ಬಿಜೆಪಿ ಅಧಿಕಾರದಲ್ಲಿದ್ದಾಗ ಜನರ ದುಡ್ಡು ಜೇಬಿಗೆ ಹೋಗುತ್ತಿತ್ತು- ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ, ಏಪ್ರಿಲ್ 02: ಆರ್ಥಿಕ ಸುಭದ್ರತೆ ಹಾಗೂ ಸ್ವಾಭಿಮಾನದ ಬದುಕಿನ ಭರವಸೆಯನ್ನು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೀಡುತ್ತಿದ್ದೇವೆ. ಇವುಗಳ ಮೂಲಕ ರಾಜ್ಯದಲ್ಲಿ ಬಹಳ ದೊಡ್ಡ ಬದಲಾವಣೆ ತರುತ್ತಿದ್ದೇವೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷಕ್ಕೆ ಯಾವುದೇ ಮುಜುಗರವಾಗದಂತೆ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ. ಐದು ಗ್ಯಾರಂಟಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಮತದಾರರ ಮುಂದೆ ನಿಂತು ಈಗ ಆಶೀರ್ವಾದ ಕೇಳುವ ಎದೆಗಾರಿಕೆ ನಮಗಿದೆ ಎಂದರು.

ಬಿಜೆಪಿಗರು ಅಧಿಕಾರದಲ್ಲಿದ್ದಾಗ ಜನರ ದುಡ್ಡು ಅವರ ಜೇಬಿಗೆ ಹೋಗುತ್ತಿತ್ತು. ಈಗ ನಮ್ಮ ಸರ್ಕಾರದ ಅವಧಿಯಲ್ಲಿ ಜನರ ದುಡ್ಡು ಗ್ಯಾರಂಟಿ ಯೋಜನೆಯ ಮೂಲಕ ಮತ್ತೆ ಜನರ ಕೈ ಸೇರುತ್ತಿದೆ. ಎಲ್ಲ ಯೋಜನೆಗಳಿಗೆ ವಾರ್ಷಿಕ 52,000 ಕೋಟಿ ವೆಚ್ಚವಾಗುತ್ತದೆ. ಆದರೂ ಕೂಡಾ ಸರ್ಕಾರ ತನ್ನ ಭರವಸೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ನನ್ನ ಬಗ್ಗೆ ಟೀಕಿಸುವಾಗ ಮಾತ್ರ ಸಂಸದ ಬಾಯಿ ತೆಗೆಯುತ್ತಾರೆ. ಆದರೆ, ಅಭಿವೃದ್ದಿ ವಿಚಾರ ಬಂದಾಗ ಬಾಯಿ ಮುಚ್ಚಿಕೊಂಡಿರುತ್ತಾರೆ. ಕುಂಬಕರ್ಣ ನಿದ್ರೆಯಲ್ಲಿ ಇರುವ ಜಾಧವ್ ಅವರಿಗೆ ಜನರ ಕಷ್ಟ ಕೇಳಿಸುತ್ತಿಲ್ಲ. ಬೆಲೆಗಳು ಗಗನಕ್ಕೇರಿವೆ. ಹುದ್ದೆಗಳ ಸೃಷ್ಠಿ ಮಾಡುವಲ್ಲಿ ಕೇಂದ್ರ ವಿಫಲವಾಗಿದೆ. ರೈತರ ಸಾಲ ಮನ್ನಾ ಮಾಡಿ ಎಂದರೆ ದುಡ್ಡು ಇಲ್ಲ ಎಂದ ಕೇಂದ್ರ ಸರ್ಕಾರ ಬಂಡವಾಳಗಾರರ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ.
ಬಿಜೆಪಿ ಸರ್ಕಾರ ಜನರ ವಿರೋಧಿ ಆಡಳಿತ ನಡೆಸುತ್ತಿದೆ. ಜಿಎಸ್‌ಟಿ ಟ್ಯಾಕ್ಸ್ ಎಲ್ಲದರಲ್ಲೂ ಹಾಕಿದ್ದಾರೆ. ಗಾಳಿ ಒಂದನ್ನು ಹೊರತುಪಡಿಸಿ ಎಲ್ಲವಕ್ಕೂ ಟ್ಯಾಕ್ಸ್ ಹಾಕಲಾಗಿದೆ. ಮತ್ತೊಂದು ಕಡೆ ಜಿಲ್ಲೆಗೆ ಬಂದ ಹಲವಾರು ಯೋಜನೆಗಳು ವಾಪಸ್ ಹೋಗಿವೆ. ಕೋಲಿ ಕಬ್ಬಲಿಗ ಸಮಾಜವನ್ನು ಎಸ್‌ಟಿಗೆ ಸೇರಿಸುತ್ತೇನೆ ಎಂದಿದ್ದ ಜಾಧವ್ ಅವರೇ ಈಗ ಏನು ಮಾಡುತ್ತಿದ್ದೀರಿ ? ನಾನು ಶಹಾಬಾದ್ ಅಭಿವೃದ್ದಿಗೆ ರೂ 20 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇನೆ. ನೀವೇನು ಮಾಡಿದ್ದೀರಾ? ಎಂದು ಪ್ರಶ್ನಿಸಿದರು.
ಈ ಸಲದ ಚುನಾವಣೆ ಅಭಿವೃದ್ದಿಯ ಹಿನ್ನೆಲೆಯ ಚುನಾವಣೆಯಾಗಿದೆ. ನನ್ನ ಮುಖ ನೋಡಿ ಓಟು ಹಾಕುವುದಕ್ಕಿಂತ ಜಿಲ್ಲೆಯ ಸಮಗ್ರ ಅಭಿವೃದ್ದಿ ಹಾಗೂ ಸಂವಿಧಾನದ ಸಂರಕ್ಷಣೆಗಾಗಿ ಕಾಂಗ್ರೆಸ್ ಮತ ನೀಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಮಾತನಾಡಿ ಈ ಸಲ ಲೋಕಸಭೆ ಚುನಾವಣೆಯಲ್ಲಿ ಶಹಾಬಾದ್ ನಲ್ಲಿ ನನಗೆ ಕನಿಷ್ಠ 10,000 ಮತಗಳ ಲೀಡ್ ಕೊಡಬೇಕು ಎಂದು ಮನವಿ ಮಾಡಿದರು.












Click it and Unblock the Notifications