ತೈವಾನ್ ನೆಮ್ಮದಿಗೆ ಅಮೆರಿಕ ಬೆಂಕಿ ಇಟ್ಟಾಯ್ತು, ಈಗ ಫಿಲಿಪೈನ್ಸ್?
ಫಿಲಿಪೈನ್ಸ್: ನೆಮ್ಮದಿ ಇರುವ ಜಾಗದಲ್ಲಿ ಅಮೆರಿಕದ ಎಂಟ್ರಿಯಾದರೆ ಎಡವಟ್ಟು ಗ್ಯಾರಂಟಿ ಎಂಬುದು ಜನಜನಿತ ಆರೋಪ. ಈಗಲೂ ಅಷ್ಟೇ ಏಷ್ಯಾದಲ್ಲಿ ನಡೆಯುತ್ತಿರುವ ಕಿತ್ತಾಟ, ತಿಕ್ಕಾಟಗಳಿಗೆ ಅಮೆರಿಕ ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ತೈವಾನ್ ಜೊತೆ ಜಂಟಿ ಸಮರಾಭ್ಯಾಸ ನಡೆಸಿ ತೈವಾನ್ (Taiwan) ನೆಮ್ಮದಿ ಕೆಡಿಸಿತ್ತು ದೊಡ್ಡಣ್ಣ. ಇದೀಗ ಫಿಲಿಪೈನ್ಸ್ ಹಣೆಬರಹ ಸರಿಯಿಲ್ವಾ? ಅಂತಿದ್ದಾರೆ ನೆಟ್ಟಿಗರು.
ಅಮೆರಿಕ (America) ಸೇನೆ ಫಿಲಿಪೈನ್ಸ್ (Philippines) ಜೊತೆ ಸಮರಭ್ಯಾಸ ನಡೆಸಲಿದೆ. 17,000 ಸೈನಿಕರು ಸಮರಭ್ಯಾಸದಲ್ಲಿ ಭಾಗವಹಿಸಲಿದ್ದಾರೆ. ಈ ಪೈಕಿ 12,000 ಸೈನಿಕರು ಅಮೆರಿಕದಿಂದ ಬರುತ್ತಿರುವುದು ಬೆಂಕಿಗೆ ತುಪ್ಪ ಸುರಿದಿದೆ. ಏಕೆಂದರೆ ಈಗಾಗಲೇ ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಅಮೆರಿಕಕ್ಕೆ ಭೇಟಿ ನೀಡಿದ ನಂತರ ತೈವಾನ್ ಸುತ್ತ ಚೀನಾ ಸೇನೆ ಸುತ್ತುವರಿದು, ಸಮರಭ್ಯಾಸ ನಡೆಸಿ ಎಚ್ಚರಿಕೆ ನೀಡಿತ್ತು. ಈಗ ತೈವಾನ್‌ನಿಂದ ಕೂಗಳತೆ ದೂರದಲ್ಲಿರುವ ಫಿಲಿಪೈನ್ಸ್ ಜೊತೆ ಮಿಲಿಟರಿ ಅಭ್ಯಾಸಕ್ಕೆ ಅಮೆರಿಕ ಸಿದ್ಧವಾಗಿದೆ.

