'2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ' ಜೈಪುರದಲ್ಲಿ ಅಮಿತ್ ಶಾ
ಜೈಪುರ ಡಿಸೆಂಬರ್ 6: ಕಳೆದ ವರ್ಷದಿಂದ ಬಿಜೆಪಿ ತನ್ನ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷವು ಎಂದಿಗೂ ಸರ್ಕಾರವನ್ನು ಉರುಳಿಸುವುದಿಲ್ಲ ಮತ್ತು 2023 ರಲ್ಲಿ ಜನಾದೇಶದ ಮೂಲಕ ರಾಜ್ಯದಲ್ಲಿ ಪ್ರಬಲವಾಗಿ ಅಧಿಕಾರಕ್ಕೆ ಬರಲಿದೆ. ರಾಜಸ್ಥಾನದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜೈಪುರದಲ್ಲಿ ಬಿಜೆಪಿ ಸಂಸದರು ಮತ್ತು ಶಾಸಕರ ಸಭೆಯಲ್ಲಿ ಮಾತನಾಡಿದ ಅವರು,"ಅವರು ಯಾವಾಗಲೂ ತಮ್ಮ ಸರ್ಕಾರ ಪತನಗೊಳ್ಳುವ ಭಯದಲ್ಲಿರುತ್ತಾರೆ. ಸರ್ಕಾರ ಬೀಳಿಸಲು ಹೊರಟವರು ಯಾರು? ನಿಮ್ಮ ಸರ್ಕಾರವನ್ನು ಬಿಜೆಪಿ ಎಂದಿಗೂ ಬೀಳಿಸುವುದಿಲ್ಲ. ಪಕ್ಷವು ಜನರ ನಡುವೆ ಹೋಗಲಿದೆ ಮತ್ತು 2023 ರಲ್ಲಿ ಪ್ರಬಲ ಜನಾದೇಶದೊಂದಿಗೆ ಅಧಿಕಾರಕ್ಕೆ ಬರಲಿದೆ," ಎಂದು ಅಮಿತ್ ಶಾ ಭಾನುವಾರ ಹೇಳಿದರು.
15 ಸಚಿವರು ಪ್ರಮಾಣ ವಚನ ಸ್ವೀಕಾರ: 2023ರ ಚುನಾವಣೆಗೆ ಕಾಂಗ್ರೆಸ್ ಸಜ್ಜು
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು 'ಗರೀಬಿ ಹಠಾವೋ' ಘೋಷಣೆ ನೀಡಿದ್ದರು, ಆದರೆ ಬಡವರನ್ನು ತೊಲಗಿಸಲು ಕಾಂಗ್ರೆಸ್ ಕೆಲಸ ಮಾಡಲಿಲ್ಲ" ಎಂದು ಆರೋಪಿಸಿದರು. "2014ರಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದ ನಂತರ ಬಡತನ ತೊಲಗಿಸುವ ಕೆಲಸ ಆರಂಭವಾಯಿತು" ಎಂದು ಕಾಂಗ್ರೆಸ್ ಅನ್ನು ಗುರಿಯಾಗಿಸಿ ಹರಿಹಾಯ್ದರು.
ಕಳೆದ ತಿಂಗಳು ಜೈಪುರದ ರಾಜಭವನದಲ್ಲಿ ಒಟ್ಟು 15 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು 12 ಹೊಸ ಮತ್ತು ಮೂವರು ರಾಜ್ಯ ಸಚಿವರು ಕ್ಯಾಬಿನೆಟ್ ದರ್ಜೆಗೆ ಏರಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಂದಿನ ಚುನಾವಣೆಗೆ ಭಾರೀ ಸಿದ್ದತೆಗಳು ನಡೆಯುತ್ತಿವೆ. ಟ್ವಿಟರ್‌ನಲ್ಲಿ, ಗೆಹ್ಲೋಟ್ ಮುಂಬರುವ ವಿಧಾನಸಭೆ ಚುನಾವಣೆಗಳ ಮೇಲೆ ಕಣ್ಣಿಟ್ಟಿದ್ದು, 2023 ರಲ್ಲಿ ಕಾಂಗ್ರೆಸ್ ಮತ್ತೆ ಸರ್ಕಾರವನ್ನು ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2023ರಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಸಜ್ಜಾಗುತ್ತಿದೆ ಎಂದು ಸಚಿನ್ ಪೈಲಟ್ ಘೋಷಿಸಿದ್ದಾರೆ. ಹೀಗಾಗಿ ಆದಿವಾಸಿಗಳು, ದಲಿತರು ಮತ್ತು ಮಹಿಳೆಯರು ಸೇರಿದಂತೆ ರಾಜ್ಯದ ಎಲ್ಲಾ ವರ್ಗಗಳಿಗೆ ಸಮಾನ ಪ್ರಾತಿನಿಧ್ಯವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ವಿವರಿಸಿದರು. ನೂತನ ಸಚಿವ ಸಂಪುಟದಲ್ಲಿ ನಾಲ್ವರು ದಲಿತ ಸಚಿವರನ್ನು ಸೇರಿಸಿಕೊಳ್ಳಲಾಗಿದೆ.
