ಕಲಬುರಗಿ; ಜಿಮ್ಸ್ ಆವರಣದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಸ್ಥಾಪನೆ
ಕಲಬುರಗಿ, ಸೆಪ್ಟೆಂಬರ್ 20; ಕಲಬುರಗಿ ಜನರಿಗೆ ಸಿಹಿಸುದ್ದಿ. ಜಯದೇವ ಆಸ್ಪತ್ರೆ ನೂತನ ಕಟ್ಟಡ, ಟ್ರಾಮಾ ಸೆಂಟರ್ ಜೊತೆಗೆ ಜಿಮ್ಸ್ ಆವರಣದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಸ್ಥಾಪನೆಯಾಗಲಿದೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಅಗತ್ಯ ವೈದ್ಯಕೀಯ ನೆರವು ಸಿಗಲಿದೆ.
ಈ ಕುರಿತು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾಹಿತಿ ನೀಡಿದರು. ಕಲಬುರಗಿ ನಗರದ ಕರ್ನಾಟಕ-ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ)ಗೆ ಭೇಟಿ ನೀಡಿದ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಸಚಿವರು ಮಾತನಾಡಿ, "ಕಲಬುರಗಿಯ ಜಿಮ್ಸ್ ಆವರಣದಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಸ್ಥಾಪಿಸಲಾಗುವುದು. ತುರ್ತಾಗಿ ಸ್ಪಂದಿಸಬೇಕಾದ ರೋಗಿಗಳಿಗೆ ಈ ಘಟಕದಿಂದ ಅಗತ್ಯ ವೈದ್ಯಕೀಯ ನೆರವು ಸಿಗಲಿದೆ. ಇದರಲ್ಲಿ ಸುಟ್ಟ ಗಾಯಗಳ ಘಟಕ ಸಹ ಸೇರಿದೆ. ಮುಂದಿನ 2 ವರ್ಷದಲ್ಲಿ ಈ ಘಟಕ ಜಿಮ್ಸ್ ಆವರಣದಲ್ಲಿಯೇ ಪ್ರತ್ಯೇಕವಾಗಿ ಸ್ಥಾಪನೆಯಾಗಲಿದೆ" ಎಂದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆ; ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, "2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ 70 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗುವುದು" ಎಂದು ಹೇಳಿದರು.
"ಜಯದೇವ ಆಸ್ಪತ್ರೆಯಂತೆ ಈ ಆಸ್ಪತ್ರೆ ಸಹ 371 ಹಾಸಿಗೆ ಬ್ರ್ಯಾಂಡ್‍ನೊಂದಿಗೆ ಗುರುತಿಸಿಕೊಳ್ಳಲಿದೆ. ಪ್ರಸ್ತುತ ಹಳೇ ಜಿಲ್ಲಾ ಆಸ್ಪತ್ರೆ ಕೆಡವಿ ಅಲ್ಲಿ ಈ ಹೊಸ ಕಟ್ಟಡ ನಿರ್ಮಿಸಲಾಗುವುದು. ಈಗಾಗಲೇ ನಕ್ಷೆ ತಯಾರಿದ್ದು, ಡಿಪಿಆರ್ ಸಿದ್ಧಗೊಳ್ಳುತ್ತಿದೆ. ಮುಂದಿನ 2 ವರ್ಷದಲ್ಲಿ ಇದನ್ನು ನಿರ್ಮಿಸಲಾಗುವುದು" ಎಂದು ಭರವಸೆ ನೀಡಿದರು.
"ರಸ್ತೆ ಅಪಘಾತದಂತಹ ಪ್ರಕರಣದಲ್ಲಿ ತುರ್ತಾಗಿ ಚಿಕಿತ್ಸೆ ನೀಡಲು ಕಲಬುರಗಿ ಜಿಮ್ಸ್ ಆವರಣದಲ್ಲಿ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಟ್ರಾಮಾ ಸೆಂಟರ್ ನಿರ್ಮಿಸಲಾಗಿತ್ತಾದರೂ, ಅಗತ್ಯ ವೈದ್ಯಕೀಯ ಉಪಕರಣಗಳು ಇಲ್ಲದ ಕಾರಣ ಸೇವೆ ಆರಂಭಿಸಿರಲಿಲ್ಲ. ಇದೀಗ ನಮ್ಮ ಸರ್ಕಾರ ಬಂದ ಕೂಡಲೇ ಸೆಂಟರ್ ಕಾರ್ಯಾಚರಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಮುಂದಿನ ಒಂದು ತಿಂಗಳಿನಲ್ಲಿ ಟ್ರಾಮಾ ಸೆಂಟರ್ ರೋಗಿಗಳ ಸೇವೆಗೆ ಲಭ್ಯವಾಗಲಿದೆ" ಎಂದು ಸಚಿಚವರು ಹೇಳಿದರು.
