ದೇಶದಲ್ಲೇ ಮೊದಲು; KSRTC ಸಿಬ್ಬಂದಿಗೆ 1 ಕೋಟಿ ಅಪಘಾತ ವಿಮೆ ಸೌಲಭ್ಯ
ಬೆಂಗಳೂರು, ನವೆಂಬರ್ 14: ಭಾರತದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಸಿಬ್ಬಂದಿಗಳಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯವನ್ನು ಜಾರಿ ಮಾಡಲಾಗಿದೆ.
ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಕಾರದಲ್ಲಿ ರೂ. 50 ಲಕ್ಷ ವಿಮೆ ಇದೆ. ಸೋಮವಾರ ಮತ್ತೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಸಹಕಾರದಲ್ಲಿ ರೂ. 50 ಲಕ್ಷ ವಿಮಾ ಸೌಲಭ್ಯ ಒದಗಿಸಲು ನಿಗಮದ ಕೇಂದ್ರ ಕಚೇರಿಯಲ್ಲಿ ಸೋಮವಾರ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಮೂಲಕ ನಿಗಮದ ಸಿಬ್ಬಂದಿಗೆ ಒಟ್ಟು ರೂ. 1 ಕೋಟಿ ಅಪಘಾತ ವಿಮೆ ಸೌಲಭ್ಯ ಸಿಕ್ಕಂತಾಗಿದೆ.
ಶಾಸಕರು ಹಾಗೂ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಮಾತನಾಡಿ, "ನಮ್ಮ ಸಿಬ್ಬಂದಿ ಕೆಲಸ ಮೇಲೆ ಇದ್ದಾಗ ಮತ್ತು ಇಲ್ಲದಿರುವ ಮೃತಪಟ್ಟರೆ ಇಲ್ಲವೇ ಶಾಶ್ವತ ಅಥವಾ ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ ರೂ. 50 ಲಕ್ಷ ವಿಮಾ ಪರಿಹಾರ ಅನ್ವಯವಾಗಲಿದೆ. ಈಗಾಗಲೇ ಇದು ಭಾರತೀಯ ಸ್ಟೇಟ್ ಬ್ಯಾಂಕ್ ಸಹಭಾಗಿತ್ವದಲ್ಲಿ ಜಾರಿಯಲ್ಲಿದೆ" ಎಂದರು.

"ಅಲ್ಲದೇ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಜೊತೆಗೆ ರೂ. 50 ಲಕ್ಷದವರೆಗೆ ಅಪಘಾತ ಪರಿಹಾರ ವಿಮಾ ಯೋಜನೆ ಸಿಬ್ಬಂದಿಗೆ ಒದಗಿಸುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ವಿಮಾ ಯೋಜನೆ ಸಿಬ್ಬಂದಿ ಮಾಸಿಕ ರೂ. 62.50 ಅದಕ್ಕೆ ಸೇರಿ ಒಟ್ಟು ವಾರ್ಷಿಕ ರೂ. 885 ಕಂತನ್ನು ಪಾವತಿಸಬೇಕಾಗುತ್ತದೆ" ಎಂದು ತಿಳಿಸಿದರು.
ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಅತ್ಯುತ್ತಮವಾದ ಯೋಜನೆ ಇದಾಗಿದೆ. ಯೋಜನೆಗೆ ಸಹಕರಿಸಿದ ಜಂಟಿ ಕ್ರಿಯಾ ಸಮಿತಿಯ ಕಾರ್ಮಿಕ ಮುಖಂಡರಿಗೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಶಾಶ್ವತ ಅಂಗವೈಕಲ್ಯಕ್ಕೆ ರೂ. 50 ಲಕ್ಷ ಪರಿಹಾರ; ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ರೂ. 50 ಲಕ್ಷ ಪರಿಹಾರದ ಹಣ ಕೂಡಲೇ ದೊರೆಯಲಿದೆ. ಅಪಘಾತದಲ್ಲಿ ಸಿಬ್ಬಂದಿ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾದರೂ ರೂ. 50 ಲಕ್ಷಗಳ ವಿಮಾ ಪರಿಹಾರ ಸಿಗಲಿದೆ.

ಒಂದು ವೇಳೆ ಸಿಬ್ಬಂದಿಗೆ ತಾತ್ಕಾಲಿಕ ಅಂಗವೈಕಲ್ಯ ಉಂಟಾಗಿ, ತನ್ನ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅಸಮರ್ಥನಾದರೆ ಆತ ಚೇತರಿಸಿಕೊಳ್ಳುವವರೆಗೆ ರೂ. 50 ಲಕ್ಷ ಮೊತ್ತದ ಶೇ.1ರಷ್ಟು ಮೊತ್ತ (ರೂ. 5000)ವನ್ನು ಪ್ರತಿ ವಾರ ಹೆಚ್ಚಾದಂತೆ ಅಥವಾ ಅವರ ಮಾಸಿಕ ಸಂಬಳದ ಶೇ. 25ರಷ್ಟನ್ನು ಸಿಬ್ಬಂದಿಗೆ ವಿಮಾ ಸಂಸ್ಥೆಯು ನೀಡಲಿದೆ.












Click it and Unblock the Notifications