ಕಲಬುರಗಿ: ಶಾಂತಗೌಡ ಬಿರಾದರ್ ಮನೆಯ ಪೈಪ್‌ನಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾಗಿದ್ದು ಹೇಗೆ?
ಕಲಬುರಗಿ, ನವೆಂಬರ್ 25: ರಾಜ್ಯದಲ್ಲಿ ನಿನ್ನೆ (ಬುಧವಾರ) ಸುಮಾರು 68 ಕಡೆಗಳಲ್ಲಿ 15 ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ದಾಳಿ ನಡೆಸಿದ್ದಾರೆ.
Recommended Video
ಎಸಿಬಿ ದಾಳಿ ವೇಳೆ ಭ್ರಷ್ಟ ಅಧಿಕಾರಿಗಳು ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ದಾಖಲೆಗಳು, ನಗದು ಮತ್ತು ಆಭರಣಗಳು ಸಿಕ್ಕಿವೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಭ್ರಷ್ಟರಿಗೆ ಎಸಿಬಿ ಶಾಕ್ ನೀಡಿ, ದಾಖಲೆ ಸೇರಿ ಕೆಜಿಗಟ್ಟಲೆ ಚಿನ್ನ, ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಕಲಬುರಗಿಯ ಶಾಂತಗೌಡ ಬಿರಾದರ್ ಮನೆಯ ಪೈಪ್‌ನಲ್ಲಿ ಕಂತೆ ಕಂತೆ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿ ಪೈಪ್‌ನಲ್ಲಿ ಇದ್ದ ಹಣವನ್ನು ಪತ್ತೆ ಮಾಡಿದ್ದು ರೋಚಕವಾಗಿದೆ.

ಪೈಪ್‌ನಲ್ಲಿ ಹಣ ಪತ್ತೆ ಮಾಡಿದ್ದು ಹೇಗೆ?
ಎಸಿಬಿ ಅಧಿಕಾರಿಗಳ ದಾಳಿ ವೇಳೆ ಪಿಡಬ್ಲೂಡಿ ಜೆಇ ಶಾಂತಗೌಡ ಬಿರಾದರ್ ಮನೆಯ ನೀರಿನ ಪೈಪ್‌ನಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾಗಿತ್ತು. ಕಲಬುರಗಿ ಜಿಲ್ಲೆಯ ಗುಬ್ಬಿ ಕಾಲೋನಿಯಲ್ಲಿರುವ ಅವರ ಮನೆಯ ಪೈಪ್‌ನಲ್ಲಿ ಸುಮಾರು 54.5 ಲಕ್ಷ ಹಣ ಪತ್ತೆಯಾಗಿದೆ. ಆದರೆ ಪೈಪ್‌ನಲ್ಲಿ ಇದ್ದ ಹಣವನ್ನು ಪತ್ತೆ ಮಾಡಿದ್ದು ರೋಚಕವಾಗಿದೆ.
ಹಣ ಸಿಕ್ಕಿದ್ದ ಪೈಪ್ ವಾಷಿಂಗ್ ಮಷಿನ್‌ನಿಂದ ನೀರು ಹೊರ ಹೋಗಲು ಸಂಪರ್ಕ ಹೊಂದಿದೆ. ಕಳೆದ ಎರಡು ತಿಂಗಳಿನಿಂದ ವಾಷಿಂಗ್ ಮಷಿನ್ ಬಳಸಿರಲಿಲ್ಲ. ಎಸಿಬಿ ಅಧಿಕಾರಿಗಳು ಬಂದ ತಕ್ಷಣ ಶಾಂತಗೌಡ ಬಿರಾದರ್ ಕಂತೆ ಕಂತೆ ಹಣವನ್ನು ಪೈಪ್‌ನಲ್ಲಿ ಹಾಕಿದ್ದಾರೆ. ಹಣ ಹಾಕಿದ ನಂತರ ಪ್ಲೇಟ್ ಬದಲಾಗಿ ಅದರ ಮೇಲೆ ಕಲ್ಲು ಇಟ್ಟಿದ್ದರು.
ಶಾಂತಗೌಡ ಬಿರಾದರ್ ಮನೆಯ ಟಾಯ್ಲೆಟ್ ಬಳಿ ವಾಷಿಂಗ್ ಮಷಿನ್ ಇಟ್ಟಿದ್ದಾರೆ. ಎಸಿಬಿ ದಾಳಿ ನಡೆಸಿದ ವೇಳೆ ಪದೇ ಪದೇ ಟಾಯ್ಲೆಟ್ಗೆ ಹೋಗಿ ಬರುವುದಾಗಿ ಹೇಳುತ್ತಿದ್ದರು. ಹಣ ಸಿಕ್ಕಿದ ಪೈಪ್ ಬಳಿ ಶಾಂತಗೌಡ ಮತ್ತು ಅವರ ಪುತ್ರ ಹೋಗುತ್ತಿದ್ದರು.
ತಂದೆ ಮಗ ಪೈಪ್ ಬಳಿಯೇ ಹೆಚ್ಚು ಓಡಾಟ ನಡೆಸುತ್ತಿದ್ದರು. ಅನುಮಾನಗೊಂಡ ಎಸಿಬಿ ಸಿಬ್ಬಂದಿ ಪೈಪ್ ಮೇಲಿನ ಕಲ್ಲು ತಳ್ಳಿದ್ದಾರೆ. ಆಗ ಪೈಪ್‌ನಲ್ಲಿ ಹಣ ಇರುವುದು ಕಣ್ಣಿಗೆ ಬಿದ್ದಿದೆ. ಮನೆ ಹೊರಗಡೆಯಿಂದ ಪೈಪ್ ಕತ್ತರಿಸಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ.
ತಂದೆ, ಮಗ ಮಾತ್ರ ವಾಸ್ತವ್ಯ
ಐಷಾರಾಮಿ ಮನೆಯ 2ನೇ ಮಹಡಿಯಲ್ಲಿ ಶಾಂತಗೌಡ ಪುತ್ರನ ಜೊತೆ ವಾಸವಾಗಿದ್ದರು. ಅಧಿಕಾರಿಗಳು ಬರುತ್ತಿದ್ದಂತೆ ಹಣವನ್ನು ನೀರನ ಪೈಪ್‌ನಲ್ಲಿ ಹಾಕಿದ್ದರು. ಎಸಿಬಿ ಅಧಿಕಾರಿಗಳು ಈ ಕುರಿತು ಮಾಹಿತಿ ಪಡೆದು ಪ್ಲಂಬರ್ ಕರೆಸಿದ್ದಾರೆ.
ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ದೂರು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ಆಕ್ರಮ ಆಸ್ತಿಯ ಜೊತೆ ಸರ್ಕಾರದ ಸಿಸಿ ರಸ್ತೆ ಸೌಲಭ್ಯಗಳನ್ನು ತಮ್ಮ ಮನೆ, ತೋಟಗಳಿಗೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ. ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವ ನಿವಾಸಕ್ಕೆ 4 ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಯಡ್ರಾಮಿ ತಾಲೂಕಿನ ಹಂಗರಗಾದಲ್ಲಿ ತೋಟದ ಮನೆ ಇದ್ದು, ಅದರ ಮೇಲೆ ಸಹ ದಾಳಿ ಮಾಡಲಾಗಿದೆ.












Click it and Unblock the Notifications