ರಾಜಸ್ಥಾನದಲ್ಲಿ ದಲಿತ ದಂಪತಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ ಎಂದ ಅರ್ಚಕ ಅರೆಸ್ಟ್!
ಜೈಪುರ್, ಏಪ್ರಿಲ್ 25: ರಾಜಸ್ಥಾನದ ದೇವಸ್ಥಾನವೊಂದರಲ್ಲಿ ನವವಿವಾಹಿತ ದಲಿತ ದಂಪತಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನಿರಾಕರಿಸಿದ ಘಟನೆ ನಡೆದಿದೆ. ಭಾರತದಲ್ಲಿ ಮೇಲು-ಕೀಳು, ಕೆಳಜಾತಿ-ಮೇಲ್ಜಾತಿ ಎನ್ನುವ ಅನಿಷ್ಠ ಪದ್ಧತಿ ಇಂದಿಗೂ ಜೀವಂತವಾಗಿದೆಯೇ ಎನ್ನುವ ಅನುಮಾನಗಳಿಗೆ ಪದೇ ಪದೆ ಇಂಥ ಘಟನೆಗಳು ಸಾಕ್ಷಿ ಆಗುತ್ತಿವೆ.
ಜಲೋರ್‌ನ ದೇವಸ್ಥಾನದಲ್ಲಿ ನವವಿವಾಹಿತ ದಲಿತ ದಂಪತಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡದ ಆರೋಪದ ಮೇಲೆ ರಾಜಸ್ಥಾನ ಪೊಲೀಸರು ಅರ್ಚಕರೊಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಅಹೋರ್ ಉಪವಿಭಾಗದ ಅಡಿಯಲ್ಲಿ ನೀಲಕಂಠ ಗ್ರಾಮದ ದೇವಸ್ಥಾನದ ಗೇಟ್‌ನ ಬಳಿಯೇ ವೇಲಾ ಮತ್ತು ಭಾರತಿ ಎಂಬ ದಂಪತಿಗಳನ್ನು ತಡೆದು ನಿಲ್ಲಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗಿರುವುದರ ಹಿನ್ನೆಲೆ ಪೊಲೀಸರು ಅರ್ಚಕನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಅರ್ಚಕನ ವಿರುದ್ಧ ಪೊಲೀಸರಿಗೆ ದೂರು:
ನವದಂಪತಿಯು ದೇವಸ್ಥಾನ ಪ್ರವೇಶಿಸುವುದಕ್ಕೆ ಹಾಗೂ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ನೀಡದ ಹಿನ್ನೆಲೆ ಅರ್ಚಕರು ಮತ್ತು ದಂಪತಿ ನಡುವೆ ವಾಗ್ವಾದ ನಡೆದಿತ್ತು. ಇದರ ಬೆನ್ನಲ್ಲೇ ನೊಂದ ಕುಟುಂಬವು ಅರ್ಚಕನ ವಿರುದ್ಧ ಪೊಲೀಸರಿಗೆ ದೂರು ನೀಡಿತ್ತು. ಪೂಜಾರಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ನಾವು ಅರ್ಚಕನ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ ಎಂದು ಜಲೋರ್ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರ್‌ವಾಲಾ ತಿಳಿಸಿದ್ದಾರೆ.
ಅರ್ಚಕನ ವಿರುದ್ಧ ನೀಡಿದ ದೂರಿನಲ್ಲಿ ಏನಿದೆ?:
ದಲಿತ ದಂಪತಿ ನೀಡಿರುವ ದೂರಿನ ಪ್ರಕಾರ, ಕುಕಾ ರಾಮ್ ಅವರ ಬಾರಾತ್ ಶನಿವಾರ ನೀಲಕಂಠ ಗ್ರಾಮಕ್ಕೆ ತಲುಪಿತ್ತು. ಈ ವೇಳೆ ನವದಂಪತಿ ತಮ್ಮ ಮದುವೆಯ ನಂತರ ದೇವಸ್ಥಾನದಲ್ಲಿ ತೆಂಗಿನಕಾಯಿ ಅರ್ಪಿಸಲು ಬಯಸಿದ್ದರು. "ನಾವು ಅಲ್ಲಿಗೆ ತಲುಪಿದಾಗ ಅರ್ಚಕರು ನಮ್ಮನ್ನು ಗೇಟ್‌ನಲ್ಲಿ ನಿಲ್ಲಿಸಿ ತೆಂಗಿನಕಾಯಿಯನ್ನು ಹೊರಗೆ ನೀಡುವಂತೆ ಹೇಳಿದರು. ನಾವು ದಲಿತ ಸಮುದಾಯದವರಾದ ಹಿನ್ನೆಲೆ ದೇವಸ್ಥಾನ ಪ್ರವೇಶಿಸಬೇಡಿ" ಎಂದು ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.
"ನಾವು ಅರ್ಚಕರ ಬಳಿ ಸಾಕಷ್ಟು ಮನವಿ ಮಾಡಿಕೊಂಡೆವು. ಆದರೆ ಅವರು ನಮ್ಮ ಮನವಿಗೆ ಯಾವುದೇ ರೀತಿ ಸ್ಪಂದಿಸಲಿಲ್ಲ. ತದನಂತರ ನಾವು ಅರ್ಚಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ" ಎಂದು ತಾರಾ ರಾಮ್ ಹೇಳಿದ್ದಾರೆ.












Click it and Unblock the Notifications