನುಕೂಲವೋ ಅದನ್ನು ಆರಿಸಿಕೊಳ್ಳಲು ಅವಕಾಶ ಇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನೂತನ ಕೈಗಾರಿಕಾ ನೀತಿಯಡಿಯಲ್ಲಿ ಖಾಸಗಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೂ ಅವಕಾಶ ಇರಲಿದೆ. ಇದರಂತೆ ಸಮಗ್ರ ಕೈಗಾರಿಕಾ ಪಾರ್ಕ್, ವಲಯವಾರು ಪಾರ್ಕ್, ಲಾಜಿಸ್ಟಿಕ್ಸ್ ಪಾರ್ಕ್ ಇತ್ಯಾದಿಗಳ ಅಭಿವೃದ್ಧಿ ಮಾಡಲಾಗುವುದು. ಜತೆಗೆ ಕೈಗಾರಿಕಾ ಪ್ರದೇಶಗಳ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಈಗಿರುವ ನಿರ್ಬಂಧಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶ ಎರಡರಲ್ಲೂ ತೆಗೆದು ಹಾಕಲಾಗುವುದು. ಜತೆಗೆ ನೇರ ಉದ್ಯೋಗ ಸೃಷ್ಟಿಗೆ ನೀತಿಯು ಒತ್ತು ಕೊಟ್ಟಿದೆ.












Click it and Unblock the Notifications