ರಾಮ ಮನುವಾದಿ ಎಂದ ಬಿಜೆಪಿ ಸಂಸದೆಯಿಂದ ಕೇಸರಿ ಪಡೆಗಳ ಮೇಲೆ ಟೀಕಾಸ್ತ್ರ
ಬಿಜೆಪಿ ಪಾಳಯದಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ ಬಂದಿದೆ. ಅದೂ ವಿಧಾನಸಭೆ ಚುನಾವಣೆ ಘೋಷಣೆ ಆಗಿರುವ ರಾಜಸ್ತಾನದಿಂದ. ಇದಕ್ಕೂ ಮುನ್ನ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹನುಮಂತ ದಲಿತ ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು. ಇದೀಗ ವಿವಾದಾತ್ಮಕ ಹೇಳಿಕೆಗಳಿಗೇ ಹೆಸರಾದ ಸಂಸದೆ ಸಾವಿತ್ರಿ ಬಾಯಿ ಫುಲೆ ಹೊಸದಾಗಿ ಕಿಡಿ ಹೊತ್ತಿಸಿದ್ದಾರೆ.
ರಾಮ ಒಬ್ಬ ಮನುವಾದಿ ಎಂದಿರುವ ಅವರು, ಒಂದು ವೇಳೆ ಹನುಮಾನ್ ದಲಿತ ಅಲ್ಲದಿದ್ದರೆ ಅವನನ್ನು ಮನುಷ್ಯನಂತೆ ಏಕೆ ಚಿತ್ರಿಸಲಿಲ್ಲ ಮತ್ತು ಅವನೇಕೆ ಮಂಗನಂತೆ ಬಿಂಬಿಸಲಾಯಿತು? ಅವನಿಗೆ ಏಕೆ ಬಾಲ ನೀಡಲಾಯಿತು ಎಂದು ಸಂಸದೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.
ಇನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಗ್ಗೆ ಕೂಡ ಬೆಂಕಿ ಉಗುಳಿರುವ ಸಾವಿತ್ರಿಬಾಯಿ ಫುಲೆ, ದಲಿತರ ಬಗೆಗಿನ ಯೋಗಿ ಅವರ ಪ್ರೀತಿ ತೋರಿಕೆಯದು ಮತ್ತು ಅವರಿಗೆ ದಲಿತರ ಬಗ್ಗೆ ಪ್ರೀತಿ ಇದ್ದರೆ, ದಲಿತರನ್ನು ಆಲಂಗಿಸಿಕೊಳ್ಳಲಿ ಹಾಗೂ ಗೌರವ ನೀಡಲಿ ಎಂದು ಹೇಳಿದ್ದಾರೆ.

ಸ್ಮಾರಕ, ದೇಗುಲಗಳಿಗೆ ಏಕೆ ನೂರಾರು ಕೋಟಿ?
ದೇಶದಲ್ಲಿರುವ ಎಲ್ಲ ದೇವಾಲಯಗಳಲ್ಲೂ ದಲಿತರನ್ನೇ ಅರ್ಚಕರನ್ನಾಗಿ ನೇಮಿಸಬೇಕು. ಏಕೆಂದರೆ ಶೇಕಡಾ ಮೂರರಷ್ಟಿರುವ ಪಂಡಿತರೇ ಅವೆಲ್ಲವನ್ನೂ ತೆಕ್ಕೆಗೆ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಸ್ಮಾರಕ, ದೇಗುಲದ ಹೆಸರಿನಲ್ಲಿ ನೂರಾರು ಕೋಟಿ ರುಪಾಯಿ ಖರ್ಚು ಮಾಡುವ ಬದಲು ಬಡವರಿಗೆ ಹಂಚಿದರೆ ಬಡತನದ ಪ್ರಮಾಣ ಕಡಿಮೆ ಆಗುತ್ತದೆ ಎಂದಿದ್ದಾರೆ.

ನಾಲ್ಕು ವರ್ಷದಿಂದ ರಾಮ ಮಂದಿರದ ನೆನಪಿರಲಿಲ್ಲ
ಈ ಜನಕ್ಕೆ ನಾಲ್ಕು ವರ್ಷದಿಂದ ರಾಮ ಮಂದಿರದ ನೆನಪಿರಲಿಲ್ಲ. ಆದರೆ ಈಗ ಚುನಾವಣೆ ಬರುತ್ತಿದೆ. ಈಗ ಶ್ರೀರಾಮನನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಸಾವಿತ್ರಿಬಾಯಿ ಫುಲೆ ಆರೋಪ ಮಾಡಿದ್ದಾರೆ. ರಾಜಸ್ತಾನದ ಜೋಧ್ ಪುರದಲ್ಲಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಪಿಯೂಶ್ ಗೋಯಲ್, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗೇ ಆಗುತ್ತದೆ. ಒಂದೋ ಕಾನೂನಿನ ಮೂಲಕ ಅಥವಾ ಒಮ್ಮತದ ಮೂಲಕ ಎಂದಿದ್ದಾರೆ.

ಇಮೇಜ್ ಬದಲಾವಣೆಯ ಪ್ರಯತ್ನ ನಡೆಯುತ್ತಿದೆಯಾ?
ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಒಂದು ವರ್ಗದ ನಾಯಕರು ದಲಿತರ ಪರವಾದ ಹೇಳಿಕೆಗಳನ್ನು ನೀಡುತ್ತಾ, ಕೇಸರಿ ಪಕ್ಷವು ಮೇಲ್ವರ್ಗಕ್ಕೆ ಮಾತ್ರ ಸೀಮಿತ ಎಂಬ ಆರೋಪದಿಂದ ಹೊರಬರಲು ಯತ್ನಿಸುತ್ತಿದೆ. ಅಷ್ಟೇ ಅಲ್ಲ, ಚುನಾವಣೆ ವೇಳೆ ದಲಿತಪರ ಕಾರ್ಡ್ ಪ್ಲೇ ಮಾಡುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆ ಯೋಗಿ ಆದಿತ್ಯನಾಥ್ ಅವರದು.

ಹನುಮನನ್ನು ದಲಿತ ಎಂದಿದ್ದರು ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್ ರಾಜಸ್ತಾನದಲ್ಲಿ ಬಿಜೆಪಿ ಪರ ವಿಧಾನಸಭಾ ಚುನಾವಣೆಗೆ ಪ್ರಚಾರ ನಡೆಸಿದ ವೇಳೆ ಹನುಮಂತನನ್ನು ದಲಿತ ಎಂದಿದ್ದರು. ಈ ಮಾತಿಗೆ ಸಾಧು-ಸಂತರಿಂದ ಹಾಗೂ ವಿಪಕ್ಷಗಳಿಂದಲೂ ಆಕ್ಷೇಪ ಬಂದಿತ್ತು. ಜಾತಿ ಆಧಾರಿತ ರಾಜಕಾರಣ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ವಿಪಕ್ಷಗಳ ಆರೋಪವಾಗಿತ್ತು. ಹನುಮಂತನನ್ನು ದಲಿತ ಎನ್ನಬಾರದಿತ್ತು. ಅದಕ್ಕಾಗಿ ಯೋಗಿ ಆದಿತ್ಯನಾಥ್ ಕ್ಷಮೆ ಕೇಳಬೇಕು ಎಂದು ಸಂತರು ಒತ್ತಾಯಿಸಿದ್ದರು. ಇದೀಗ ಸಾವಿತ್ರಿಬಾಯಿ ಫುಲೆ ಅವರು ರಾಮನನ್ನು ಮನುವಾದಿ ಎಂದು ಕರೆದಿದ್ದಾರೆ.












Click it and Unblock the Notifications