Karnataka Assembly Elections: ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಬಿಜೆಪಿ ನೇರ ಸ್ಪರ್ಧೆ
ಗುಂಡ್ಲುಪೇಟೆ, ಮಾರ್ಚ್ 23: ಚಾಮರಾಜನಗರ ಜಿಲ್ಲೆಯ ನೈಸರ್ಗಿಕ ಸೌಂದರ್ಯದ ಹಿಮ ಮಲೆಯನ್ನೇ ಮೈತುಂಬಿಕೊಂಡ ತಾಲೂಕು, ಕ್ಷೇತ್ರ ಗುಂಡ್ಲುಪೇಟೆ. ಇದು ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಕಳೆದ ಬಾರಿ ಇಲ್ಲಿ ಬಿಜೆಪಿ ಅಭ್ಯರ್ಥಿ ಜಯಶೀಲರಾಗಿದ್ದಾರೆ. ಈಗ ಕ್ಷೇತ್ರದಲ್ಲಿ ಸ್ಥಿತಿಗತಿಯ ಬಗ್ಗೆ ನೋಡೋಣ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ದಿವಂಗತ ಎಚ್‌ಎಸ್ ಮಹದೇವ ಪ್ರಸಾದ್ ಬದುಕಿರುವರೆಗೂ ಇದು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಇಲ್ಲಿ ಈಗ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ಇದೆ. ಆದರೆ ಇದು ಅಂತಿಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಹಣಿಗೆ ನಿಲ್ಲುತ್ತದೆ ಎಂದು ನೆಲಮೂಲದ ವಿಶ್ಲೇಷಕರು ಹೇಳುತ್ತಾರೆ. ಕಳೆದ 2018 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಿಎಸ್ ನಿರಂಜನ್ ಕುಮಾರ್ ಅವರು ಗೆಲುವು ಸಾಧಿಸಿದ್ದಾರೆ. ಇದು ಅವರ ಮೊದಲ ಗೆಲುವು.

ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಒಡ್ಡಲು ಮಾಜಿ ಸಚಿವ ಎಚ್ ಎಸ್ ಮಹದೇವಪ್ರಸಾದ್ ಹಾಗೂ ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್ ಅವರ ಮಗ ಎಚ್‌ಎಂ ಗಣೇಶ್ ಪ್ರಸಾದ್ ಮುಂದಾಗಿದ್ದಾರೆ. ಇದಕ್ಕಾಗಿ ಕ್ಷೇತ್ರದಲ್ಲಿ ಅವರ ತಾಯಿ ಸಚಿವೆಯಾಗಿದ್ದಾಗಿನಿಂದಲೂ ಓಡಾಟ ಮಾಡುತ್ತಿದ್ದಾರೆ. ಎಚ್‌ಎಚ್ ಮಹದೇವ ಪ್ರಸಾದ್ ನಿಧನದಿಂದ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಗೀತಾ ಅವರು ಗೆಲುವು ಕಂಡಿದ್ದರು, ಬಳಿಕ ಸಚಿವೆಯಾಗು ಆಯ್ಕೆಯಾಗಿದ್ದರು. ಇದಕ್ಕೆ ಮುಖ್ಯ ಡಿಕೆ ಶಿವಕುಮಾರ್ ಚುನಾವಣಾ ತಂತ್ರ. ಇಲ್ಲಿ ಡಿಕೆಶಿ ಮತ್ತೆ ಚುನಾವಣಾ ಚಾಣಕ್ಯರಾಗಿ ರುಜುವಾತು ಮಾಡಿಕೊಂಡಿದ್ದರು.
ಈಗ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಿರಂಜನ್ ಕುಮಾರ್ ಅವರಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿ ನಿರಂಜನ್ ಕುಮಾರ್ ಇದ್ದಾರೆ. ಈಗ ಅವರು ತಾವು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತದಾರರಲ್ಲಿ ಒಲವು ಗಳಿಸಲು ಮುಂದಾಗಿದ್ದಾರೆ. ಈಗ ಎರಡನೇ ಬಾರಿಗೆ ಆಯ್ಕೆಯಾಗಲು ಬಯಸಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆದಿದೆ. ಎಚ್‌ಎಚ್ ಮಹದೇವ್ ಪ್ರಸಾದ್ ಅವರ ಪುತ್ರ ಸೇರಿದಂತೆ ಟಿಕೆಟ್‌ಗಾಗಿ ಕಾಡಾ ಮಾಜಿ ಅಧ್ಯಕ್ಷರಾಗಿದ್ದ ಎಚ್‌ಎಚ್ ನಂಜಪ್ಪ ಕೂಡ ಪೈಪೋಟಿ ನಡೆಸಿದ್ದಾರೆ. ಆದರೆ ಟಿಕೆಟ್ ಯಾರಿಗೆ ಸಿಗುತ್ತದೆ ಎಂಬುದು ಗೊಂದಲವಾಗಿದೆ. ಇತ್ತೀಚೆಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮ ಭಾಷಣದಲ್ಲಿ ಜನರಿಗೆ ನೀವು ನನಗೆ ಜೈ ಎನ್ನಬೇಕಾದರೆ ಗಣೇಶ್ ಪ್ರಸಾದ್‌ನನ್ನು ಆರಿಸಿ ವಿಧಾನಸಭೆಗೆ ಕಳಿಸಬೇಕು ಎಂದು ಹೇಳಿದ್ದರು. ಹೀಗಾಗಿ ಈ ಕ್ಷೇತ್ರದ ಟಿಕೆಟ್ ಗಣೇಶ್ ಪ್ರಸಾದ್ ಅವರಿಗೆ ನಿಶ್ಚಿತ ಎನ್ನಲಾಗಿದೆ.

