Fungus: ಅಮೆರಿಕದಲ್ಲಿ ಮಾರಣಾಂತಿಕ ಫಂಗಸ್ ಹಾವಳಿ, ಮಾನವನಿಗೆ ಎದುರಾಯ್ತಾ ಕಂಟಕ?
ಇಡೀ ಜಗತ್ತು ಒಂದಲ್ಲ ಒಂದು ಸಮಸ್ಯೆಯನ್ನ ಎದುರಿಸುತ್ತಿದೆ. ಒಂದು ಕಡೆ ಪ್ರಾಕೃತಿಕ ವಿಕೋಪಗಳು ಜನರನ್ನ ಕಂಗೆಡಿಸಿದ್ದರೆ, ಕೊರೊನಾ ಬಳಿಕ ಚಿತ್ರ ವಿಚಿತ್ರ ರೋಗಗಳು ಮಾನವ ಕುಲಕ್ಕೆ ಕಂಟಕವಾಗುತ್ತಿವೆ. ಈಗಾಗಲೇ ಹೆಮ್ಮಾರಿ ಕೊರೊನಾ ಕಾರಣಕ್ಕೆ ಲಕ್ಷಾಂತರ ಜನರನ್ನ ಕಳೆದುಕೊಂಡಿರುವ ಅಮೆರಿಕದಲ್ಲಿ ಮತ್ತೊಂದು ಭಯ ಶುರುವಾಗಿದೆ.
ಅದೇನೆಂದರೆ ಶಿಲೀಂಧ್ರ ಅಥವಾ ಫಂಗಸ್ ಒಂದರ ಭಯಾನಕ ಹಾವಳಿಯ ಬಗ್ಗೆ ಅಮೆರಿಕದ ಆರೋಗ್ಯಾಧಿಕಾರಿಗಳು ನೀಡಿರುವ ವರದಿ ಅಮೆರಿಕನ್ನರನ್ನು ಮಾತ್ರವಲ್ಲ ಇಡೀ ಜಗತ್ತನ್ನೇ ಕಂಗೆಡಿಸಿದೆ. ಕೊರೊನಾ ಸಂದರ್ಭದಲ್ಲಿ ಬ್ಲ್ಯಾಕ್ ಫಂಗಸ್, ಎಲ್ಲೋ ಫಂಗಸ್ ಹಾವಳಿ ಕಂಡು ಭಯಗೊಂಡಿದ್ದ ಜನರಿಗೆ ಮತ್ತೊಮ್ಮೆ ಇಂತಹದ್ದೇ ಆತಂಕ ಎದುರಾಗಿದೆ.

ಕ್ಯಾಂಡಿಡಾ ಔರಿಸ್ ಅಥವಾ ಸಿ. ಔರಿಸ್ ಎಂದು ಕರೆಯಲ್ಪಡುವ ಅತ್ಯಂತ ಅಪಾಯಕಾರಿ ಶಿಲೀಂಧ್ರದ ಬಗ್ಗೆ CDC ಅಥವಾ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ಹೊಸ ಮತ್ತು ಅಪಾಯಕಾರಿ ಶಿಲೀಂಧ್ರವು ವೇಗವಾಗಿ ಹರಡುತ್ತಿವುದು ಗಮನಕ್ಕೆ ಬಂದಿತ್ತು.
ಇದಾದ ಬಳಿಕ ಹೆಚ್ಚಿನ ಸಂಶೋಧನೆಗಳನ್ನು ನಡೆಸಿದಾಗ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಅಧಿಕಾರಿಗಳು ಬೆಚ್ಚಿಬೀಳಿಸುವ ಸಂಗತಿಯನ್ನು ಮನಗಂಡಿದ್ದಾರೆ. ಅಂದಹಾಗೆ ಕ್ಯಾಂಡಿಡಾ ಔರಿಸ್ ಅಥವಾ ಸಿ. ಔರಿಸ್ ಎಂದು ಕರೆಯಲ್ಪಡುವ ಈ ಶಿಲೀಂಧ್ರ ಅಥವಾ ಫಂಗಸ್ ಔಷಧ-ನಿರೋಧಕ ಎನ್ನಲಾಗುತ್ತಿದೆ. ಅಂದರೆ ಈಗ ಮಾನವನ ಬಳಿಯಿರುವ ಔಷಧಗಳಿಂದ ಕ್ಯಾಂಡಿಡಾ ಔರಿಸ್ ಫಂಗಸ್ ಕಂಟ್ರೋಲ್ ಮಾಡುವುದೇ ಕಷ್ಟವಂತೆ.