"ಬದಲಾವಣೆ ನಿರಂತರವಾಗಿದೆ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಚುನಾವಣೆಗೆ ಕೇವಲ 22 ತಿಂಗಳುಗಳು ಬಾಕಿಯಿದೆ. ನಾವು ಜನರನ್ನು ಹುರಿದುಂಬಿಸಬೇಕಾಗಿದೆ. ಹೊಸ ಜನರನ್ನು ಕರೆತರಬೇಕು. ಬಿಜೆಪಿಯ ನೀತಿಗಳನ್ನು ಜನರು ತಿರಸ್ಕರಿಸಿದ್ದಾರೆ. ಪ್ರಧಾನಿಯವರು ಕೃಷಿ ಕಾನೂನುಗಳನ್ನು ಹಿಂಪಡೆಯುವುದನ್ನು ನಾವು ನೋಡಿದ್ದೇವೆ. ಇದು ದೊಡ್ಡ ರಾಜಕೀಯ ಒತ್ತಡವನ್ನು ಸೂಚಿಸುತ್ತದೆ" ಎಂದು ಅವರು ಹೇಳಿದ್ದರು. ಹೀಗಾಗಿ ಎರಡು ಪ್ರಬಲ ಪಕ್ಷಗಳ ನಡುವೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ದಟ್ಟವಾಗಿದೆ. ಆದರೆ ಜನ ಯಾವ ಪಕ್ಷದ ಕೈ ಹಿಡಿಯುತ್ತಾರೆನ್ನುವುದನ್ನು ಕಾದು ನೋಡಬೇಕಿದೆ.
ಜೊತೆಗೆ ಅಶೋಕ್ ಗೆಹ್ಲೋಟ್ ಸರ್ಕಾರ ಈ ತಿಂಗಳು ಮೂರು ವರ್ಷ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಸಚಿವ ಸಂಪುಟ ಪುನಾರಚನೆಯಲ್ಲಿ ಸಚಿನ್ ಪೈಲಟ್ ಪಾಳೆಯದ ಶಾಸಕರು ಹಾಗೂ ಕಳೆದ ವರ್ಷ ರಾಜಕೀಯ ಬಿಕ್ಕಟ್ಟಿನಲ್ಲಿ ಸರ್ಕಾರವನ್ನು ಬೆಂಬಲಿಸಿದ ಶಾಸಕರ ನಿರೀಕ್ಷೆಯನ್ನು ಈಡೇರಿಸುವ ಸವಾಲು ಪಕ್ಷದ ಹೈಕಮಾಂಡ್ ಮೇಲಿದೆ. ಈ ಶಾಸಕರಲ್ಲಿ ಬಿಎಸ್‌ಪಿಯಿಂದ ಕಾಂಗ್ರೆಸ್‌ಗೆ ಆರು ಶಾಸಕರು ಮತ್ತು ಒಂದು ಡಜನ್ ಸ್ವತಂತ್ರ ಶಾಸಕರಿದ್ದಾರೆ. ಅಂಕಿಅಂಶಗಳ ಪ್ರಕಾರ, ಪ್ರಸ್ತುತ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 108 ಮತ್ತು ಬಿಜೆಪಿಯ 71 ಶಾಸಕರಿದ್ದಾರೆ. ಇದಲ್ಲದೇ 13 ಮಂದಿ ಸ್ವತಂತ್ರ ಶಾಸಕರಿದ್ದಾರೆ.