ಇನ್ನೂ ಬಿಜೆಪಿಯಿಂದ ಹಾಲಿ ಶಾಸಕ ಸಿಎಸ್ ನಿರಂಜನ್ ಕುಮಾರ್ ಅವರಿಗೆ ಟಿಕೆಟ್ ಪಕ್ಕ ಎನ್ನಲಾಗಿದೆ. ಇಲ್ಲಿಗೂ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಬಂದಿದ್ದು, ಆಗ ಇಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಚಿವ ಕೆಎಸ್ ಈಶ್ವರಪ್ಪ ನಿರಂಜನ್ ಕುಮಾರ್ ಅವರನ್ನು 30,000 ಮತಗಳ ಅಂತರದಿಂದ ಗೆಲ್ಲಿಸಿ ಎಂದು ಹೆಸರು ಉಲ್ಲೇಖಿಸಿ ಹೇಳಿದ್ದರು. ಈ ಮೂಲಕ ನಿರಂಜನ್ ಕುಮಾರ್ ಅವರಿಗೆ ಟಿಕೆಟ್ ಖಚಿತ ಎಂತಾಗಿದೆ. ಇವರಿಗೆ ಸ್ಪರ್ಧೆ ಒಡ್ಡಲು ಜೆಡಿಎಸ್‌ನಿಂದ ರೈತ ಸಂಘದಲ್ಲಿ ಗುರುತಿಸಿಕೊಂಡಿರುವ ಕಡುಬೂರು ಮಂಜುನಾಥ್ ಕಣಕ್ಕೆ ಇಳಿದಿದ್ದಾರೆ. ಇವರು ರೈತ ಸಂಘದ ಮುಖಂಡರ ಬೆಂಬಲದಿಂದ ಕಣಕ್ಕೆ ಇಳಿದಿದ್ದಾರೆ. ಈ ಬಾರಿಯೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಟಿಕೆಟ್ ನೀಡದ್ದಾರೆ. ಹೀಗಾಗಿ ಅವರು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ್ದಾರೆ.
ಕಳೆದ 25 ವರ್ಷಗಳಿಂದಲೂ ಎಚ್‌ಎಸ್ ಮಹದೇವಪ್ರಸಾದ್ ಅವರು ಗುಂಡ್ಲುಪೇಟೆಯನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿದ್ದಾರೆ, ಆದರೆ 2018ರಲ್ಲಿ ಕ್ಷೇತ್ರ ಬಿಜೆಪಿ ತೆಕ್ಕೆಗೆ ಹೋಗಿದೆ. ಈಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಅವರ ಪುತ್ರ ಗಣೇಶ್ ಪ್ರಸಾದ್ ಮುಂದಾಗಿದ್ದಾರೆ. ಇಲ್ಲಿ ಲಿಂಗಾಯತ ಸಮುದಾಯದ ಮತಗಳು ನಿರ್ಣಯಕವಾಗಿವೆ. ಇನ್ನೂ ಬಿಜೆಪಿಯಲ್ಲಿ ಹಾಲಿ ಶಾಸಕ ನಿರಂಜನ್ ಕುಮಾರ್‌ಗೆ ಬಂಡಾಯದ ಬಿಸಿ ಎದುರಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಅವರ ಮೇಲೆ ಒತ್ತಡ ತಂದು ನಿರಂಜನ್ ಅಭಿವೃದ್ದಿಯ ಕೆಲಸಗಳನ್ನು ಮಾಡಿದ್ದಾರೆ. ಆದರೆ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಚಾಮುಲ್ ನಿರ್ದೇಶಕ ಎಂಪಿ ಸುನೀಲ್ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಕೊಡದಿದ್ದರೆ ಪಕ್ಷೇತರವಾಗಿಯೂದರೂ ಸ್ಪರ್ಧೆ ನಡೆಸುತ್ತೇನೆ ಎಂದು ಅವರು ಹೇಳುತ್ತಿದ್ದಾರೆ, ಹೀಗಾಗಿ ನಿರಂಜನ್‌ಗೆ ಬಂಡಾಯ ಎದುರಾಗಿದೆ.












Click it and Unblock the Notifications