'ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಕಾಂಗ್ರೆಸ್ ಮೂಗು ತೂರಿಸಲ್ಲ'
ಕಲಬುರಗಿ, ಜನವರಿ 08: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಇರುವುದಿಲ್ಲ ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯಿಲಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ಮೂಗು ತೂರಿಸುವುದಿಲ್ಲ. ಈ ವಿಷಯವಾಗಿ ಕಾಂಗ್ರೆಸ್ ಸಚಿವರು ಹೇಳಿಕೆ ಕೊಟ್ಟಿದ್ದರೆ ಅದು ಅವರ ವೈಯಕ್ತಿಕ ವಿಚಾರವೇ ಹೊರತು ಪಕ್ಷದ್ದಲ್ಲ ಎಂದರು.
ಜನವರಿ ತಿಂಗಳ ಅಂತ್ಯಕ್ಕೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ತಲುಪಿಸುವುದಾಗಿ ಹೇಳಿದ ಮೊಯಿಲಿ, 2025ರೊಳಗೆ ನವಕರ್ನಾಟಕ ನಿರ್ಮಾಣದ ಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲಾಗಿದ್ದು, ರಾಜ್ಯದ ಎಲ್ಲಾ ಭಾಗದ ಜನರ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಲಾಗಿದೆ ಎಂದರು.

ರೈತಾಪಿ ವರ್ಗ, ಪ್ರಾದೇಶಿಕ ಅಭಿವೃದ್ಧಿ, ಎಲ್ಲಾ ವರ್ಗದ ಜನರಿಗೆ ಅಗತ್ಯ ಯೋಜನೆಗಳನ್ನು ಪ್ರಣಾಳಿಕೆ ಒಳಗೊಂಡಿರುತ್ತದೆ. ಮುಖ್ಯವಾಗಿ ಸತ್ಯ ಮತ್ತು ರಾಜಧರ್ಮದ ಆಧಾರದ ಮೇಲೆ ಈ ಬಾರಿಯ ಚುನಾವಣಾ ಪ್ರಣಾಳಿಕೆ ತಯಾರು ಮಾಡಲಾಗುತ್ತಿದ್ದು, ಪ್ರಣಾಳಿಕೆ ರಚನೆ ಸಂಬಂಧ ರಾಜ್ಯದ ಆರು ವಿಭಾಗಗಳಲ್ಲಿ ಎಲ್ಲಾ ಜಿಲ್ಲೆಯ ಜನಪ್ರತಿನಿಧಿಗಳು, ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಮೋದಿಗೆ ಭಯ:
ಗುಜರಾತ್ ಚುನಾವಣೆಗೆ ಬಗ್ಗೆ ಮಾತನಾಡಿದ ಸಂಸದ ವೀರಪ್ಪ ಮೊಯಿಲಿ, ಪ್ರಧಾನಿ ಮೋದಿ ಅವರಿಗೆ ಗುಜರಾತ್ ಚುನಾವಣೆಯಲ್ಲಿ ನಡುಕ ಶುರುವಾಗಿತ್ತು, "ನನ್ನ ಹತ್ಯೆಗೆ ಸುಪಾರಿ ನೀಡಲಾಗಿದೆ" ಎಂದು ಸುಳ್ಳು ಹೇಳಿ, ಭಾವನಾತ್ಮಕವಾಗಿ ಮಾತನಾಡಿ ಜನರ ಕರುಣೆ ಗಿಟ್ಟಿಸಿಕೊಂಡು ಗೆದ್ದರು. ಆದರೆ ಪ್ರಧಾನಿ ಅವರ ಈ ಕಲೆ ಕರ್ನಾಟಕದ ಚುನಾವಣೆಯಲ್ಲಿ ನಡೆಯದು ಎಂದು ಅವರು ಹೇಳಿದರು.












Click it and Unblock the Notifications