ಚೀನಾ ಸೇನೆ ಕೆಣಕುವ ಕೆಲಸ?
ಮೊದಲಿನಿಂದಲೂ ತೈವಾನ್ ಮೇಲೆ ಹಕ್ಕು ಸಾಧಿಸಲು ಚೀನಾ ಯತ್ನಿಸುತ್ತಲೇ ಬಂದಿದೆ. ಆದರೆ ಚೀನಾದ ಈ ಪ್ರಯತ್ನಕ್ಕೆ ತೈವಾನ್ ತಿರುಗೇಟು ನೀಡುತ್ತಿದ್ದು, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಚೀನಾದ ಶತ್ರುಗಳ ಜೊತೆಗೆ ಸಂಬಂಧ ಬೆಳೆಸುತ್ತಿದೆ. ಅದರಲ್ಲೂ ಅಮೆರಿಕದ ಜೊತೆಗೆ ತೈವಾನ್ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವುದು ಚೀನಾ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಇಷ್ಟಲ್ಲಾ ಘಟನೆ ನಡೆದು ಒಂದೆರಡು ದಿನಗಳು ಕಳೆದಿವೆ ಅಷ್ಟೇ, ಅಷ್ಟರಲ್ಲಾಗಲೇ ಅಮೆರಿಕ ಮತ್ತೆ ಚೀನಾ ಸೇನೆಯನ್ನ ಕೆಣಕುವ ಕೆಲಸಕ್ಕೆ ಕೈಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ.
10 ನೌಕೆ, 70 ಯುದ್ಧ ವಿಮಾನ!
ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಅಮೆರಿಕ ತಲುಪಿ ಒಂದಷ್ಟು ಗಂಟೆ ಕಳೆದಿತ್ತು ಅಷ್ಟೇ, ಅಷ್ಟರಲ್ಲೇ ತನ್ನ ನೆರೆ ರಾಷ್ಟ್ರಕ್ಕೆ ಪಾಠ ಕಲಿಸಲು ಚೀನಾ ಸಿದ್ಧವಾಗಿತ್ತು. 10 ಯುದ್ಧ ನೌಕೆಗಳು ಹಾಗೂ 70ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ತೈವಾನ್ ಸುತ್ತಲೂ ನಿಯೋಜಿಸಿ ಚೀನಾ ಮಿಲಿಟರಿ ಸಮರಾಭ್ಯಾಸ ಆರಂಭಿಸಿತ್ತು. ನೂರಾರು ಮಿಸೈಲ್ ಹಾಗೂ ಲೆಕ್ಕವಿಲ್ಲದಷ್ಟು ಗುಂಡುಗಳು ತೈವಾನ್ ಸುತ್ತಲೂ ಸದ್ದು ಮಾಡುತ್ತಾ ಯುದ್ಧದ ಭೀತಿ ಆವರಿಸುವಂತೆ ಮಾಡಿತ್ತು ಚೀನಾ. ಈಗಷ್ಟೇ ಆ ಸಮಸ್ಯೆ ಬಗೆಹರಿದಿದ್ದು, ಈಗ ಹೊಸ ಸಮಸ್ಯೆ ತಲೆದೂರುವ ಸಾಧ್ಯತೆ ದಟ್ಟವಾಗಿದೆ.

ಇಂಡೋ-ಪೆಸಿಫಿಕ್ ಮೇಲೆ ಕಣ್ಣು!
ಅಮೆರಿಕದ ಜೊತೆಗೆ ಜಂಟಿ ಸಮರಭ್ಯಾಸ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿರುವ ಫಿಲಿಪೈನ್ಸ್, ಇಂಡೋ-ಪೆಸಿಫಿಕ್ ಭಾಗ ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಮುಕ್ತವಾಗಿದೆ ಎಂಬುದನ್ನು ತೋರಿಸಲು ಈ ಜಂಟಿ ಸಮರಭ್ಯಾಸ ಆಯೋಜಿಸಲಾಗಿದೆ ಎಂದಿದೆ. ಈ ಮೂಲಕ ಚೀನಾ ನೆರೆಯ ರಾಷ್ಟ್ರವೊಂದು, ಡ್ರ್ಯಾಗನ್ ಸೇನೆಯ ವಿರುದ್ಧ ತೊಡೆತಟ್ಟಿದೆ. ಆದರೆ ಈವರೆಗೂ ಚೀನಾ ಈ ಬೆಳವಣಿಗೆ ಕುರಿತು ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ.
ಕೈಕೊಟ್ಟ ಫ್ರಾನ್ಸ್ ಅಧ್ಯಕ್ಷ!
ಒಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ತೊಡೆತಟ್ಟಿ ನಿಂತಿದೆ, ಇನ್ನೊಂದು ಕಡೆ ತೈವಾನ್ ವಿರುದ್ಧ ಯುದ್ಧ ಆರಂಭಿಸಲು ಚೀನಾ ಕೂಡ ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ ಮತ್ತೊಂದು ಮಹಾಯುದ್ಧಕ್ಕೆ ಜಗತ್ತು ಸಜ್ಜಾದಂತೆ ಭಾಸವಾಗುತ್ತಿದೆ. ಅಕಸ್ಮಾತ್ ತೈವಾನ್ ವಿರುದ್ಧ ಚೀನಾ ಯುದ್ಧ ಆರಂಭಿಸಿದ್ದೇ ಆದರೆ ಅಮೆರಿಕ ಸುಮ್ಮನೆ ಕೂರುವುದಿಲ್ಲ. ಹೀಗೆ ಕೋಳಿ ಜಗಳ 3ನೇ ಮಹಾಯುದ್ಧವಾಗಿ ಬದಲಾದರೂ ಅಚ್ಚರಿ ಪಡಬೇಕಿಲ್ಲ. ಮತ್ತೊಂದು ಕಡೆ ಫ್ರಾನ್ಸ್ ಅಧ್ಯಕ್ಷ ಚೀನಾ ಪರ ಮಾತನಾಡಿರುವುದು ಅಮೆರಿಕನ್ನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.












Click it and Unblock the Notifications