ಜಯದೇವ ಆಸ್ಪತ್ರೆ ಲೋಕಾರ್ಪಣೆ; ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, "ಕಲಬುರಗಿ ನಗರದಲ್ಲಿ ಕೆಕೆಆರ್‌ಡಿಬಿ ಮಂಡಳಿಯ 182.65 ಕೋಟಿ ರೂ. ಆರ್ಥಿಕ ನೆರವಿನೊಂದಿಗೆ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಮತ್ತು ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯನ್ನು 2024ರ ಜನವರಿಯಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ" ಎಂದರು.
"162.80 ಕೋಟಿ ರೂ. ಪರಿಷ್ಕೃತ ಅಂದಾಜಿನೊಂದಿಗೆ ಜಿಮ್ಸ್ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಂದಿನ 6 ತಿಂಗಳಿನಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು" ಎಂದು ಸಚಿವರು ತಿಳಿಸಿದರು.
ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರಗಿ ನಗರಕ್ಕೆ ಭೇಟಿ ನೀಡಿದ್ದರು. ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಧ್ವಜಾರೋಹಣ ಮಾಡಿದ್ದರು. ನಂತರ ಕಲಬುರಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ 242.21 ಕೋಟಿ ರೂ. ಸೇರಿದಂತೆ ಒಟ್ಟು 448.78 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.
ಹೃದ್ರೋಗ, ಎಚ್.ಐ.ವಿ., ಸ್ಯಾಚುರೇಷನ್, ಇ.ಸಿ.ಜಿ, ಡೆಂಗ್ಯೂ, ಮಲೇರಿಯಾ ಹೀಗೆ 50ಕ್ಕೂ ಹೆಚ್ಚು ರಕ್ತ ತಪಾಸಣೆಗಳ ವರದಿಯನ್ನು 10 ನಿಮಿಷದಲ್ಲಿಯೇ ಒದಗಿಸುವ 'ಹೆಲ್ತ್ ಎ.ಟಿ.ಎಂ.' ಗಳಿಗೆ ಸಿದ್ಧರಾಮಯ್ಯ ಚಾಲನೆ ಕೊಟ್ಟಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ದೂರದೃಷ್ಠಿ ಯೋಜನೆಯ ಫಲವಾಗಿ 5 ಕೋಟಿ ರೂ. ಸಿ. ಎಸ್. ಆರ್ ನಿಧಿಯಡಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಹೆಚ್ಚಿನ ಆರೋಗ್ಯ ಸೌಕರ್ಯ ಇಲ್ಲದ 10 ಪ್ರಾಥಮಿಕ ಅರೋಗ್ಯ ಕೇಂದ್ರ, 8 ವೆಲ್‍ನೆಸ್ ಸೆಂಟರ್, ಹೆಚ್ಚಿನ ಜನಬಿಡಿತ ಪ್ರದೇಶಗಳಾದ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಪಾಲಿಕೆ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ನಮ್ಮ ಕ್ಲಿನಿಕ್ ಹಾಗೂ ಇನ್ನಿತರ ಸ್ಥಳದಲ್ಲಿ ಒಟ್ಟಾರೆ 25 ಕಡೆ ಈ 'ಹೆಲ್ತ್ ಎ.ಟಿ.ಎಂ' ಸ್ಥಾಪಿಸಲಾಗುತ್ತಿದೆ. ಇದರಲ್ಲಿ ಲ್ಯಾಬ್ ಟೆಕ್ನಿಷಿಯನ್ ಇರಲಿದ್ದಾರೆ. ಇಲ್ಲಿ ಸಾರ್ವಜನಿಕರು ಟೆಲಿ ಮೆಡಿಸಿನ್ ಸೇವೆ ಪಡೆಯಲು ಸಹ ಅವಕಾಶವಿದೆ.












Click it and Unblock the Notifications