‘ಕೊರೊನಾ’ ಕಂಟಕ ಮುಕ್ತಾಯ: ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ!
ಜಿನೀವಾ: ಅಂತೂ ಕೊರೊನಾ ಬಹುತೇಕ ತೊಲಗಿದೆ. 'ವಿಶ್ವ ಆರೋಗ್ಯ ಸಂಸ್ಥೆ' ಸಿಹಿಸುದ್ದಿ ತಿಳಿಸಿದ್ದು, ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಕೊನೆಯಾಗಿದೆ ಎಂದಿದೆ. ಬರೋಬ್ಬರಿ 3 ವರ್ಷಗಳ ನಂತರ ಎಲ್ಲವೂ ಸರಿದಾರಿಗೆ ಬಂದಂತಾಗಿದೆ. 68 ಲಕ್ಷ ಜನರ ಸಾವಿನೊಂದಿಗೆ ಕೊರೊನಾ ವೈರಸ್ ಬಹುತೇಕ ಕರಾಳ ಅಧ್ಯಾಯ ಮುಗಿಸಿದೆ. ಹಾಗಾದರೆ ಕೊರೊನಾ ವೈರಸ್ ಪೂರ್ತಿ ತೊಲಗಿದೆಯಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅದು 17 ನವೆಂಬರ್ 2019, ಯಾರಿಗೂ ತಿಳಿಯದ ವೈರಸ್ ಒಂದು ಚೀನಾದಲ್ಲಿ ಕಂಡುಬಂದಿತ್ತು. ಚೀನಾದ ವುಹಾನ್ ಜನರ ಮೇಲೆ ಮೊದಲು ದಾಳಿ ಮಾಡಿದ್ದ ಕೊರೊನಾ ನಂತರ ಜಗತ್ತಿಗೇ ಹರಡಿತ್ತು. ವುಹಾನ್ ಪ್ರಾಂತ್ಯದಲ್ಲಿ ಸಂಶಯಾಸ್ಪದ ವೈರಸ್ ಕಂಡ ಕೂಡಲೇ ಚೀನಾ ಲಾಕ್‌ಡೌನ್ ಹೇರಿ, ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿತ್ತು. ಆದರೆ ಅದ್ಯಾವುದೂ ವರ್ಕ್ ಆಗಲಿಲ್ಲ. ನೋಡ ನೋಡುತ್ತಲೇ ಜಗತ್ತಿಗೇ ವ್ಯಾಪಿಸಿದ ಕೊರೊನಾ ಸೋಂಕು, ಈವರೆಗೂ 68 ಲಕ್ಷಕ್ಕೂ ಹೆಚ್ಚು ಜನರನ್ನ ಬಲಿಪಡೆದಿದೆ. ಆದರೆ ಕೊನೆಗೂ 3 ವರ್ಷದ ನಂತರ ಮನುಷ್ಯರಿಗೆ ಸಿಹಿಸುದ್ದಿ ಸಿಕ್ಕಿದೆ.

ಕರಾಳ ಅದ್ಯಾಯ ಮುಕ್ತಾಯ?
'ವಿಶ್ವ ಆರೋಗ್ಯ ಸಂಸ್ಥೆ' ಈಗ ಘೋಷಣೆ ಮಾಡಿದಂತೆ ಕೊರೊನಾ ತುರ್ತು ಪರಿಸ್ಥಿತಿ ಮುಕ್ತಾಯವಾಗಿದೆ. ಆದರೆ ಕೊರೊನಾ ವೈರಸ್ ಸಂಪೂರ್ಣವಾಗಿ ತೊಲಗಿಲ್ಲ. ಹೀಗಾಗಿ ಈಗಲೂ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಕೊರೊನಾ ವೈರಾಣು ಇನ್ನೂ ಹಲವು ವರ್ಷಗಳ ಕಾಲ ಮನುಷ್ಯರ ನಡುವೆ ಇರುವುದು ಪಕ್ಕಾ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಹಿಂದೆ ಇದ್ದಷ್ಟು ಪ್ರಬಲತೆ ವೈರಸ್‌ಗೆ ಇಲ್ಲ, ಹೀಗಾಗಿ ತುರ್ತು ಪರಿಸ್ಥಿತಿ ಬದಲಾಗಿದೆ ಅಷ್ಟೇ. ಆದರೆ ಕೊರೊನಾ ಕಂಟಕ ಇದ್ದೇ ಇರುತ್ತದೆ, ಈ ಮೂಲಕ ಮುನ್ನೆಚ್ಚರಿಕೆ ವಹಿಸಿ ಜೀನ ನಡೆಸಬೇಕಿದೆ.
ಯಾವ ರೀತಿಯ ಲೆಕ್ಕಾಚಾರ?
'ವಿಶ್ವ ಆರೋಗ್ಯ ಸಂಸ್ಥೆ' ತಿಳಿಸಿರುವಂತೆ 2021ರ ಜನವರಿಯಲ್ಲಿ ವಾರಕ್ಕೆ 1 ಲಕ್ಷಕ್ಕಿಂತ ಹೆಚ್ಚು ಜನರು ಮೃತಪಡುತ್ತಿದ್ದರು. ಈ ಲೆಕ್ಕ ಈಗ ಏಪ್ರಿಲ್ 24ರ ಹೊತ್ತಿಗೆ 3500 ಕ್ಕೆ ಇಳಿಕೆಯಾಗಿದೆ. ಹೀಗಾಗಿ ಎಲ್ಲವನ್ನ ಅಳೆದು, ತೂಗಿ ಆರೋಗ್ಯ ತುರ್ತು ಪರಿಸ್ಥಿತಿ ಹಿಂಪಡೆಯಲು ವಿಶ್ವ ಆರೋಗ್ಯ ಸಂಸ್ಥೆ ತುರ್ತು ಸಭೆ ನಡೆಸಿತ್ತು. 15 ನೇ ಬಾರಿಗೆ ಸಭೆ ಸೇರಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು WHO ಮುಖ್ಯಸ್ಥರು ತಿಳಿಸಿದ್ದಾರೆ. ಅಮೆರಿಕದಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಹಿಂಪಡೆದು, ಕಡ್ಡಾಯ ಲಸಿಕೆ ನೀತಿಗೆ ಗುಡ್‌ಬೈ ಹೇಳಿದ ಕೆಲ ದಿನದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ನಿರ್ಧಾರ ಪ್ರಕಟಿಸಿದ್ದು ವಿಶೇಷ.

