ಮಾಧ್ಯಮ ಲೋಕದಲ್ಲಿ ತಲ್ಲಣ, ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಸಂಸ್ಥೆಯಿಂದ 300 ಉದ್ಯೋಗ ಕಡಿತ | Washington Post
ಮಾಧ್ಯಮ ಲೋಕದಲ್ಲಿ ಮತ್ತೆ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ, ಅದರಲ್ಲೂ ಇಡೀ ಜಗತ್ತಿನಲ್ಲೇ ದೊಡ್ಡ ಮಟ್ಟಿಗೆ ಹೆಸರು ಮಾಡಿರುವ ದೈತ್ಯ ಮಾಧ್ಯಮ ಸಂಸ್ಥೆಗಳೇ ಇದೀಗ ಉದ್ಯೋಗ ಕಡಿತ ಮಾಡುತ್ತಿವೆ. ಈ ಪೈಕಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಒಡೆತನದ, ದಿ ವಾಷಿಂಗ್ಟನ್ ಪೋಸ್ಟ್ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಿ ಆದೇಶ ಹೊರಡಿಸಿದೆ. ಸುಮಾರು 800 ಪತ್ರಕರ್ತರ ಪೈಕಿ ದಿಢೀರ್ 300ಕ್ಕೂ ಹೆಚ್ಚು ಜನರನ್ನು ನ್ಯೂಸ್ ರೂಂ ಅಂಗಳದಿಂದ ಹೊರಹಾಕಿ ತಲ್ಲಣ ಸೃಷ್ಟಿ ಮಾಡಿದೆ. ಈ ಬಗ್ಗೆ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದು ಅಮೆರಿಕ ಮಾಧ್ಯಮ ಲೋಕದ ಉದ್ಯೋಗಿಗಳ ಸಂಕಷ್ಟ ಜಗತ್ತಿನ ಎದುರು ತೆರೆದುಕೊಳ್ಳುತ್ತಿದೆ.
ಅಮೆರಿಕದ ಪ್ರಬಲ ಸುದ್ದಿ ಪತ್ರಿಕೆಗಳಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ಕೂಡ ಒಂದಾಗಿದ್ದು, ದೊಡ್ಡ ಇತಿಹಾಸ ಕೂಡ ಹೊಂದಿದೆ. ಅಮೆರಿಕದ ಪ್ರಮುಖ ರಾಜಕೀಯ ಏಳುಬೀಳುಗಳ ಜೊತೆಗೆ ಇದೇ ದಿ ವಾಷಿಂಗ್ಟನ್ ಪೋಸ್ಟ್ ಬೆಳೆದು ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಂಕಷ್ಟ ಕೂಡ ಈ ಸಂಸ್ಥೆಯನ್ನ ಕಾಡುತ್ತಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಯಾವುದೇ ರೀತಿ ಅಧಿಕೃತ ಮಾಹಿತಿ ಇಲ್ಲ, ಹೀಗಿದ್ದಾಗ ಸಂಸ್ಥೆ ಉದ್ಯೋಗ ಕಡಿತದ ಬಗ್ಗೆ ಬೇರೆಯದ್ದೇ ವಿಚಾರವನ್ನು ಹೇಳುತ್ತಿದೆ. ಆಧುನಿಕ ಓದುಗರಿಗೆ ತೆರೆದುಕೊಳ್ಳಲು ಹೊಸ ಆಯಾಮ ಅಗತ್ಯತೆ ಬಗ್ಗೆ ಪ್ರಸ್ತಾಪಿಸಿ, ಹೊಸತನಕ್ಕಾಗಿ ಈ ನಿರ್ಧಾರ ಎನ್ನುತ್ತಿದೆ. ಅದರಲ್ಲೂ ಎಐ ಅಂದ್ರೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಂದ ನಂತರ ಉದ್ಯೋಗ ನಷ್ಟದ ಭೀತಿ ಹೆಚ್ಚಾಗುತ್ತಲೇ ಸಾಗಿದೆ.

ಸಂಸದ ಶಶಿ ತರೂರ್ ಪುತ್ರನಿಗೂ ಶಾಕ್
ದಿ ವಾಷಿಂಗ್ಟನ್ ಪೋಸ್ಟ್ ಇದೀಗ ವಜಾ ಮಾಡಿರುವ ಸುಮಾರು 300 ಉದ್ಯೋಗಿಗಳ ಪೈಕಿ, ಸಂಸದ ಶಶಿ ತರೂರ್ ಪುತ್ರ ಇಶಾನ್ ತರೂರ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ. ಸಾಮೂಹಿಕ ಉದ್ಯೋಗ ಕಡಿತದ ವೇಳೆ ವಜಾ ಆಗಿರುವ ವಿಚಾರವನ್ನು ಸ್ವತಃ ಇಶಾನ್ ತರೂರ್ ತಿಳಿಸಿದ್ದಾರೆ. ಅಲ್ಲದೆ ಈ ಸಮಯದಲ್ಲಿ ತಮ್ಮ ಸಹೋದ್ಯೋಗಿಗಳ ಸಂಕಷ್ಟ ಹಾಗೂ ಕೆಲಸ ಮಾಡುತ್ತಿದ್ದ ಜಾಗವನ್ನು ಹೀಗೆ ದಿಢೀರ್ ಬಿಟ್ಟು ಹೊರಡುವ ಅನಿವಾರ್ಯತೆ ಕುರಿತು ಕೂಡ ಅವರು ನೋವು ತೋಡಿಕೊಂಡಿದ್ದಾರೆ.
ಬೇಸರ ಹೊರ ಹಾಕಿದ ಇಶಾನ್ ತರೂರ್
ಸಂಸದ ಶಶಿ ತರೂರ್ ಪುತ್ರ ಇಶಾನ್ ತರೂರ್ ತಮ್ಮ ಎಕ್ಸ್ ಪೋಸ್ಟ್ ಮೂಲಕ ಈ ಸುದ್ದಿಯನ್ನು ಇಡೀ ಜಗತ್ತಿಗೆ ತಿಳಿಸಿದ್ದಾರೆ. ನ್ಯೂಸ್ ರೂಂ ಎಂದರೆ ಸುದ್ದಿ ಸಂಸ್ಥೆ ಕಚೇರಿ ಫೋಟೋ ಒಂದನ್ನ ಶೇರ್ ಮಾಡಿಕೊಂಡು, ಒಂದು ಕೆಟ್ಟ ದಿನ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಕುರಿತು, ಸಂಪೂರ್ಣ ವಿವರಣೆ ನೀಡಿರುವ ಅವರು ತಾವು ಹಾಗೂ ತಮ್ಮ ಜೊತೆಗೆ ಕೆಲಸ ಮಾಡುತ್ತಿದ್ದವರ ವಜಾ ಬಗ್ಗೆ ವಿವರಿಸಿದ್ದಾರೆ.












Click it and Unblock the Notifications