ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು; ರಾಹುಲ್ ಭೇಟಿಗೆ ನಿರಾಕರಿಸಿದ ಸಚಿನ್!
ಜೈಪುರ, ಜುಲೈ 13 : ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ಇನ್ನೂ ಮುಂದುವರೆದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಅಸಮಾಧಾನಗೊಂಡಿರುವ ಸಚಿನ್ ಪೈಲೆಟ್ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ.
Recommended Video
"ನಮ್ಮ ಜೊತೆ ಮಾತನಾಡಿ" ಎಂದು ಸಂದೇಶವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಚಿನ್ ಪೈಲೆಟ್ ಮತ್ತು ಅವರ ಬೆಂಬಲಕ್ಕೆ ನಿಂತಿರುವ ಶಾಸಕರಿಗೆ ರವಾನೆ ಮಾಡಿದ್ದರು. ಅಶೋಕ್ ಗೆಹ್ಲೋಟ್ ಸೋಮವಾರ ಬೆಳಗ್ಗೆ ಶಾಸಕರ ಸಭೆಯನ್ನು ನಡೆಸಿದ್ದರು.
'ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಚಟುವಟಿಕೆ ನಡೆಸುವವರ ವಿರುದ್ಧ ಮತ್ತು ಸರ್ಕಾರವನ್ನು ಪತನಗೊಳಿಸುವ ಷಡ್ಯಂತ್ರ ರೂಪಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಅಶೋಕ್ ಗೆಹ್ಲೋಟ್ ಸಚಿನ್ ಪೈಲೆಟ್‌ಗೆ ನೋಟಿಸ್ ರವಾನೆ ಮಾಡಿದ್ದಾರೆ.
ಶಾಸಕಾಂಗ ಪಕ್ಷದ ಸಭೆ, ಅಶೋಕ್ ಗೆಹ್ಲೋಟ್ ಕಳುಹಿಸಿರುವ ನೋಟಿಸ್ ಬಳಿಕ ಸಚಿನ್ ಪೈಲೆಟ್ ಅಸಮಾಧಾನ ಇನ್ನೂ ಹೆಚ್ಚಾಗಿದೆ. ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಅವರು ನಿರಾಕರಿಸಿದ್ದಾರೆ.

ರಣದೀಪ್ ಸಿಂಗ್ ಸುರ್ಜೆವಾಲಾ
ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ರಣದೀಪ್ ಸಿಂಗ್ ಸುರ್ಜೆವಾಲಾರನ್ನು ಪರಿಸ್ಥಿತಿ ತಿಳಿಗೊಳಿಸಲು ಜೈಪುರಕ್ಕೆ ಕಳುಹಿಸಿದೆ. "ನಮ್ಮ ಜೊತೆ ಮಾತನಾಡಿ, ಎಲ್ಲಾ ಬಾಗಿಲುಗಳು ತೆರೆದಿವೆ" ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಕಳುಹಿಸಿದೆ.

96 ಶಾಸಕರು ಪಾಲ್ಗೊಂಡಿದ್ದರು
ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಶಾಸಕರ ಸಭೆ ನಡೆಸಿದ್ದರು. ಸಿಎಲ್‌ಪಿ ಸಭೆಯಲ್ಲಿ 96 ಶಾಸಕರು ಪಾಲ್ಗೊಂಡಿದ್ದರು. ಈ ಮೂಲಕ ಸಚಿನ್ ಪೈಲೆಟ್‌ಗೆ ಹೆಚ್ಚು ಶಾಸಕರ ಬೆಂಬಲವಿಲ್ಲ ಎಂಬುದು ಸಾಬೀತಾಗಿದೆ.

30 ಶಾಸಕರ ಬೆಂಬಲವಿದೆ
ತಮಗೆ 30 ಶಾಸಕರ ಬೆಂಬಲವಿದೆ ಎಂದು ಬಂಡಾಯ ಎದ್ದಿರುವ ನಾಯಕ ಸಚಿನ್ ಪೈಲೆಟ್ ಹೇಳಿದ್ದಾರೆ. ಆದರೆ, 16ಕ್ಕಿಂತ ಹೆಚ್ಚು ಶಾಸಕರ ಅವರ ಜೊತೆ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಸಚಿನ್ ಪೈಲೆಟ್ ರಾಹುಲ್ ಗಾಂಧಿ ಭೇಟಿಯಾಗಲು ನಿರಾಕರಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಸೇರುವುದಿಲ್ಲ ಎಂದು ಹೇಳಿಕೆ
ಸಚಿನ್ ಪೈಲೆಟ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಶನಿವಾರದಿಂದ ಹಬ್ಬಿದ್ದವು. ಆದರೆ, ಈ ಕುರಿತು ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಅವರ ಬೇಡಿಕೆ ಏನು? ಎಂಬುದು ಇನ್ನೂ ತಿಳಿದುಬಂದಿಲ್ಲ.












Click it and Unblock the Notifications