ಸೋಂಕಿನ ಹಾವಳಿ ತೀವ್ರ
ಅಮೆರಿಕದಲ್ಲಿ ತೀವ್ರವಾಗಿ ಹರಡುತ್ತಿರುವ ಈ ಫಂಗಸ್ ಈಗಾಗಲೇ ಹಲವರನ್ನು ಅನಾರೋಗ್ಯಕ್ಕೆ ದೂಡಿದೆ. ಸೂಕ್ತ ಔಷಧ ಇಲ್ಲದ ಕಾರಣ ಮತ್ತಷ್ಟು ಜನರಿಗೆ ಈ ಶಿಲೀಂಧ್ರ ಹರಡುವ ಭೀತಿಯೂ ಎದುರಾಗಿದೆ. ಪ್ರತಿ ವರ್ಷ ಈ ಶಿಲೀಂಧ್ರ ಸಂಬಂಧಿತ ಸೋಂಕು ಹೆಚ್ಚುತ್ತಲೇ ಸಾಗಿದ್ದು, 2021ರ ನಂತರ ಸಾಕಷ್ಟು ವೇಗವಾಗಿ ಈ ಫಂಗಸ್ ಹರಡುತ್ತಿದೆ ಎನ್ನಲಾಗಿದೆ.
ಜಗತ್ತಿಗೆ ಮಹಾಮಾರಿ ಕೊರೊನಾ ಹರಡಿದ್ದ ಸಂದರ್ಭದಲ್ಲಿ ಜನರು ಹೀಗೆ ಫಂಗಸ್ ಅಥವಾ ಶಿಲೀಂಧ್ರದ ಹಾವಳಿಗೆ ಬೆಚ್ಚಿಬಿದ್ದಿದ್ದರು. ಅದಾದ ಬಳಿಕ ಒಂದಷ್ಟು ನಿಟ್ಟುಸಿರು ಬಿಡುವ ಹೊತ್ತಿಗೆ ಮತ್ತೆ ಕ್ಯಾಂಡಿಡಾ ಔರಿಸ್ ತನ್ನ ಹಾವಳಿ ಶುರುವಿಟ್ಟುಕೊಂಡಿದೆ.
ಹೆಚ್ಚಿನ ಸಂಶೋಧನೆ ಶುರು
ಕ್ಯಾಂಡಿಡಾ ಔರಿಸ್ ಪ್ರಕರಣಗಳು ಹೆಚ್ಚುತ್ತಿರುವ ಸಂಗತಿಯನ್ನು ಅಮೆರಿಕದ ಆರೋಗ್ಯ ಇಲಾಖೆ ಹಾಗೂ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಈಗಾಗಲೇ ಹೆಚ್ಚಿನ ಸಂಶೋಧನೆ ಕೂಡ ಸಾಗಿದ್ದು ಸೂಕ್ತ ಮದ್ದು ಹುಡುಕಲು ಕಾರ್ಯಾರಂಭವಾಗಿದೆ.
ಇತರ ದೇಶಗಳು ಕೂಡ ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮಾಹಿತಿ ರವಾನಿಸಲಾಗಿದ್ದು, ಕೊರೊನಾ ಸೋಂಕಿನ ಹಾವಳಿ ಮತ್ತೆ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಜಗತ್ತಿಗೆ ಮತ್ತೊಂದು ಶಾಕ್ ಸಿಕ್ಕಂತಾಗಿದೆ.
ಮಾನವನಿಗೆ ಎದುರಾಯ್ತಾ ಕಂಟಕ?
ಕ್ಯಾಂಡಿಡಾ ಔರಿಸ್ ಅಥವಾ ಸಿ. ಔರಿಸ್ ಎಂದು ಕರೆಯಲ್ಪಡುವ ಫಂಗಸ್ ಔಷಧ-ನಿರೋಧಕ ಎನ್ನಲಾಗುತ್ತಿದೆ. ಅಂದರೆ ಈಗ ಮಾನವನ ಬಳಿಯಿರುವ ಔಷಧಗಳಿಂದ ಕ್ಯಾಂಡಿಡಾ ಔರಿಸ್ ಫಂಗಸ್ ಕಂಟ್ರೋಲ್ ಮಾಡುವುದೇ ಕಷ್ಟವಂತೆ. ಈ ಬಗ್ಗೆ ಅಮೆರಿಕದ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಸಂಶೋಧನೆಗೆ ಮುಂದಾಗಿದ್ದಾರೆ ಎನ್ನುವುದು ಲೇಟೆಸ್ಟ್ ಮಾಹಿತಿ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸ್ಪಷ್ಟತೆ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications