KRS Dam: ಹಾರಂಗಿ ಜಲಾಶಯದಿಂದ ಕೆಆರ್ಎಸ್ ಜಲಾಶಯಕ್ಕೆ ನೀರು ಬಿಡುಗಡೆ
ರಾಜ್ಯದ ಪಶ್ಚಿಮ ಘಟ್ಟ, ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದು ನದಿಗಳಿಗೆ ಮರುಜೀವ ಕೊಟ್ಟಿದೆ. ರಾಜ್ಯದ ಬಹುತೇಕ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ಜಲಾಶಯಗಳ ಒಳಹರಿವು ಕೂಡ ಹೆಚ್ಚಾಗುತ್ತಿದೆ.
ಹಾರಂಗಿ ಜಲಾಶಯದ ಒಳಹರಿವು 2394 ಕ್ಯೂಸೆಕ್ಸ್ ಇದ್ದು 1200 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 8.50 ಟಿಎಂಸಿ ಆಗಿದ್ದು ಸದ್ಯ ಜಲಾಶಯದಲ್ಲಿ 5.64 ಟಿಎಂಸಿ ನೀರು ಸಂಗ್ರಹವಾಗಿದೆ.

ಕೃಷ್ಣರಾಜ ಸಾಗರ (ಕೆಆರ್ ಎಸ್) ಜಲಾಶಯಕ್ಕೆ ಸದ್ಯ 8425 ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, ಮಂಗಳವಾರದ ವೇಳೆಗೆ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಕೆಆರ್ ಎಸ್ ನಿಂದ ಸದ್ಯ 567 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. 49.45 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 25.09 ಟಿಎಂಸಿ ನೀರು ಸಂಗ್ರಹವಾಗಿದೆ.
ಅರ್ಧಕ್ಕೂ ಹೆಚ್ಚು ಭರ್ತಿಯಾದ ಕೆಆರ್ ಎಸ್
ಕಳೆದ ವರ್ಷ ನೀರಿಲ್ಲದೆ ಬಣಗುಡುತ್ತಿದ್ದ ಕನ್ನಂಬಾಡಿ ಅಣೆಕಟ್ಟೆ ಈ ಬಾರಿ ಮಳೆಗಾಲದಲ್ಲಿ ಬೇಗನೆ ತುಂಬುವ ಸಾಧ್ಯತೆ ಇದೆ. ಈಗಾಗಲೇ ಕೆಆರ್ ಎಸ್ ಜಲಾಶಯ ಅರ್ಧ ತುಂಬಿದ್ದು, ಜುಲೈ ಅಂತ್ಯ ಅಥವಾ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಮಳೆರಾಯ ಹೀಗೆ ಕೃಪೆ ತೋರಿದರೆ ಈ ಬಾರಿ ಕೃಷ್ಣರಾಜಸಾಗರ ಭರ್ತಿಯಾಗುವುದು ಗ್ಯಾರಂಟಿ. ಆದಷ್ಟು ಬೇಗ ಜಲಾಶಯ ಭರ್ತಿಯಾಗಿ ತಮಿಳುನಾಡಿನ ಪಾಲಿನ ನೀರನ್ನೂ ಹರಿಸಿದರೆ, ಕೆಆರ್ ಎಸ್ ವ್ಯಾಪ್ತಿಯ ರೈತರು ಕೂಡ ನೆಮ್ಮದಿಯಾಗಿ ಬೆಳೆ ಬೆಳೆದುಕೊಳ್ಳಬಹುದು.
ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ
— ರವಿ ಕೀರ್ತಿ ಗೌಡ (@ravikeerthi22) July 8, 2024
ಮುನ್ನೆಚ್ಚರಿಕೆ ಕ್ರಮವಾಗಿ ಹಾರಂಗಿ ಜಲಾಶಯದಿಂದ ೧೦೦೦ ಕ್ಯೂಸೆಕ್ ಪ್ರಮಾಣದ ನೀರು ನದಿಗೆ ಬಿಡುಗಡೆ.
ಈ ಹೊರಹರಿವು ಕುಡಿಗೆ ಹತ್ತಿರ ಕಾವೇರಿ ನದಿಗೆ ಸೇರಿ , ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿಯುತ್ತದೆ. #Kaveri #KarnatakaRains pic.twitter.com/lbIWHC5v2C
ಹಾರಂಗಿಯಿಂದ ನೀರು ಬಿಡುಗಡೆ
ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಹಾರಂಗಿ ಜಲಾಶಯದಿಂದ 1000 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದು ಕಾವೇರಿ ನದಿಗೆ ಸೇರಿ, ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿಯಲಿದೆ.












Click it and Unblock the Notifications