ಕರ್ನಾಟಕ; 6 ಜಿಲ್ಲೆಗಳಲ್ಲಿ ಹೊಸ ಕೋವಿಡ್ ಪ್ರಕರಣಗಳು ಶೂನ್ಯ
ಬೆಂಗಳೂರು, ಡಿಸೆಂಬರ್ 10; ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ಭೀತಿಯ ನಡುವೆಯೇ ಶುಭ ಸುದ್ದಿಯೊಂದಿದೆ. ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. 6 ಜಿಲ್ಲೆಗಳಲ್ಲಿ 24 ಗಂಟೆಯಲ್ಲಿ ಯಾವುದೇ ಹೊಸ ಕೋವಿಡ್ ಪ್ರಕರಣ ದಾಖಲಾಗಿಲ್ಲ.
ಡಿಸೆಂಬರ್ 9ರ ಹೆಲ್ತ್ ಬುಲೆಟಿನ್ ಪ್ರಕಾರ ಕಲಬುರಗಿ ವಲಯದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ 24 ಗಂಟೆಯಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಶೂನ್ಯವಾಗಿದೆ. ರಾಜ್ಯದಲ್ಲಿ 373 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7332 ಆಗಿದೆ.
ಒಂದು ದಿನದ ಅವಧಿಯಲ್ಲಿ 1.18 ಲಕ್ಷ ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್‌ನಲ್ಲಿ ಹೇಳಿದೆ. 19 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಸೋಂಕು ದೃಢ ಪ್ರಮಾಣ ಶೇ 0.31ರಷ್ಟಿದೆ.

ಕಲಬುರಗಿ ವಲಯದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಈ ವರ್ಷದಲ್ಲಿ 2ನೇ ಬಾರಿಗೆ 24 ಗಂಟೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಈ ಮೂಲಕ ಜಿಲ್ಲೆ ಕೋವಿಡ್ ಮುಕ್ತವಾಗುವತ್ತ ಹೆಜ್ಜೆ ಹಾಕಿವೆ.
ಹೊಸ ಪ್ರಕಣಗಳು ವರದಿಯಾದ ಜಿಲ್ಲೆಗಳ ಪೈಕಿ 6 ಜಿಲ್ಲೆಗಳಲ್ಲಿ ಎರಡಂಕಿ, 12 ಜಿಲ್ಲೆಗಳಲ್ಲಿ ಒಂದಂಕಿ ಪ್ರಕರಣ ದಾಖಲಾಗಿವೆ. ಬೆಂಗಳೂರು ನಗರದಲ್ಲಿ 211 ಹೊಸ ಪ್ರಕರಣ ದಾಖಲಾಗಿದೆ. ಶಿವಮೊಗ್ಗ 30, ಕೊಡಗು 21, ಹಾಸನ 12, ತುಮಕೂರು 11, ದಕ್ಷಿಣ ಕನ್ನಡದಲ್ಲಿ 11 ಪ್ರಕರಣ ಪತ್ತೆಯಾಗಿದೆ.
Koo App
ರಾಜ್ಯದಲ್ಲಿ 24 ಗಂಟೆಯ ಅವಧಿಯಲ್ಲಿ 292 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 2999471 ಆಗಿದ್ದು, 2953857 ಜನರು ಗುಣಮುಖಗೊಂಡಿದ್ದಾರೆ.
ಕಡಿಮೆ ಹೊಸ ಪ್ರಕರಣಗಳು; ಬಾಗಲಕೋಟೆ 1, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 6, ಚಾಮರಾಜನಗರ 3, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 9, ಧಾರವಾಡ 9, ಕೋಲಾರ 1, ಮಂಡ್ಯ 4, ಉಡುಪಿ 6, ಉತ್ತರ ಕನ್ನಡ 8, ವಿಜಯಪುರ 1 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.
ಕಲಬುರಗಿ ವಲಯ ಹೊರತುಪಡಿಸಿ ಕಳೆದ 24 ಗಂಟೆಯಲ್ಲಿ ಚಿತ್ರದುರ್ಗ, ದಾವಣಗೆರೆ, ಹಾವೇರಿ, ರಾಮನಗರ ಜಿಲ್ಲೆಗಳಲ್ಲಿಯೂ ಸಹ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ.
ಮೊದಲ ಸ್ಥಾನದಲ್ಲಿ ಕರ್ನಾಟಕ; ಹೊಸ ಕೋವಿಡ್ ಪ್ರಕರಣಗಳು ಒಂದು ಕಡೆ ಕಡಿಮೆಯಾಗುತ್ತಿವೆ. ಮತ್ತೊಂದು ಕಡೆ ರಾಜ್ಯ ಮೊದಲ ಡೋಸ್ ಲಸಿಕೆ ನೀಡಿರುವುದರಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಮಾಹಿತಿ ನೀಡಿದ್ದಾರೆ, "ದೇಶದಲ್ಲಿ ಕೋವಿಡ್ ಲಸಿಕೆ ಮೊದಲ ಡೋಸ್ ವಿತರಣೆಯಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ಶೇ 94.38ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ" ಎಂದು ಸಚಿವರು ಹೇಳಿದ್ದಾರೆ.
ಗುರುವಾರ ರಾಜ್ಯದಲ್ಲಿ3.03 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಇದುವರೆಗೂ 7.93 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. 3.31 ಕೋಟಿ ಜನರು ಎರಡು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.
ಸಾವು ಸಹ ಇಳಿಮುಖ; ದೇಶದ ಒಟ್ಟಾರೆ ಕೋವಿಡ್ 19 ಮರಣ ಪ್ರಕರಣಗಳಲ್ಲಿ ಕರ್ನಾಟಕವು 3ನೇ ಸ್ಥಾನಕ್ಕೆ ಇಳಿದಿದೆ. ಕರ್ನಾಟಕದಲ್ಲಿ 38,185 ಕೋವಿಡ್ ಮರಣಗಳಿದ್ದರೆ, ಕೇರಳ 38,353 ಸಂಖ್ಯೆಯ ಪರಿಷ್ಕೃತ ದಾಖಲೆಗಳೊಂದಿಗೆ ಎರಡನೇ ಸ್ಥಾನಕ್ಕೆ ಏರಿದೆ ಎಂದು ಆರೋಗ್ಯ ಸಚಿವರ ಟ್ವೀಟ್ ಮಾಡಿದ್ದಾರೆ.












Click it and Unblock the Notifications