Kalaburagi: ನಗರದಲ್ಲಿ ಮಹಾರಾಷ್ಟ್ರ ಬಸ್ ತಡೆದು ಮಸಿ ಬಳಿದ ಕನ್ನಡಿಗರು
ಕಲಬುರಗಿ, ಮಾರ್ಚ್ 02: ಆಗಾಗ ಭಾಷೆ, ಗಡಿ ಸಮಸ್ಯೆಯಿಂದ ಮುನ್ನೆಲೆಗೆ ಬರುತ್ತಿದ್ದ ಬೆಳಗಾವಿ ಕೆಲವು ದಿನಗಳ ಹಿಂದೆ ಮರಾಠಿ ಕಿಡಿಗೇಡಿಗಳ ದೌರ್ಜನ್ಯ, ದರ್ಪದಿಂದ ಸದ್ದು ಮಾಡಿದೆ. ಅನೇಕ ಕನ್ನಡ ಪರ ಸಂಘಟನೆಗಳು ಬೆಳಗಾವಿಯಲ್ಲೇ ಬೃಹತ್ ಪ್ರತಿಭಟನೆ ಮಾಡಿವೆ. ಇದೀಗ ಕಲಬುರಗಿಯಲ್ಲೂ ಬೆಳಗಾವಿ ಬಿಸಿ ವ್ಯಾಪಿಸಿದೆ. ಮಹಾರಾಷ್ಟ್ರ ಬಸ್ ತಡೆದು ಕಲಬುರಗಿಯಲ್ಲಿ ಕನ್ನಡಿಗರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಮಲ್ಲಿಕಾರ್ಜುನ್ ಸಾರವಾಡ ನೇತೃತ್ವದ ಜಯ ಸಂಘಟನೆಯ ಕಾರ್ಯಕರ್ತರು ಕಲಬುರಗಿ ನಗರದ ಆಳಂದ ಚೆಕ್ ಪೋಸ್ಟ್ ಬಳಿಕ ಮಹಾರಾಷ್ಟ್ರ ಸಾರಿಗೆಗೆ, ಮರಾಠಿ ನಾಮಫಲಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ಬಸ್ ಮತ್ತು ಸಿಬ್ಬಂದಿಗೆ ಮಸಿ ಬಳಿದು ಮರಾಠಿಗರಿಗೆ ಪ್ರತ್ಯುತ್ತರ ನೀಡಿದ್ದಾರೆ.

ಇನ್ನೂ ಮಹಾರಾಷ್ಟ್ರ ಬಸ್ ಮೆಲೆ ಕನ್ನಡ ಧ್ವಜ ಕಟ್ಟಿದ್ದಾರೆ. ಈ ವೇಳೆ ಜಯ ಕರ್ನಾಟಕ ಸಂಘಟನೆಯ ಕಾಯಕರ್ತರು, ಮುಖಂಡರು ಆ ಬಸ್ ಚಾಲಕನಿಗೆ ಹಾರ ಹಾಕಿ ಕನ್ನಡ ಪರ ಘೋಷಣೆ ಕೂಗಿದ್ದಾರೆ. ಇತ್ತೀಚೆಗೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ಕಿಡಿಗೇಡಿಗಳು, KSRTC ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಬಳಿಕ ಇದೆಲ್ಲ ಬೆಳವಣಿಗೆಗಳು ನಡೆದಿವೆ.
ನಮ್ಮ ರಾಜ್ಯದ ಬಸ್‌ಗಳಿಗೆ ಮಸಿ ಬಳಿದಿದ್ದಾರೆ. ಚಾಲಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಇದನ್ನು ಅನೇಕ ಕನ್ನಡಪರ ಸಂಘಟನೆಗಳು, ಕನ್ನಡಿಗರು ವಿರೋಧಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಪರ ಸಂಘಟನೆಗಳು ಸೇರಿದಂತೆ ನೂರಾರು ಮಂದಿ ಬೆಳಗಾವಿಯಲ್ಲಿ ಪ್ರತಿಭಟಿಸಿದರು. ಮಹಾರಾಷ್ಟ್ರ ಬಸ್ ಚಾಲಕರ ಬಾಯಿಂದಲೇ ಕನ್ನಡಪರ ಘೋಷಣೆ ಕೂಗಿಸಿದ ಘಟನೆಗಳು ವರದಿ ಆಗಿವೆ. ಇತ್ತ ಕನ್ನಡಿಗರು ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.
ಕರ್ನಾಟಕ ಬಂದ್‌ಗೆ ಕರೆ
ಮರಾಠಿಗರ ಪುಂಡಾಡಿಕೆ, ದೌರ್ಜನ್ಯವು ಕರ್ನಾಟಕ ವ್ಯಾಪಿ ಸದ್ದು ಮಾಡಿದೆ. ಈ ಸಂಬಂಧ ಮಾರ್ಚ್ 22ರಂದು ಪ್ರತಿಭಟನೆ ಹಮ್ಮಿಕೊಳ್ಳಲು ಕನ್ನಡಪರ ಸಂಘಟನೆಗಳು ನಿರ್ಧರಿಸಿವೆ. ಇದರ ಮುಂದಾಳತ್ವವನ್ನು ಕನ್ನಡಪರ ಚಳವಳಿಗಾರ, ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ವಹಿಸಲಿದ್ದಾರೆ. ಈಗಾಗಲೇ ಫಿಲ್ಮ್ ಚೇಂಬರ್, ರಾಜ್ಯ ಆಟೋ ಸಂಘ, ಕರವೇಯ ಒಂದು ಬಣದವರು ಸೇರಿದಂತೆ ಅನೇಕರು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಇನ್ನೂ ಕೆಲವರು ಈ ಬಗ್ಗೆ ನಿರ್ಧಾರ ಶೀಘ್ರವೇ ಪ್ರಕಟಿಸಲಿದ್ದಾರೆ.












Click it and Unblock the Notifications