Secret Of Corona: ರಾಜಕಾರಣಿಗಳಲ್ಲೇ ಕೊರೊನಾ ವೈರಸ್ ಹೆಚ್ಚಾಗಿ ಹರಡುವುದೇಕೆ?
ನವದೆಹಲಿ, ಮಾರ್ಚ್.13: ವಿಶ್ವವನ್ನೇ ನಡುಗಿಸಿರುವ ಕೊರೊನಾ ವೈರಸ್ ಸೋಂಕು ಇದುವರೆಗೂ 1,36,390ಕ್ಕೂ ಹೆಚ್ಚು ಜನರಿಗೆ ತಗಲಿದೆ. ಈ ಪೈಕಿ ಸಾಮಾನ್ಯ ಜನರಿಗಿಂತಲೂ ರಾಜಕಾರಣಿಗಳಿಗೆ ಹೆಚ್ಚಾಗಿ ಸೋಂಕು ತಗಲಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ವಿಶ್ವದಾದ್ಯಂತ ಸೋಂಕಿತರ ಸಂಖ್ಯೆಯನ್ನು ಅವಲೋಕಿಸಿದಾಗ ರಾಜಕೀಯ ವ್ಯಕ್ತಿಗಳಿಗೆ ಮಾರಕ ಸೋಂಕು ಹೆಚ್ಚಾಗಿ ತಗಲಿರುವ ಬಗ್ಗೆ ಲಂಡನ್ ವಿಶ್ವವಿದ್ಯಾಲಯದ ಕಂಪ್ಯೂಟೆಶನಲ್ ಸಿಸ್ಟಮ್ ಆಫ್ ಬಯಾಲಜಿ ಪ್ರೊಫೆಸರ್ ಫ್ರಾನ್ಸೊಯಿಸ್ ಬಾಲೋಕ್ಸ್ ಟೈಮ್ಸ್ ಗೆ ತಿಳಿಸಿದ್ದಾರೆ.
ಜನರನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳೇ ಜನರಿಗಿಂತ ಹೆಚ್ಚಾಗಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಇರಾನ್ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಗಣ್ಯಾತಿಗಣ್ಯ ನಾಯಕರೇ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿದೆ.

ಆರೋಗ್ಯ ಮತ್ತು ವೈದ್ಯಕೀಯ ಸಚಿವರಿಗೆ ಕೊರೊನಾ ಸೋಂಕು
ಕಳೆದ ಫೆಬ್ರವರಿ.25ರಲ್ಲಿ ಇರಾನ್ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಇರಾಜ್ ಹರಿರ್ಚಿ ಅವರಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಇದರ ಜೊತೆಗೆ ಇರಾನ್ ನಲ್ಲಿರುವ 20ಕ್ಕೂ ಹೆಚ್ಚು ಶಾಸಕರಿಗೆ ಇಂದಿಗೂ ಸೋಂಕು ತಗಲಿದ್ದು, ಪ್ರತ್ಯೇಕ ವಾರ್ಡ್ ಗಳಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಇರಾನ್ ಬಿಕ್ಕಟ್ಟು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಇಸ್ಮಾಯಿಲ್ ನಜ್ಜರ್, ಕೂಡಾ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಇಬ್ಬರು ನಾಯಕರು ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಯುರೋಪ್ ರಾಷ್ಟ್ರಗಳಲ್ಲೂ ಗಣ್ಯ ನಾಯಕರಿಗೆ ಕೊರೊನಾ ಸೋಂಕು
ಇನ್ನು, ಫ್ರಾನ್ಸ್, ಇಂಗ್ಲೆಂಡ್, ಸ್ಪೇನ್, ಮತ್ತು ಇಟಲಿ ರಾಷ್ಟ್ರಗಳಲ್ಲಿ ಗಣ್ಯಾತಿಗಣ್ಯ ನಾಯಕರಿಗೆ ಸೋಂಕು ತಗಲಿರುವ ಬಗ್ಗೆ ತಿಳಿದು ಬಂದಿದೆ. ಕಳೆದ ಮಾರ್ಚ್.9ರಂದು ಫ್ರಾನ್ಸ್ ಸಂಸ್ಕೃತಿ ಸಚಿವ ಫ್ರಾಂಕ್ ರಿಯಾಸ್ಟರ್ ಗೆ ಕೊರೊನಾ ಸೋಂಕು ಇರುವುದು ಸ್ಪಷ್ಟವಾಗಿದೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಉಳಿದಂತೆ ಐವರು ನಾಯಕರಲ್ಲಿ ಸೋಂಕು ಪತ್ತೆಯಾಗಿರುವುದು ಸ್ಪಷ್ಟವಾಗಿದೆ.

