ಎಚ್ಚರಿಕೆ: ಕರ್ನಾಟಕದಲ್ಲಿ ಪರೀಕ್ಷೆ ಹೆಚ್ಚಿಸಿದಂತೆ ಕೊರೊನಾವೈರಸ್ ಹೆಚ್ಚಳ!
ಬೆಂಗಳೂರು, ಆಗಸ್ಟ್ 17: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಿದಂತೆ ಹೊಸ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.01ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 2.46ರಷ್ಟಿದೆ.
ಸೋಮವಾರ 16,549 ಮಂದಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಹಾಗೂ 97,031 ಮಂದಿಗೆ RT-PCR ಟೆಸ್ಟ್ ನಡೆದಂತೆ ಒಟ್ಟು 1,13,580 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿತ್ತು. ಈ ಹಿನ್ನೆಲೆ 1065 ಹೊಸ ಪ್ರಕರಣಗಳು ವರದಿಯಾಗಿದ್ದವು. ಇದಾಗಿ 24 ಗಂಟೆಗಳಲ್ಲೇ ಸೋಂಕಿತ ತಪಾಸಣೆ ವೇಗ ಹೆಚ್ಚಿಸಿದಂತೆ ಸೋಂಕಿತ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 36,073 ಮಂದಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಹಾಗೂ 92,196 ಮಂದಿಗೆ RT-PCR ಟೆಸ್ಟ್ ಸೇರಿದಂತೆ ಒಟ್ಟು 1,28,269 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದ್ದು, 1298 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ರಾಜ್ಯದಲ್ಲಿ ಈವರೆಗೂ 76,51,631 ಜನರಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಮಾಡಲಾಗಿದೆ. ಇದರ ಹೊರತಾಗಿ 3,35,01,733 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಈವರೆಗೂ ಒಟ್ಟು 4,11,53,364 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ. ಕೊವಿಡ್-19 ಸೋಂಕಿನ ಪರೀಕ್ಷೆ ಹೆಚ್ಚಿಸಿದಂತೆ ಸೋಂಕಿತ ಪ್ರಕರಣಗಳು ಸಹ ಏರಿಕೆಯಾಗಿರುವುದು ಇಂದಿನ ವರದಿಯಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ.

ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಳಿತ
ರಾಜ್ಯದಲ್ಲಿ ಒಂದು ದಿನದಲ್ಲಿ 1298 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1833 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 32 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 37039 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2931827ಕ್ಕೆ ಏರಿಕೆಯಾಗಿದೆ. ಒಟ್ಟು 2873281 ಸೋಂಕಿತರು ಗುಣಮುಖರಾಗಿದ್ದು. 21481 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯ ರಾಜಧಾನಿಯಲ್ಲಿ 340 ಜನರಿಗೆ ಕೊವಿಡ್-19
ಬೆಂಗಳೂರಿನಲ್ಲಿ ಕಳೆದ ಒಂದು ದಿನದಲ್ಲಿ 340 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1233512ಕ್ಕೆ ಏರಿಕೆಯಾಗಿದೆ. 10 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 15951ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ಜಿಲ್ಲೆಯಲ್ಲಿ 7913 ಸಕ್ರಿಯ ಪ್ರಕರಣಗಳಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊವಿಡ್-19?
ರಾಜ್ಯದಲ್ಲಿ ಒಟ್ಟು 1298 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 0, ಬಳ್ಳಾರಿ 5, ಬೆಳಗಾವಿ 27, ಬೆಂಗಳೂರು ಗ್ರಾಮಾಂತರ 30 ಬೆಂಗಳೂರು 340, ಬೀದರ್ 0, ಚಾಮರಾಜನಗರ 7, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 59, ಚಿತ್ರದುರ್ಗ 7, ದಕ್ಷಿಣ ಕನ್ನಡ 288, ದಾವಣಗೆರೆ 14, ಧಾರವಾಡ 5, ಗದಗ 1, ಹಾಸನ 66, ಹಾವೇರಿ 1, ಕಲಬುರಗಿ 4, ಕೊಡಗು 37, ಕೋಲಾರ 17, ಕೊಪ್ಪಳ 1, ಮಂಡ್ಯ 18, ಮೈಸೂರು 88, ರಾಯಚೂರು 0, ರಾಮನಗರ 3, ಶಿವಮೊಗ್ಗ 51, ತುಮಕೂರು 52, ಉಡುಪಿ 122, ಉತ್ತರ ಕನ್ನಡ 48, ವಿಜಯಪುರ 2, ಯಾದಗಿರಿ 3 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

ಯಾವ ಹಂತದಲ್ಲಿ ಎಷ್ಟು ಫಲಾನುಭವಿಗಳಿಗೆ ಲಸಿಕೆ?
ರಾಜ್ಯದಲ್ಲಿ ಈವರೆಗೂ 7,62,360 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 5,67,662 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 9,34,811 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 4,19,138 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ಇದರ ಹೊರತಾಗಿ 45 ವರ್ಷಕ್ಕಿಂತ ಮೇಲ್ಪಟ್ಟ 1,27,54,368 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 60,05,513 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೂ 2,72,71,286 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 80,91,086 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.












Click it and Unblock the Notifications