ಕಲಬುರಗಿ ಜನರ ವಿಮಾನ ಹಾರಾಟದ ಕನಸು ಶೀಘ್ರವೇ ನನಸು
ಕಲಬುರಗಿ, ಆಗಸ್ಟ್ 24 : ಕಲಬುರಗಿ ಜನರ ಬಹುದಿನದ ಕನಸು ನನಸಾಗುವ ದಿನ ಹತ್ತಿರವಾಗುತ್ತಿದೆ. ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣದಲ್ಲಿ ಆ.26ರಂದು ಪ್ರಾಯೋಗಿಕ ಸಂಚಾರ ನಡೆಯಲಿದೆ.
ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದರು. ಶ್ರೀನಿವಾಸ ಸರಡಗಿ ಹತ್ತಿರ ನಿರ್ಮಾಣಗೊಂಡಿರುವ ಕಲಬುರಗಿ ವಿಮಾನ ನಿಲ್ದಾಣಕ್ಕೆ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಗಸ್ಟ್ 26ರಂದು ಟ್ರೈಯಲ್ ಲ್ಯಾಂಡಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿಮಾನ ನಿಲ್ದಾಣಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸುವಂತೆ ಸೂಚಿಸಿದರು. ವಿಮಾನ ನಿಲ್ದಾಣದ ರನ್‍ವೇ ಮೇಲೆ ವಿಮಾನ ಇಳಿಯುವಾಗ ಅಥವಾ ಹಾರುವಾಗ ಯಾವುದೇ ತರಹದ ಅಡಚಣೆಯಾಗದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸಬೇಕು ಎಂದು ನಿರ್ದೇಶನ ನೀಡಿದರು.

ಹೈದರಾಬಾದ್‌ನಿಂದ ಡೈಮಂಡ್ ಡಿಎ 40 ಹಾಗೂ ಡೈಮಂಟ್ ಡಿಎ 42 ಎಂಬ ಎರಡು ವಿಮಾನಗಳು ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿವೆ. ಈ ವಿಮಾನಗಳು ನಾಲ್ಕು ಪ್ರಯಾಣಿಕರು ಸಂಚಾರ ನಡೆಸಬಹುದಾದದ ಲಘು ವಿಮಾನಗಳಾಗಿವೆ.
ಆಗಸ್ಟ್ 26ರಂದು ಬೆಳಗ್ಗೆ 10.30 ರಿಂದ 11 ಗಂಟೆಯೊಳಗೆ ವಿಮಾನಗಳು ಕಲಬುರಗಿಗೆ ಆಗಮಿಸಲಿವೆ. ವಿಮಾನ ನಿಲ್ದಾಣದಲ್ಲಿ ಅಂಬ್ಯುಲೆನ್ಸ್ ಹಾಗೂ ಆಗ್ನಿಶಾಮಕ ದಳದವರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಹೈದರಾಬಾದ್‌ನ ಏಶಿಯಾ ಫೆಸಿಫಿಕ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿಯ ತಂಡದವರು ವಿಮಾನದ ಟ್ರೈಯಲ್ ಲ್ಯಾಂಡಿಂಗ್‌ಗೂ ಮುಂಚೆ ರನ್‍ವೇ ಮೇಲೆ ಫಾರೇನ್ ಆಬ್ಜೇಕ್ಟ್ ಡ್ಯಾಮೇಜ್ ಕುರಿತು ಪರಿಶೀಲನೆ ಕೈಗೊಳ್ಳುವರು. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ತಯಾರಿ ನಡೆಸಲಿದ್ದಾರೆ.

ಜನರು ಪ್ರಾಯೋಗಿಕ ಲ್ಯಾಂಡಿಂಗ್ ವೀಕ್ಷಿಸಲು ಅವಕಾಶ ನೀಡಲಾಗಿದೆ. ಸಾರ್ವಜನಿಕರು ಬೆಳಗಿನ 10.30 ಗಂಟೆಯೊಳಗಾಗಿ ಶ್ರೀನಿವಾಸ ಸರಡಗಿ ರಸ್ತೆಯ ಮೂಲಕ ವಿಮಾನ ನಿಲ್ದಾಣದ ಮುಖ್ಯ ಪ್ರವೇಶ ದ್ವಾರವನ್ನು ಪ್ರವೇಶಿಸಬೇಕು.
ಭದ್ರತಾ ಸಿಬ್ಬಂದಿಗಳು ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ಯಾವುದೇ ತರಹದ ವಸ್ತುಗಳನ್ನು ಕೊಂಡೊಯ್ಯಬಾರದು ಹಾಗೂ ಸಾರ್ವಜನಿಕರಿಗಾಗಿ ನಿಗದಿಪಡಿಸಿದ ಸ್ಥಳದಲ್ಲಿಯೇ ನಿಂತು ವಿಮಾನ ಹಾರಾಟ ವೀಕ್ಷಿಸಬೇಕು.












Click it and Unblock the Notifications