ನಲುಗಿದ್ದ ವಿಶ್ವದ ದೊಡ್ಡಣ್ಣ!
ಅಮೆರಿಕದ ಆಧುನಿಕ ಅಧ್ಯಾಯದಲ್ಲಿ ಕೊರೊನಾ ಬರೋದಕ್ಕೂ ಮೊದಲು ಒಂದು ಲೆಕ್ಕ. ಕೊರೊನಾ ನಂತರ ಮತ್ತೊಂದು ಲೆಕ್ಕ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಕೊರೊನಾ ವೈರಸ್ ಕೊಟ್ಟ ಪೆಟ್ಟು ಹಂಗಿತ್ತು. ಆರ್ಥಿಕವಾಗಿ & ಸಾಮಾಜಿಕವಾಗಿ ಇದೆಲ್ಲವನ್ನೂ ಮೀರಿ ಜೀವ ಉಳಿಸಿಕೊಂಡರೆ ಸಾಕಪ್ಪಾ ಅನ್ನುವಂತಹ ಪರಿಸ್ಥಿತಿ ಅಮೆರಿಕದಲ್ಲಿ ನಿರ್ಮಾಣ ಆಗಿತ್ತು. ಆದರೆ ಈಗ ಪರಿಸ್ಥಿತಿ ಹಿಡಿದಕ್ಕೆ ಸಿಕ್ಕಿದೆ, ಅಮೆರಿಕದಲ್ಲಿ ಕೆಲದಿನಗಳ ಹಿಂದಷ್ಟೇ ಕಡ್ಡಾಯ ಕೊರೊನಾ ಲಸಿಕೆ ನೀತಿ ಅಂತ್ಯವಾಗಿತ್ತು. ಅದಕ್ಕೂ ಮೊದಲು ಕೊರೊನಾ ತುರ್ತು ಪರಿಸ್ಥಿತಿ ಹಿಂದಪಡೆದಿತ್ತು ಅಮೆರಿಕ.
ಆರ್ಥಿಕವಾಗಿ ಹಿನ್ನಡೆ ಕಂಡ ಅಮೆರಿಕ
ಕೊರೊನಾ ಅಪ್ಪಳಿಸಿದ ಬಳಿಕ ಅನಿವಾರ್ಯ ಕಾರಣಗಳಿಂದ ಅಮೆರಿಕದಲ್ಲಿ ಉದ್ದಿಮೆಗಳು ಬಂದ್ ಆದವು. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡರು. ಅದೆಷ್ಟೋ ಜನರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಕೂಡ ಅಮೆರಿಕದ ಸರ್ಕಾರಕ್ಕೆ ಕಷ್ಟವಾಗಿತ್ತು. ಇದೆಲ್ಲದರ ಪರಿಣಾಮ ಅಮೆರಿಕದ ಆರ್ಥಿಕತೆ ಕುಸಿದಿದೆ. ಜಗತ್ತಿನ ಸೂಪರ್ ಪವರ್ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದ ರಾಷ್ಟ್ರಕ್ಕೆ ಭೀಕರ ಪರಿಸ್ಥಿತಿ ಎದುರಾಗಿದೆ. ಈ ಹೊತ್ತಲ್ಲೇ ಹೊಸ ಹುರುಪಿನೊಂದಿಗೆ ಅಮೆರಿಕ ತುರ್ತು ಪರಿಸ್ಥಿತಿ ಕೊನೆಗೊಳಿಸಿ, ಲಸಿಕೆ ಅವಲಂಬನೆ ಬಿಟ್ಟು ಹೊಸ ಅಧ್ಯಾಯ ಆರಂಭಿಸುತ್ತಿದೆ.
ಒಟ್ಟಾರೆ ಹೇಳುವುದಾದರೆ ಕೊರೊನಾ ಕಂಟಕ ಈ ಜಗತ್ತನ್ನು ಬಿಟ್ಟು ತೊಲಗುತ್ತಿದೆ. ಪರಿಸ್ಥಿತಿ ಹಿಡಿತಕ್ಕೆ ಸಿಕ್ಕರೂ ಮಹಾಮಾರಿ ಸೃಷ್ಟಿಸಿದ ಅವಾಂತರ ಸರಿಹೋಗಲು ಇನ್ನೂ ಹಲವು ದಶಕಗಳೇ ಬೇಕು. ಕೊರೊನಾ ವಕ್ಕರಿಸಿದ ನಂತರ ಇಡೀ ಜಗತ್ತು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮುಂದೆ ಏನಾಗಲಿದೆ ಎಂಬುದನ್ನ ಕಾದು ನೋಡಬೇಕು.












Click it and Unblock the Notifications