15 ಕ್ಷೇತ್ರದ ಉಪ ಚುನಾವಣೆ; ನ.11ರಿಂದ ನೀತಿ ಸಂಹಿತೆ ಜಾರಿ
ಬೆಂಗಳೂರು, ನವೆಂಬರ್ 10 : ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸೋಮವಾರ ಅಧಿಸೂಚನೆ ಪ್ರಕಟವಾಗಲಿದೆ. ನವೆಂಬರ್ 11ರಿಂದಲೇ ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. "ನಾಮಪತ್ರಗಳಲ್ಲಿ ಸಲ್ಲಿಕೆ ಮಾಡಲು ನವೆಂಬರ್ 18 ಕೊನೆಯ ದಿನವಾಗಿದೆ" ಎಂದು ಹೇಳಿದರು.
ಒಟ್ಟು 17 ಕ್ಷೇತ್ರಗಳ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಈ ಪೈಕಿ ರಾಜರಾಜೇಶ್ವರಿ ನಗರ, ಮುಸ್ಕಿ ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲು ದಿನಾಂಕ ನಿಗದಿಗೊಳಿಸಲಾಗಿದೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ.
ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ. ನವೆಂಬರ್ 13ರ ಬುಧವಾರ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟವಾಗಲಿದೆ. ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದೇ?, ಇಲ್ಲವೇ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

ನೀತಿ ಸಂಹಿತೆಯ ವಿವರ
"ನವೆಂಬರ್ 11ರಿಂದ ಚುನಾವಣಾ ನೀತಿ ಸಂಹಿತೆ 15 ಕ್ಷೇತ್ರದಲ್ಲಿ ಜಾರಿಗೆ ಬರಲಿದೆ. ಇಡೀ ಜಿಲ್ಲೆಯ ಬದಲಿಗೆ ಚುನಾವಣೆ ನಡೆಯುವ ಕ್ಷೇತ್ರಕ್ಕೆ ಮಾತ್ರ ನೀತಿ ಸಂಹಿತೆ ಅನ್ವಯವಾಗುತ್ತದೆ. ನೀತಿ ಸಂಹಿತೆ ಇಡೀ ಜಿಲ್ಲೆಗೆ ಅನ್ವಯಿಸಿದರೆ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂದು ಮಾರ್ಪಾಡು ಮಾಡಲಾಗಿದೆ" ಎಂದು ಸಂಜೀವ್ ಕುಮಾರ್ ಹೇಳಿದರು.

ನವೆಂಬರ್ 18ರ ತನಕ ಅವಕಾಶ
ನವೆಂಬರ್ 11ರಿಂದ 18ರ ತನಕ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ಈ ಹಿಂದೆ ಚುನಾವಣೆ ಘೋಷಣೆಯಾದಾಗ 29 ಮಂದಿನ ನಾಮಪತ್ರ ಸಲ್ಲಿಸಿದ್ದರು. ಅದನ್ನು ಸಹ ಮಾನ್ಯ ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಯಾವ-ಯಾವ ಕ್ಷೇತ್ರಗಳು
ಕೆ. ಆರ್. ಪುರ, ಯಶವಂತಪುರ, ಶಿವಾಜಿನಗರ, ಮಹಾಲಕ್ಷ್ಮೀ ಲೇಔಟ್, ಹೊಸಕೋಟೆ, ಚಿಕ್ಕಬಳ್ಳಾಪುರ, ಹುಣಸೂರು, ಕೆ. ಆರ್. ಪೇಟೆ, ಗೋಕಾಕ್, ಅಥಣಿ, ಕಾಗವಾಡ, ರಾಣೆಬೆನ್ನೂರು, ಯಲ್ಲಾಪುರ, ವಿಜಯನಗರ ಮತ್ತು ಹಿರೇಕೆರೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ
15 ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ 8 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿದೆ. ಬಿಜೆಪಿ ಮತ್ತು ಜೆಡಿಎಸ್ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಅನರ್ಹರು ಸಲ್ಲಿಸಿರುವ ಅರ್ಜಿಯ ತೀರ್ಪು ಬಂದ ಮೇಲೆ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ.












Click it and Unblock the Notifications