ವಾಯುಪಡೆ ಯೋಧ ಅಭಿನಂದನ್ ಕತೆ ಮಕ್ಕಳಿಗೆ ಪಾಠ
ಜೈಪುರ, ಮಾರ್ಚ್ 05: ಪಾಕಿಸ್ತಾನಕ್ಕೆ ಸೆರೆ ಸಿಕ್ಕಿ ಸುರಕ್ಷಿತವಾಗಿ ವಾಪಸ್ಸಾದ ಭಾರತೀಯ ವಾಯುಪಡೆಯ ಧೀರ ಯೋಧ ಅಭಿನಂದನ್ ವರ್ಧಮಾನ್ ಅವರ ಕತೆ ಈಗ ರಾಜಸ್ಥಾನದ ಮಕ್ಕಳಿಗೆ ಪಾಠವಾಗಲಿದೆ.
ವಿಂಗ್ ಕಮಾಂಡರ್ ಅಭಿನಂದನ್ ಅವರ ಕತೆಯನ್ನು ರಾಜಸ್ಥಾನದ ವಿದ್ಯಾರ್ಥಿಗಳು ಪಾಠವನ್ನಾಗಿ ಕಲಿಯಲಿದ್ದಾರೆ. ರಾಜಸ್ಥಾನದ ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಅಭಿನಂದನ್ ಅವರ ಕತೆಯನ್ನು ಪಠ್ಯಕ್ಕೆ ಅಳವಡಿಸಲಿದೆ.
ರಾಜಸ್ಥಾನದ ಶಿಕ್ಷಣ ಸಚಿವ ಗೋವಿಂದ ಸಿಂಗ್ ದೋತಾಸ್ತ್ರ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ವಾಯುಪಡೆಯ ಧೀರ ಯೋಧ ಅಭಿನಂದನ್ ಅವರ ಕತೆಯನ್ನು ಪಠ್ಯಕ್ಕೆ ಅಳವಡಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ, ಭಾರತೀಯ ಸೇನೆಯ ಗೌರವಾರ್ಥ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದಿದ್ದಾರೆ.

ಯಾವ ತರಗತಿಗೆ ಅಭಿನಂದನ್ ಅವರ ಕತೆ ಪಠ್ಯವಾಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ತಮಿಳುನಾಡು ಸಹ ಅಭಿನಂದನ್ ಅವರ ಕತೆಯನ್ನು ಪಠ್ಯಕ್ಕೆ ನೀಡುವ ಕುರಿತು ಆಲೋಚನೆ ಮಾಡಿದೆ ಎನ್ನಲಾಗಿದೆ.
ಭಾರತದ ಮೇಲೆ ದಾಳಿಗೆ ಯತ್ನಿಸಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುತ್ತಾ ವಿಂಗ್ ಕಮಾಂಡರ್ ಅಭಿನಂದನ್ ಅವರ ವಿಮಾನ ತಾಂತ್ರಿಕ ಕಾರಣದಿಂದ ಉರುಳಿತು. ಆಗ ಅಭಿನಂದನ್ ಅವರು ವಿಮಾನದಿಂದ ಹೊರಬಿದ್ದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಲ್ಯಾಂಡ್ ಆಗಿ ಪಾಕ್ ಸೇನೆಯ ಕೈಗೆ ಸಿಕ್ಕಿಬಿದ್ದಿದ್ದರು.
ಮೂರು ದಿನದ ನಂತರ ಅವರನ್ನು ಪಾಕಿಸ್ತಾನ ಸರ್ಕಾರವು ಭಾರತಕ್ಕೆ ಮರಳಿ ಹಸ್ತಾಂತರಿಸಿತು. ಆದರೆ ಅಲ್ಲಿ ಇರುವಷ್ಟು ವೇಳೆಯೂ ಅಭಿನಂದನ್ ಅವರು ಭಾರತೀಯ ಸೇನೆ ಕುರಿತು ಮಾಹಿತಿಯನ್ನು ನೀಡದೆ, ಪ್ರದರ್ಶಿಸಿದ ಧೈರ್ಯ ಭಾರತದಲ್ಲಿ ಭಾರಿ ಪ್ರಶಂಸೆಗೆ ಕಾರಣವಾಗಿತ್ತು.












Click it and Unblock the Notifications