ಕೊರೊನಾ ಸೋಂಕಿತರ ಪಟ್ಟಿಗೆ ಇಂಗ್ಲೆಂಡ್ ಆರೋಗ್ಯ ಸಚಿವ
ಮಾರ್ಚ್ ಮೊದಲ ವಾರ ನಡೆಸಿದ ತಪಾಸಣೆ ವೇಳೆಯಲ್ಲಿ ಇಂಗ್ಲೆಂಡ್ ಆರೋಗ್ಯ ಸಚಿವರ ನಾದಿನ್ ದೋರೀಸ್ ಅವರಿಗೂ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಇನ್ನು, ಸೋಂಕು ಪತ್ತೆಗೂ ಮುನ್ನ ನಾದಿನ್, ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಸೇರಿದಂತೆ ಪ್ರಮುಖ ನಾಯಕರ ಜೊತೆ ಚರ್ಚಿಸಿದ್ದರು ಎನ್ನಲಾಗಿದೆ. ಇನ್ನು, ನೆರೆಯ ರಾಷ್ಟ್ರ ಸ್ಪೇನ್ ನಲ್ಲಿ ವೋಕ್ಸ್ ಪಕ್ಷದ ಜನರಲ್ ಸೆಕ್ರಟರಿ ಜಾವಿಯರ್ ಅರ್ಟಿಗ್ ಸ್ಮಿತ್ ಕೂಡಾ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿದೆ.

ಇಟಲಿ ಬೆನ್ನು ಬಿಡದ ಕೊರೊನಾ ವೈರಸ್
ಚೀನಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ರಮೇಣ ನಿಯಂತ್ರಣಕ್ಕೆ ಬರುತ್ತಿದ್ದರೂ ಇಟಲಿಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ. ಕಳೆದ ಮಾರ್ಚ್.07ರಂದು ಇಟಾಲಿಯನ್ ಡೆಮಾಕ್ರಟಿಕ್ ಪಾರ್ಟಿಯ ಮುಖಂಡ ನಿಕೋಲಾ ಜಿಂಗರೆತ್ತಿ ತಮಗೆ ಕೊರೊನಾ ವೈರಸ್ ಸೋಂಕು ಇರುವ ಬಗ್ಗೆ ತಾವೇ ಫೇಸ್ ಬುಕ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು.

ಬ್ರೆಜಿಲ್ ಅಧ್ಯಕ್ಷರಿಗೂ ಸೋಂಕು ತಗಲಿರುವ ಅನುಮಾನ
ಇನ್ನು, ಬ್ರೆಜಿಲ್ ಅಧ್ಯಕ್ಷ ಬೋಲ್ಸಾನಾರೋ ಕೂಡಾ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಏಷಿಯಾದ ಎಡಿಟೋರಿಯನ್ ಡೈರೆಕ್ಟರ್ ಡ್ಯಾನಿಶ್.ಎಂ ಟ್ವೀಟ್ ಮಾಡಿದ್ದಾರೆ. ಬ್ರೆಜಿಲ್ ಅಧ್ಯಕ್ಷರಿಗೂ ಸೋಂಕು ಇರುವ ಲಕ್ಷಣಗಳು ಕಾಣಿಸಿಕೊಂಡಿದ್ದು, ಇದುವರೆಗೂ ಅಂತಿಮ ವರದಿ ಬಂದಿಲ್ಲ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಜನಪ್ರತಿನಿಧಿಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಅಧಿಕ!
ವಿಶ್ವದಲ್ಲಿನ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯನ್ನು ಗಮನಿಸಿದಾಗ ಸೋಂಕಿತರ ಸಂಖ್ಯೆಯಲ್ಲಿ ರಾಜಕಾರಣಿಗಳೇ ಹೆಚ್ಚು ಎಂದು ಹೇಳಲಾಗುತ್ತಿದೆ. ಏಕೆಂದರೆ, ಸಾಮಾನ್ಯವಾಗಿ ಅತಿಹೆಚ್ಚು ಜನರ ಜೊತೆಗೆ ಬೆರೆಯುವ, ಸಾರ್ವಜನಿಕರಿಗೆ ಶೇಕ್ ಹ್ಯಾಂಡ್ ಮಾಡುವ ನಾಯಕರಿಗೆ ಸೋಂಕು ಆದಷ್ಟು ಬೇಗ ಹರಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಿಯಮ ಜಾರಿಗೊಳಿಸುವ ನಾಯಕರೇ ಪಾಲಿಸುವುದಿಲ್ಲ
ಕೊರೊನಾ ವೈರಸ್ ಸೋಂಕು ಹರಡುತ್ತಿದ್ದ ಬೆನ್ನಲ್ಲೇ ನಿಯಂತ್ರಣಕ್ಕಾಗಿ ಸರ್ಕಾರಗಳು ಸಾಕಷ್ಟು ನಿಯಮಗಳನ್ನು ಜಾರಿಗೊಳಿಸಲಾಯಿತು. ಇದನ್ನು ಜಾರಿಗೊಳಿಸಿದ ನಾಯಕರೇ ಅವುಗಳನ್ನು ಪಾಲನೆ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ರಾಜಕಾರಣಿಗಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿತು ಎಂದು ತಜ್ಞರು ದೂರುತ್ತಿದ್ದಾರೆ.












Click it and Unblock the Notifications