ಅಪರೂಪದ ಪ್ರಕರಣ; ನೌಕರರಿಗೆ ಹಿಂಬಡ್ತಿ ನೀಡಿದ ಕಲಬುರಗಿ ಡಿಸಿ!
ಕಲಬುರಗಿ, ಫೆಬ್ರವರಿ 20; ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಸರ್ಕಾರಿ ಅಧಿಕಾರಿ/ ನೌಕರರು ಮುಂಬಡ್ತಿ ಪಡೆಯುತ್ತಾರೆ. ಆದರೆ ಅಪರೂಪದ ಪ್ರಕರಣದಲ್ಲಿ 100ಕ್ಕೂ ಅಧಿಕ ಮಂದಿಗೆ ಹಿಂಬಡ್ತಿ ನೀಡಲಾಗಿದೆ.
ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ 18/5/2023ರಂದು ಹೊರಡಿಸಿದ್ದ ಮುಂಬಡ್ತಿ ಆದೇಶವನ್ನು ಅಧಿಸೂಚನೆ ಮೂಲಕ ವಾಪಸ್ ಪಡೆದು, ಮುಂಬಡ್ತಿ ಪಡೆದಿದ್ದ ನೌಕರರು ತಮ್ಮ ಮೂಲ ಹುದ್ದೆಗೆ ಮರಳುವಂತೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಬಿ. ಫೌಜಿಯಾ ತರನ್ನುಮ್, "ಸರ್ಕಾರದ ಆದೇಶವನ್ನು ನಾನು ಪಾಲನೆ ಮಾಡಿದ್ದೇನೆ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಡಿ-ಗ್ರೂಪ್ ನೌಕರರ ಜೇಷ್ಠತಾ ಪಟ್ಟಿಯನ್ನು 16/2/2024ರಂದು ಪ್ರಕಟಿಸಲಾಗಿದೆ. ಆಕ್ಷೇಪಣೆಗಳು ಇದ್ದಲ್ಲಿ ನೌಕರರು 15 ದಿನದೊಳಗೆ ಸಲ್ಲಿಕೆ ಮಾಡಬಹುದು" ಎಂದು ಹೇಳಿದ್ದಾರೆ.
ಏನಿದು ಪ್ರಕರಣ?; ಕಲಬುರಗಿ ಜಿಲ್ಲೆಯಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ 68 ದ್ವಿತೀಯ ದರ್ಜೆ ಸಹಾಯಕ/ ಗ್ರಾಮ ಆಡಳಿತಾಧಿಕಾರಿ, 33 ಪೇದೆಗಳು ಸೇರಿದಂತೆ 100ಕ್ಕೂ ಅಧಿಕ ನೌಕರರಿಗೆ 18/5/2023ರಂದು ಬಡ್ತಿ ನೀಡಿ ಆದೇಶ ಹೊರಡಿಸಲಾಗಿತ್ತು.
17/7/2021ರಿಂದ ಪೂರ್ವಾನ್ವಯವಾಗುವಂತೆ ಎಫ್‌ಡಿಎ ಹುದ್ದೆಗೆ ಬಡ್ತಿ ನೀಡಿ, ವೇತನ ಹೆಚ್ಚಳದ ಜೊತೆಗೆ ಆದೇಶಿಸಲಾಗಿತ್ತು. ಆದರೆ ದ್ವಿತೀಯ ವಿಭಾಗದ ಸಹಾಯಕರು, ಗ್ರಾಮಾಭಿವೃದ್ಧಿ ಅಧಿಕಾರಿಗಳಿಗೆ ಬಡ್ತಿ ನೀಡಿ ಹುದ್ದೆಗೆ ನಿಯೋಜನೆ ಮಾಡುವಾಗ ಎಷ್ಟು ಎಫ್‌ಡಿಎ ಹುದ್ದೆಗಳು ಖಾಲಿ ಇವೆ ಎಂಬ ಅಂಶವನ್ನು ಪರಿಗಣನೆ ಮಾಡಿರಲಿಲ್ಲ.
ಕರ್ನಾಟಕ ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರು ಕಂದಾಯ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದು ಬಡ್ತಿ ಬಗ್ಗೆ ಗಮನ ಸೆಳೆದಿದ್ದರು. ಬಡ್ತಿ ನೀಡುವಾಗ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಆರೋಪಿಸಿದ್ದರು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಅಗತ್ಯ ಕ್ರಮ ಕೈಗೊಂಡು ಅನುಪಾಲನಾ ವರದಿಯನ್ನು ಸಲ್ಲಿಕೆ ಮಾಡಿ ಎಂದು ಪ್ರಾದೇಶಿಕ ಆಯಯಕ್ತರು, ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಈ ಕುರಿತು ಡಿಸಿ ಬಿ. ಫೌಜಿಯಾ ತರನ್ನುಮ್ ವಿಚಾರಣೆ ನಡೆಸಿದ್ದರು.
ಬಡ್ತಿ ನೀಡುವ ಆದೇಶ ಹೊರಡಿಸುವಾಗ ಜಿಲ್ಲೆಯಲ್ಲಿ ಖಾಲಿ ಇರುವ ಎಫ್‌ಡಿಎ ಹುದ್ದೆಗಳು ಎಷ್ಟು?, ಬಡ್ತಿ ನೀಡಿದ ನೌಕರರು ಇಲಾಖಾ ವಿಚಾರಣೆ ಎದುರಿಸಿದ್ದಾರೆಯೇ? ಎಂಬ ವಿವರ ಪಡೆಯಬೇಕಿತ್ತು. ಆದರೆ ಅಂತಿಮ ವರದಿ ಪಡೆಯದೇ ಬಡ್ತಿ, ವೇತನ ಹೆಚ್ಚಳ ನೀಡಿ ಆದೇಶ ಹೊರಡಿಸಲಾಗಿತ್ತು ಎಂಬುದು ಆರೋಪವಾಗಿತ್ತು.
ಈ ಕುರಿತು ವಿಚಾರಣೆಯನ್ನು ನಡೆಸಿದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ 18/5/2023ರಂದು ಹೊರಡಿಸಿದ್ದ ವೇತನ ಹೆಚ್ಚಳ, ಬಡ್ತಿ ಆದೇಶವನ್ನು ಅಧಿಸೂಚನೆ ಮೂಲಕ ವಾಪಸ್ ಪಡೆದು, ನೌಕರರು ತಮ್ಮ ಮೂಲ ಹುದ್ದೆಗೆ ಮರಳಲು ಸೂಚನೆ ಕೊಟ್ಟಿದ್ದಾರೆ.












Click it and Unblock the Notifications